ಕುಮಟಾ: ಇದ್ದ ಹಂಚಿನ ಮುರುಕಲು ಮನೆಯನ್ನೂ ಅತಿವೃಷ್ಠಿಯಿಂದಾಗಿ ಕಳೆದುಕೊಂಡು ದಿಕ್ಕಿಲ್ಲದೇ ಕೂತಿದ್ದ ವೃದ್ಧೆಗೆ ಯುವಾ ಬ್ರಿಗೇಡ್ ನೆರವಾಗಿದೆ. ತನ್ನಿಬ್ಬರು ಬೌದ್ಧಿಕವಾಗಿ ಸವಾಲಿಗೊಳಗಾಗಿರುವ ಮಕ್ಕಳೊಂದಿಗೆ ಜೋಪಡಿಯಲ್ಲಿ ದಿನ ದೂಡುತ್ತಿದ್ದ ವೃದ್ಧೆ ಈಗ ಅಂದದ ಮನೆ ಗೃಹಪ್ರವೇಶ ಮಾಡಿದ್ದಾರೆ.
2019ರಲ್ಲಿ ಸುರಿದ ಧಾರಾಕಾರ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ನದಿ- ತೊರೆಗಳು ತುಂಬಿ ಹರಿದಿದ್ದವು. ನೆರೆ ಹಾವಳಿ ಉಂಟಾಗಿ ಹಲವು ಕಡೆಗಳಲ್ಲಿ ಜನ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದರು. ಅದೇ ರೀತಿ ತಾಲೂಕಿನ ಹೆಗಡೆಯಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಸುಮಾರು 70 ವರ್ಷದ ವೃದ್ಧೆ ಮಹಾದೇವಿ ಗೌಡರ ಮನೆಯ ಮೇಲೆ ಮರವೊಂದು ಮುರಿದು ಬಿದ್ದು ಇದ್ದ ಹಂಚಿನ ಮುರುಕಲು ಮನೆ ಕೂಡ ಭಾಗಶಃ ಧರಾಶಾಹಿಯಾಗಿ ಅಕ್ಷರಶಃ ದಿಕ್ಕಿಲ್ಲದೇ ಕೂತಿದ್ದರು.
ಒಂದು ಕಡೆ ವಯಸ್ಸಾಗಿ ದುಡಿಯುವ ಶಕ್ತಿ ಕುಂದುತ್ತಿದ್ದರೂ, ಬೌದ್ಧಿಕವಾಗಿ ಸವಾಲಿಗೊಳಗಾಗಿರುವ ಇಬ್ಬರು ಮಕ್ಕಳನ್ನು ಸಾಕುವ ಜವಾಬ್ದಾರಿ ಈಕೆಯ ಮೇಲೆ. ಹೀಗಾಗಿ ಅಲ್ಲಿ ಇಲ್ಲಿ ಏನೋ ಕೆಲಸ ಮಾಡಿ ದಿನಕ್ಕಾಗುವಷ್ಟು ಹಣ ಹೊಂದಿಸಿಕೊಂಡು ಬಂದು ಮಕ್ಕಳನ್ನು ಸಲುಹುತ್ತಿದ್ದಾಕೆಗೆ ಮನೆ ಮುರಿದು ಬಿದ್ದದ್ದು ಬರ ಸಿಡಿಲು ಬಡಿದಂತಾಗಿತ್ತು. ಬಿದ್ದ ಮನೆಯ ಹೆಂಚು, ಮರದ ರೀಪುಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಅಲ್ಲೇ ಇನ್ನಷ್ಟು ಮರದ ದಬ್ಬೆ, ಇತರ ವಸ್ತುಗಳನ್ನೇ ಆಧಾರವನ್ನಾಗಿ ಕೊಟ್ಟು ಒಂದು ತಾತ್ಕಾಲಿಕ ಜೋಪಡಿ ಕಟ್ಟಿಕೊಂಡಿದ್ದರು. ವಿಷಯ ತಿಳಿದ ಸ್ಥಳೀಯ ಕೆಲವರು ಜೋಪಡಿಗೆ ತಗಡಿನ ಹೊದಿಕೆ ಮಾಡಿಕೊಟ್ಟಿದ್ದರು.
ಈ ವಿಷಯ ಯುವಾ ಬ್ರಿಗೇಡ್ ಕಾರ್ಯಕರ್ತರಿಗೆ ತಿಳಿದು, ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಬಳಿಕ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ತಿಳಿಸಿದಾಗ ಹೊಸದಾಗಿ ಮನೆ ನಿರ್ಮಿಸಿಕೊಡಲು ಯೋಜನೆ ರೂಪಿಸಲಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಕಾರ್ಯಕರ್ತರು, ಒಂದಷ್ಟು ದಾನಿಗಳಿಂದ ಮನೆ ನಿರ್ಮಾಣಕ್ಕೆ ಬೇಕಾದ ವಸ್ತುಗಳನ್ನೆಲ್ಲ ದೇಣಿಗೆಯಾಗಿ ಪಡೆದರು.
ಭಾಗಶಃ ಬಿದ್ದಿದ್ದ ಮನೆಯ ಪೂರ್ಣ ಭಾಗವನ್ನು ತೆರವುಗೊಳಿಸಿದರು. ಕಾರ್ಯಕರ್ತರೇ ಸೇರಿಕೊಂಡು ಮನೆಯ ಅಡಿಪಾಯ ತೆಗೆದರು. ಅಡಿಪಾಯಕ್ಕೆ ಮಣ್ಣು ತುಂಬುವ ಕೆಲಸ ಮಾಡಿದರು. ಅಂಗಳ ಮಾಡಿದರು. ಸ್ಥಳೀಯ ಮೇಸ್ತ್ರಿಗಳಿಂದ ಕಲ್ಲು ಕಟ್ಟಿಸಿ, ಗಿಲಾಯ್ ಮಾಡಿಸಿದ ಬಳಿಕ ಮನೆಗೆ ಹೆಂಚನ್ನು ಕೂಡ ಕಾರ್ಯಕರ್ತರೇ ಸ್ವತಃ ಜೋಡಿಸಿದರು. ಹೀಗೆ ಕಟ್ಟಡ ನಿರ್ಮಾಣದ ಕೂಲಿಕಾರರಂತೆ ದುಡಿದರು. ಕೊನೆಗೂ ಶ್ರಮದ ಫಲವಾಗಿ ಅಂದದ ಮನೆಯೊಂದು ನಿರ್ಮಾಣಗೊಂಡಿದ್ದು, ಮೂವರೂ ಈಗ ಇದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.
ಈ ಮನೆಯ ಗೃಹಪ್ರವೇಶ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆದಿದ್ದು, ಮನೆಯಲ್ಲಿ ಹಾಲುಕ್ಕಿಸಿ ಸಂಭ್ರಮಿಸಲಾಯಿತು. ವೃದ್ಧೆಗೆ ಮನೆ ಒಪ್ಪಿಸಿಕೊಡುವಾಗ ಎಲ್ಲರ ಮುಖದಲ್ಲೂ ಮಂದಹಾಸವಿದ್ದರೆ, ಅಜ್ಜಿಯ ಕಂಗಳಲ್ಲಿ ಅವ್ಯಕ್ತವಾದ ಕಣ್ಣೀರ ಹನಿಗಳಿದ್ದವು.