Advertisement

ಯುಗೋಸ್ಲಾವಿಯಾದ ಕತೆ: ಕಪ್ಪೆಯ ಮದುವೆ

06:00 AM Sep 02, 2018 | |

ಒಂದು ಕೆರೆಯಲ್ಲಿದ್ದ ಗಂಡು ಕಪ್ಪೆ ಬೆಳೆದು ದೊಡ್ಡವನಾಯಿತು. ಒಂದು ಸಲ ಅದು ಪತಂಗವೊಂದನ್ನು ಹಿಡಿಯಲು ಹೋಯಿತು. ಪತಂಗ ಅದರ ಕೈಗೆ ಸಿಕ್ಕದೆ ಮೇಲೆ ಹಾರಿ ಕಿಸಿಕಿಸಿ ನಕ್ಕಿತು. “ಕಪ್ಪೆರಾಯಾ, ನನ್ನನ್ನು ಕೊಲ್ಲಬೇಡ. ನಿನಗೆ ಒಂದು ಒಳ್ಳೆಯ ಸುದ್ದಿ ಹೇಳುತ್ತೇನೆ’ ಎಂದಿತು. “ಒಳ್ಳೆಯ ಸುದ್ದಿಯೇ? ಏನು ಅದು?’ ಕೇಳಿತು ಕಪ್ಪೆ. “”ನೋಡು, ನಾನು ಊರಿಂದೂರು ಬಣ್ಣದ ಸೀರೆ ಉಟ್ಟುಕೊಂಡು ಹಾರುತ್ತ ಹೂಗಿಡಗಳ ತೋಟಗಳಲ್ಲಿ ವಿಹರಿಸಿ ಬರುತ್ತೇನೆ. ಈ ಸಲ ಒಂದು ನದಿಯ ತೀರಕ್ಕೆ ಹೋಗಿದ್ದೆ. ಅಲ್ಲೊಂದು ಹೂವಿನ ತೋಟದಲ್ಲಿ ಮಕರಂದ ಕುಡಿಯುತ್ತ ಇದ್ದೆ. ಆಗ ನಿನ್ನಂತಹ ಯುವಕ ಕಪ್ಪೆಗಳು ಮುಂಡಾಸು ಕಟ್ಟಿಕೊಂಡು, ಭರ್ಜರಿಯಾದ ಉಡುಪು ತೊಟ್ಟುಕೊಂಡು ಸಾಲುಸಾಲಾಗಿ ಹೋಗುವುದನ್ನು ನೋಡಿದೆ” ಎಂದು ಪತಂಗ ರಸವತ್ತಾಗಿ ಹೇಳಿತು.

