Advertisement

Yuva Review: ಮಾಸ್‌ ಅಡ್ಡದಲ್ಲಿ ಯುವ ರೈಡ್‌

09:53 AM Mar 30, 2024 | Team Udayavani |

ಆತ ಮುಂಗೋಪಿ. ಹೊಡೆದಾಟ ಎಂದರೆ ಹಿಂದೆ-ಮುಂದೆ ನೋಡೋ ವ್ಯಕ್ತಿಯಲ್ಲ. ನುಗ್ಗಿ ಹೊಡೆಯೋದೇ… ಇಂತಹ ರಫ್ ಅಂಡ್‌ ಟಫ್ ಹುಡುಗ ನೋಡ ನೋಡುತ್ತಲೇ ಮೃದುವಾಗುತ್ತಾನೆ. ಕೋಪವನ್ನು ನಿಯಂತ್ರಿಸಿಕೊಳ್ಳುತ್ತಾನೆ, ಗುರಿಮುಟ್ಟುವ ಹಾದಿಯಲ್ಲಿ ಹೆಜ್ಜೆ ಹಾಕುತ್ತಾನೆ. ಅಷ್ಟಕ್ಕೂ ಇಂತಹ ಬದಲಾವಣೆಗೆ ಕಾರಣವೇನು ಎಂಬ ಕುತೂಹಲ ನಿಮಗಿದ್ದರೆ ನೀವು “ಯುವ’ ನೋಡಬಹುದು.

Advertisement

“ಯುವ’ ಹೆಸರಿಗೆ ತಕ್ಕಂತೆ ಯೂತ್‌ಫ‌ುಲ್‌ ಸಿನಿಮಾ. ಕಾಲೇಜು ಕ್ಯಾಂಪಸ್‌ನಿಂದ ಆರಂಭವಾಗುವ ಕಥೆ ಮುಂದೆ ಜೀವನದ ಪಾಠ ಹೇಳುವಲ್ಲಿಗೆ ಬಂದು ನಿಲ್ಲುತ್ತದೆ. ನಿರ್ದೇಶಕ ಸಂತೋಷ್‌ ಆನಂದರಾಮ್‌ ಸಿನಿಮಾ ಎಂದರೆ ಅಲ್ಲೊಂದಿಷ್ಟು ಸೆಂಟಿಮೆಂಟ್‌ಗೆ ಅವಕಾಶವಿರುತ್ತದೆ, ಜೊತೆಗೆ ಒಂದಷ್ಟು ಮಾಸ್‌ ಡೈಲಾಗ್‌ಗಳಿಗೆ ಕೊರತೆ ಇರುವುದಿಲ್ಲ. ಅದರಲ್ಲೂ ತಂದೆ-ಮಗ ಸೆಂಟಿಮೆಂಟ್‌ ಎಂದರೆ ಅವರಿಗೆ ಅಚ್ಚುಮೆಚ್ಚು. ಅದನ್ನು ಈ ಸಿನಿಮಾ ದಲ್ಲೂ ಬಳಸಿಕೊಂಡಿದ್ದಾರೆ. ಮಾಸ್‌ ನಿಂದ ಆರಂಭವಾಗಿ ಕ್ಲಾಸ್‌ ಆಗಿ ಕೊನೆಗೊಳ್ಳುವ ಒಂದು ಸರಳ ಕಥೆಯನ್ನು ಹೇಳಿದ್ದಾರೆ.  ಇಲ್ಲಿ ಯುವ ಜನರ ಕನಸು, ಪ್ರೀತಿ, ಕಿಚ್ಚು, ತಂದೆ-ಮಗ ಬಾಂಧವ್ಯ ಎಲ್ಲವೂ ಇದೆ.

ಸಿನಿಮಾದ ಆರಂಭ ಮಂಗಳೂರಿನ ಕಾಲೇಜಿನಿಂದ ಆಗುತ್ತದೆ. ಇಲ್ಲಿ ಹೊಡೆದಾಟ, ಬಡಿದಾಟಗಳದ್ದೇ ಕಾರುಬಾರು. ಸಣ್ಣಸಣ್ಣ ವಿಷಯಗಳಿಗೂ ನಾಯಕ ಎದುರಾಳಿಗಳ ರಕ್ತಚಿಮ್ಮುವಂತೆ ಹೊಡೆಯುತ್ತಾನೆ. ಕಾಲೇಜು ಕಿರಿಕ್‌ಗಳು ಇಷ್ಟೊಂದು ರಕ್ತಪಾತಕ್ಕೆ ಕಾರಣವಾಗುತ್ತಾ ಎಂಬ ಪ್ರಶ್ನೆ ಬಂದರೂ ಬರಬಹುದು. ಆದರೆ, ಇದು ಕಮರ್ಷಿಯಲ್‌ ಸಿನಿಮಾ, ನೋ ಲಾಜಿಕ್‌, ಓನ್ಲಿ ಮ್ಯಾಜಿಕ್‌! ಇಲ್ಲಿ ನಾಯಕ ಯುವ ಅವರಿಗೆ ಮಾಸ್‌ ಇಮೇಜ್‌ ಕೊಡುವ ನಿರ್ದೇಶಕರ “ಉದ್ದೇಶ’ ಎದ್ದು ಕಾಣುತ್ತದೆ. ಅದೇ ಕಾರಣದಿಂದ ಇಡೀ ಸಿನಿಮಾದಲ್ಲಿ ಒಂದೇ ಒಂದು ದೃಶ್ಯದಲ್ಲೂ ನಾಯಕ ನಗುವುದಿಲ್ಲ. ಆ ಮಟ್ಟಿಗೆ “ರಫ್ ಅಂಡ್‌ ಟಫ್’!

