ಬೆಂಗಳೂರು: ನಟ ಯುವರಾಜ್ ಕುಮಾರ್ – ಶ್ರೀದೇವಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದು, ಯುವರಾಜ್ ಕುಮಾರ್ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಶ್ರೀದೇವಿ ಭೈರಪ್ಪ ಅವರಿಗೆ ನೋಟಿಸ್ ಜಾರಿಯಾಗಿದ್ದು, ಈ ಬಗ್ಗೆ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
“ಏನಾಗಿದೆ ಎನ್ನುವುದು ಚಿತ್ರರಂಗ ಹಾಗೂ ಮಾಧ್ಯಮದಲ್ಲಿ ಅನೇರಿಕಗೆ ತಿಳಿದಿದೆ. ಈ ಬಗ್ಗೆ ಬಂದ ಲೀಗಲ್ ನೋಟಿಸ್ ಗೆ ನಾನು ಈಗಾಗಲೇ ಉತ್ತರಿಸಿದ್ದೇನೆ. ವಿಚ್ಚೇದನ ಪ್ರತಿ ಇನ್ನೂ ಕೂಡ ನನ್ನ ಕೈಗೆ ತಲುಪಿಲ್ಲ. ನೋಟಿಸ್ ಸಿಕ್ಕ ಬಳಿಕ ನಾನು ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಈ ಬಗ್ಗೆ ಸದ್ಯಕ್ಕೆ ನಾನೇನು ಮಾತನಾಡುವ ಸ್ಥಿತಿಯಲಿಲ್ಲ. ಎಲ್ಲರೂ ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತೀರಾ ಎಂದು ಭಾವಿಸುತ್ತೇನೆ” ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಜೂ.6 ರಂದು ಯುವರಾಜ್ ಕುಮಾರ್ ಫ್ಯಾಮಿಲಿ ಕೋರ್ಟಿನಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕೋರ್ಟಿನಿಂದ ಶ್ರೀದೇವಿ ಭೈರಪ್ಪ ಅವರಿಗೆ ನೋಟಿಸ್ ಜಾರಿಯಾಗಿದೆ. ಜುಲೈ 4 ರಂದು ಫ್ಯಾಮಿಲಿ ಕೋರ್ಟಿನಲ್ಲಿ ಈ ಬಗ್ಗೆ ವಿಚಾರಣೆ ನಡೆಯಲಿದೆ ಎಂದು ವರದಿಯಾಗಿದೆ.
ಯುವರಾಜ್ ಕುಮಾರ್ 2019 ರಲ್ಲಿ ಮೈಸೂರು ಮೂಲದ ಶ್ರೀದೇವಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಕಳೆದ ಕೆಲ ತಿಂಗಳಿನಿಂದ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಶ್ರೀದೇವಿ ಉನ್ನತ ಶಿಕ್ಷಣದ ವ್ಯಾಸಂಗಕ್ಕಾಗಿ ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.