Advertisement

“”ನನ್ನಂತಹ ಯುವಕರು ಹೋಗುತ್ತಿದ್ದರೆ? ಎಲ್ಲಿಗೆ ಅಂತ ಕೇಳಿದೆಯಾ?” ಕಪ್ಪೆ ಕುತೂಹಲದಿಂದ ಪ್ರಶ್ನಿಸಿತು. “”ನದಿಯ ಒಳಗೆ ಕಪ್ಪೆಗಳ ಕುಲದ ರಾಣಿಯಿದ್ದಾಳೆಂಬುದು ನಿನಗೆ ತಿಳಿಯದೆ? ಅವಳ ಮಗಳು ಬಹು ಚಂದ ಅಂತ ಎಲ್ಲರೂ ಹೊಗಳುತ್ತಾರೆ. ಈ ಸುಂದರಿಗೆ ಸ್ವಯಂವರ ನಡೆಯುತ್ತದೆಯಂತೆ. ರಾಣಿಯ ಮುಂದೆ ಅವಳು ಹೇಳುವ ಸ್ಪರ್ಧೆಯಲ್ಲಿ ಗೆದ್ದ ಯುವ ಕಪ್ಪೆಯನ್ನು ಅವಳ ಮಗಳು ವರಿಸುವಳಂತೆ. ರಾಣಿಯ ಮಗಳ ಕೈ ಹಿಡಿದು ಅರಮನೆಯಲ್ಲಿ ಇರುವ ಕನಸು ಕಾಣುತ್ತ ಅಷ್ಟೊಂದು ಮಂದಿ ಹೋಗುತ್ತಿರುವ ಸಂಗತಿ ಗೊತ್ತಾಯಿತು. ನಿನಗೂ ಹೋಗಿ ಅದೃಷ್ಟ ಪರೀಕ್ಷೆ ಮಾಡಬಹುದಲ್ಲವೆ? ಚಂದದ ಹುಡುಗಿಯನ್ನು  ವರಿಸಿ ಚಿಂತೆಯಿಲ್ಲದೆ ಅಲ್ಲಿ ಸುಖದಿಂದ ಇರಬಹುದು” ಎಂದಿತು ಪತಂಗ. ಈ ಸುದ್ದಿ ಕೇಳಿ ಕಪ್ಪೆಯ ಮುಖ, “ಹೌದೇ!’ ಎಂದು ಸಂತಸದಿಂದ ಅರಳಿತು. ಜೊತೆಗೆ ಸಣ್ಣ ಚಿಂತೆಯೂ ಆಯಿತು. ಅದರ ಕಂದಿದ ಮುಖ ನೋಡಿ, “”ಯಾಕೆ, ಮದುವೆಯಾಗಲು ನಿನಗೆ ಇಷ್ಟವಿಲ್ಲವೆ?” ಎಂದು ಪತಂಗ ಕೇಳಿತು. “”ಅಯ್ಯೋ ದೇವರೇ, ರಾಜಕುಮಾರಿಯ ಕೈ ಹಿಡಿಯಲು ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ಅಷ್ಟು ದೂರಕ್ಕೆ ನಾನು ಕುಪ್ಪಳಿಸಿಕೊಂಡು ಹೋಗಬೇಕಿದ್ದರೆ ಒಂದು ವರ್ಷ ಬೇಕಾಗಬಹುದು. ಆ ಹೊತ್ತಿಗೆ ಯಾರ ಜೊತೆಗೋ ಅವಳ ಮದುವೆ ಮುಗಿದಿರುತ್ತದೆ” ಎಂದಿತು ಕಪ್ಪೆ ಚಿಂತೆಯಿಂದಲೇ.

    “”ಹಾಗೆ ಹೇಳಿದರೆ ಹೇಗೆ? ಬಾಡಿಗೆಗೆ ಒಂದು ಗಾಡಿ ಗೊತ್ತು ಮಾಡಿಕೋ. ಅದರಲ್ಲಿ ಕುಳಿತರೆ ಬೇಗನೆ ತಲುಪಬಹುದು” ಎಂದು ಹೇಳಿ ಪತಂಗ ಮುಂದೆ ಹೋಯಿತು. ಕಪ್ಪೆ ನೆಗೆಯುತ್ತ ಇಲಿಯ ಬಳಿಗೆ ಸಾಗಿತು. “”ಅಣ್ಣ, ರಾಜಕುಮಾರಿಯನ್ನು ಮದುವೆಯಾಗಲು ಹೋಗಬೇಕಾಗಿದೆ. ಒಂದು ಗಾಡಿ ಮಾಡಿ ಕೊಡುತ್ತೀಯಾ?” ಕೇಳಿತು. “”ಒಲೆಯಲ್ಲಿ ಕಬ್ಬಿಣ ಹಾಕಿ ಕಾಯಿಸಿ ಗುದ್ದಲು ಶಕ್ತಿ ಇಲ್ಲ. ಊಟ ಕಾಣದೆ ಎರಡು ದಿನವಾಯಿತು. ಏನಾದರೂ ತಿನ್ನಲು ತಂದುಕೊಟ್ಟರೆ ಗಾಡಿ ಮಾಡಿಕೊಡುತ್ತೇನೆ” ಎಂದಿತು ಇಲಿ. ಕಪ್ಪೆ ಕುಪ್ಪಳಿಸಿಕೊಂಡೇ ರೈತನ ಹೊಲಕ್ಕೆ ನುಗ್ಗಿತು. ಹಾರುವ ಮಿಡತೆಯನ್ನು ಹಿಡಿಯಿತು. “”ಅಣ್ಣ, ಕೊಲ್ಲಬೇಡ, ಬಿಟ್ಟುಬಿಡು” ಎಂದು ಬೇಡಿತು ಮಿಡತೆ. “”ಬಿಡುತ್ತೇನೆ. ಇಲಿಗೆ ತಿನ್ನಲು ಒಂದು ಹಿಡಿ ಭತ್ತದ ತೆನೆ ಬೇಕು, ತಂದುಕೊಡು” ಎಂದಿತು ಕಪ್ಪೆ. ಮಿಡತೆ ತಂದುಕೊಟ್ಟ ತೆನೆಯಲ್ಲಿರುವ ಕಾಳುಗಳನ್ನು ತಿಂದು ಇಲಿ ಗಾಡಿ ತಯಾರಿಸಿ ಕೊಟ್ಟಿತು.