ಮಂಗಳೂರು ಮಂದಿ ಮಾತು ಮಾತಿಗೆ “ಬೇವರ್ಸಿ’ ಎಂಬ ಪದವನ್ನು ಬಳಸುತ್ತಾರೆಂದು ನಿರ್ದೇ ಶಕರಿಗೆ ಅದ್ಯಾರು ಹೇಳಿದ್ದಾರೋ ಗೊತ್ತಿಲ್ಲ, ಈ ಸಿನಿಮಾ ದಲ್ಲಂತೂ ಮಂಗಳೂರು ಹಿನ್ನೆಲೆಯ ಪಾತ್ರಗಳು ಅದೆಷ್ಟೂ ಬಾರಿ “ಬೇವರ್ಸಿ’ ಎಂಬ ಪದ ಬಳಸಿವೆಯೋ ಲೆಕ್ಕವಿಲ್ಲ. ಅದಕ್ಕೆ ಸಾಥ್‌ ನೀಡಲು ಆಗಾಗ “ಅಡಬೆ’ಯೂ ಬಂದು ಹೋಗುತ್ತದೆ.

ಇನ್ನು, ಸಿನಿಮಾದ ಮೂಲಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿ ನಾಯಕನಲ್ಲದ ಬದಲಾವಣೆ, ಆತ ಎದುರಿಸುವ ಸಂದಿಗ್ಧತೆ, ಆತನ ಕನಸು, ಕುಸ್ತಿ… ಎಲ್ಲವೂ ಬಂದು ಹೋಗುತ್ತದೆ. ಈ ಅವಧಿಯಲ್ಲಿ ನಿರ್ದೇಶಕರು ಒಂದಷ್ಟು ದೃಶ್ಯಗಳನ್ನು ಪಾಸಿಂಗ್‌ ಶಾಟ್‌ ನಲ್ಲೇ ಮುಗಿಸಿದ್ದಾರೆ. ಆದರೆ, ಇಲ್ಲೂ ಸೆಂಟಿಮೆಂಟ್‌ ದೃಶ್ಯಗಳಿಗೆ ಕೊಡಬೇಕಾದ ಮಹತ್ವ ಕೊಟ್ಟಿದ್ದಾರೆ. ಜೊತೆಗೆ ಕ್ಲಾಸ್‌ ಆಡಿಯನ್ಸ್‌ಗೆ ಇಷ್ಟವಾಗುವ ಹಲವು ದೃಶ್ಯಗಳು ಇಲ್ಲಿವೆ. ಮಾಸ್‌-ಕ್ಲಾಸ್‌ ಪ್ಯಾಕೇಜ್‌ ಸಿನಿಮಾವಾಗಿ “ಯುವ’ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.

Advertisement

ನಾಯಕ ನಟ ಯುವ ಮೊದಲ ಚಿತ್ರದಲ್ಲೇ ಮಾಸ್‌ ಆಗಿ ಎಂಟ್ರಿಕೊಟ್ಟಿದ್ದಾರೆ. ಚಿತ್ರದಲ್ಲಿ ಬರುವ ಮಾಸ್‌, ಫೈಟ್‌ ದೃಶ್ಯಗಳಲ್ಲಿ ಹಾಗೂ ಡ್ಯಾನ್ಸ್‌ನಲ್ಲಿ ಹೆಚ್ಚು ಗಮನ ಸೆಳೆಯುವ ಯುವ, ಸೆಂಟಿಮೆಂಟ್‌ ದೃಶ್ಯಗಳಲ್ಲಿ ಇನ್ನೊಂದಿಷ್ಟು ಪಳಗಬೇಕು. ಉಳಿದಂತೆ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ನಾಯಕಿ ಸಪ್ತಮಿ ಗೌಡಗೆ ಇಲ್ಲಿ ತುಂಬಾ ಗಮನ ಸೆಳೆಯುವ ಪಾತ್ರವೇನು ಇಲ್ಲ. ತಂದೆಯಾಗಿ ನಟಿಸಿರುವ ಅಚ್ಯುತ್‌ ಕುಮಾರ್‌ ಪಾತ್ರದಲ್ಲೊಂದು ಫೀಲ್‌ ಇದೆ. ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣವ್‌ ಕ್ಷೀರಸಾಗರ್‌ ಗಮನ ಸೆಳೆಯುತ್ತಾರೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಸುಧಾರಾಣಿ, ಹಿತ ನಟಿಸಿದ್ದಾರೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next