ಗಾಡಿಯೊಂದಿಗೆ ಇಲಿ ಹುಂಜದ ಬಳಿಗೆ ಹೋಯಿತು. “”ರಾಣಿಯ ಮಗಳನ್ನು ಮದುವೆಯಾಗುವುದಕ್ಕೆ ಹೋಗಬೇಕಾಗಿದೆ. ನನ್ನ ಗಾಡಿಯನ್ನೆಳೆಯಲು ಬರುತ್ತೀಯಾ?” ಕೇಳಿತು. ಹುಂಜ, “”ಒಳ್ಳೆ ಮಾತು ಹೇಳಿದೆ. ನನ್ನ ಹೆಂಡತಿ ಮೊಟ್ಟೆಯಿಟ್ಟು ಕಾವು ಕೊಡಲು ಕುಳಿತಿದ್ದಾಳೆ. ಅವಳಿಗೆ ತಿನ್ನಲು ಕಾಳು ತಂದುಕೊಡಬೇಕು. ನೀನು ಕಾಳು ತಂದರೆ ನಿನ್ನ ಜೊತೆಗೆ ಬರಬಹುದು” ಎಂದಿತು. ಕಪ್ಪೆ ಇರುವೆ ರಾಣಿಯ ಬಳಿಗೆ ಹೋಯಿತು. “”ರಾಣಿ ಮಗಳನ್ನು ಮದುವೆಯಾಗಲು ಹೋಗ್ತಿದೇನೆ. ನನ್ನ ಗಾಡಿ ಎಳೆಯುವ ಹುಂಜದ ಹೆಂಡತಿಗೆ ತಿನ್ನಲು ಕಾಳು ಬೇಕಾಗಿದೆ. ನಿನ್ನ ಬಳಗದೊಂದಿಗೆ ಕಾಳು ಸಂಗ್ರಹಿಸಿ ಕೊಡಲು ಸಾಧ್ಯವೆ?” ಕೇಳಿತು. “”ಸಂತೋಷವಾಗಿ ಹೋಗಿ ಮದುವೆ ಮಾಡಿಕೊಂಡು ಬಾ. ಹೇಂಟೆಗೆ ಆಹಾರ ನಾನು ಒದಗಿಸುತ್ತೇನೆ” ಎಂದು ಇರುವೆ ರಾಣಿ ಒಪ್ಪಿತು.

    ಕಪ್ಪೆ ಗಾಡಿಯಲ್ಲಿ ಕುಳಿತಿತು. ಹುಂಜ ಗಾಡಿಯನ್ನೆಳೆಯುತ್ತ ಕಪ್ಪೆ ರಾಣಿಯ ಅರಮನೆಗೆ ತಲುಪಿತು. ಅಲ್ಲಿ ತುಂಬ ಮಂದಿ ಯುವಕರು ಸ್ವಯಂವರದಲ್ಲಿ ರಾಣಿಯ ಮಗಳನ್ನು ಗೆಲ್ಲುವ ಆಶೆ ಹೊತ್ತುಬಂದಿದ್ದರು. ಕಪ್ಪೆ ರಾಣಿಯು ಅರಮನೆಯ ಮುಂದೆ ದೊಡ್ಡ ಗೋಪುರವೊಂದನ್ನು ನಿರ್ಮಾಣ ಮಾಡಿಸಿತ್ತು. ಬಂದವರ ಮುಂದೆ, “ಸ್ವಯಂವರದ ಪಣವೇನೆಂಬುದನ್ನು ಎಲ್ಲರೂ ಕೇಳಿಸಿಕೊಳ್ಳಿ. ಈ ಗೋಪುರದ ತುದಿಯಲ್ಲಿ ಒಂದು ಮಡಕೆಯನ್ನು ತೂಗಾಡಿಸಿದ್ದೇವೆ. ಯುವರಾಣಿಯನ್ನು ಮದುವೆಯಾಗಲು ಇಚ್ಛಿಸುವವರು ನೆಲದಿಂದ ಗೋಪುರದ ತುದಿಗೆ ನೆಗೆಯಬೇಕು. ಆ ಮಡಕೆಯನ್ನು ಒಡೆದು ಹಾಕಬೇಕು. ಈ ಪಂದ್ಯದಲ್ಲಿ ಗೆದ್ದವರ ಕೊರಳಿಗೆ ಅವಳು ಸ್ವಯಂವರದ ಮಾಲೆಯನ್ನು ಹಾಕುತ್ತಾಳೆ” ಎಂದು ಹೇಳಿತು.

Advertisement

    ಕಪ್ಪೆಗಳು ಒಂದೊಂದಾಗಿ ಗೋಪುರದ ಮೇಲೆ ನೆಗೆಯಲು ಆರಂಭಿಸಿದವು. ಆಗ ನೋಡಲು ಕುಳಿತಿದ್ದ ಪ್ರೇಕ್ಷಕರ ಕಡೆಯಿಂದ ಹರ್ಷೋದ್ಗಾರಗಳು ಕೇಳಿಬಂದವು. ಅದರೊಂದಿಗೆ, “”ಇಲ್ಲ, ಇಲ್ಲ. ಅಷ್ಟು ಎತ್ತರಕ್ಕೆ ನೆಗೆದು ಮಡಕೆಯನ್ನು ಒಡೆಯಲು ಸಾಧ್ಯವೇ ಇಲ್ಲ” ಎಂದು ಕೂಗತೊಡಗಿದವು. ಇದರಿಂದ ನೆಗೆಯುತ್ತಿದ್ದ ಪ್ರತಿಯೊಂದು ಕಪ್ಪೆಯೂ ಕೈಕಾಲು ನಡುಗುತ್ತ ಕೆಳಗೆ ಬಿದ್ದು ನಾಚಿಕೆಯಿಂದ ಹೊರಗೆ ಓಡಿಹೋಯಿತು. ಆಗ ಹುಂಜದ ಗಾಡಿಯಲ್ಲಿ ಕುಳಿತು ಉತ್ಸಾಹದಿಂದ ಬಂದಿದ್ದ ಕಪ್ಪೆಯು ಚೈತನ್ಯ ಕಳೆದುಕೊಂಡಿತು. ಮೇಲೆ ನೆಗೆಯಲು ಪ್ರಯತ್ನಿಸಿ ಸೋತು ಮುಖ ತಗ್ಗಿಸುವ ಬದಲು ಪ್ರಯತ್ನ ಮಾಡದಿರುವುದೇ ಲೇಸು ಎಂದು ಮೆಲ್ಲಗೆ ಎದ್ದು ಹೊರಗೆ ಬಂದಿತು. ಗಾಡಿಯಲ್ಲಿ ಕುಳಿತು ಮರಳಿ ತನ್ನ ಮನೆಗೆ ಹೊರಡಲು ಮುಂದಾಯಿತು.

    ಆಗ ಹಾರುತ್ತ ಬಣ್ಣದ ಪತಂಗ ಅದರ ಬಳಿಗೆ ಬಂದಿತು. “”ಯಾಕೆ ಮುಖ ಬಾಡಿದೆ? ಸ್ಪರ್ಧೆಯಲ್ಲಿ ಸೋತೆಯಾ?” ಎಂದು ಕೇಳಿತು. ಕಪ್ಪೆ ನಡೆದ ವಿಷಯ ಹೇಳಿತು. “”ನಾನು ಗೆಲ್ಲುವ ಭರವಸೆ ಕಳೆದುಕೊಂಡಿದ್ದೇನೆ. ಹಾಗಾಗಿ ಮರಳಿ ಹೊರಟಿದ್ದೇನೆ” ಎಂದಿತು. ಪತಂಗ ಜೋರಾಗಿ ನಕ್ಕಿತು. “”ನೀನು ಹೆದರುವ ಅಗತ್ಯವೇ ಇಲ್ಲ. ಖಂಡಿತ ಗೆಲ್ಲುವೆ. ನಾನು ನಿನ್ನ ಕಿವಿಗಳ ಒಳಗೆ ಒಂದು ಔಷಧಿಯನ್ನು ಇಡುತ್ತೇನೆ. ಮತ್ತೆ ಹೋಗಿ ಗೋಪುರದೆಡೆಗೆ ನೆಗೆಯಲು ಮುಂದಾಗು” ಎಂದು ಹುರಿದುಂಬಿಸಿತು.

    ಪತಂಗ ಕಪ್ಪೆಯ ಕಿವಿಯೊಳಗೆ ಔಷಧವನ್ನು ಇರಿಸಿದ ಮೇಲೆ ಕಪ್ಪೆಗೂ ಧೈರ್ಯ ಬಂದಿತು. ಮರಳಿ ಗೋಪುರದ ಬಳಿಗೆ ಹೋಗಿ ಅದರ ಬುಡದಲ್ಲಿ ನಿಂತಿತು. ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಬಲವಾಗಿ ಗೋಪುರದ ಮೇಲೆ ನೆಗೆಯಿತು. ಎಲ್ಲರಿಗೂ ಆಶ್ಚರ್ಯವಾಗುವಂತೆ ಮೇಲ್ಭಾಗವನ್ನು ತಲುಪಿತು. ಅಲ್ಲಿರುವ ಮಡಕೆಯನ್ನು ಒಡೆದು ಹಾಕಿ ಗಂಭೀರವಾಗಿ ಕೆಳಗಿಳಿಯಿತು. ರಾಣಿಯ ಮಗಳು ಬಂದು ಅದರ ಕೊರಳಿಗೆ ಹಾರ ಹಾಕಿತು. ಅದ್ದೂರಿಯಿಂದ ಕಪ್ಪೆಯ ಮದುವೆ ನೆರವೇರಿತು.

    ಆಮೇಲೆ ಕಪ್ಪೆ ಪತಂಗದ ಬಳಿಗೆ ಬಂದು ಅದು ಮಾಡಿದ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸಿತು. “”ಅಂದ ಹಾಗೆ ನೀನು ನನ್ನ ಕಿವಿಯೊಳಗೆ ಔಷಧವನ್ನಿಡದೆ ಹೋದರೆ ನಾನು ಗೆಲ್ಲಲು ಸಾಧ್ಯವೇ ಇರಲಿಲ್ಲ. ಈ ಔಷಧವನ್ನು ಎಲ್ಲಿಂದ ತಂದೆ?” ಎಂದು ಕೇಳಿತು. ಪತಂಗ ಜೋರಾಗಿ ನಕ್ಕಿತು. “”ಔಷಧಿಯೂ ಇಲ್ಲ, ಮಣ್ಣೂ ಇಲ್ಲ. ನಾನು ನಿನ್ನ ಕಿವಿಗಳೊಳಗೆ ಹತ್ತಿ ತುರುಕಿದ್ದೆ. ಅದರಿಂದಾಗಿ ನೀನು ಗೋಪುರದೆಡೆಗೆ ನೆಗೆಯುವಾಗ ಪ್ರೇಕ್ಷಕರು ನೀನು ಗೆಲ್ಲುವುದಿಲ್ಲ ಎಂದು ಕೂಗಿದ್ದು ಕಿವಿಗೆ ಕೇಳಿಸಲಿಲ್ಲ. ಮೊದಲು ನೆಗೆದವರೆಲ್ಲ ಈ ಕೂಗಿನಿಂದ ಉತ್ಸಾಹ ಕಳೆದುಕೊಂಡು ಸೋತು ಹೋಗಿದ್ದರು. ನೀನು ಹಾಗಾಗದೆ ಗೆಲ್ಲಲು ಕಿವಿ ಮುಚ್ಚಿದ್ದುದು ಒಂದೇ ಕಾರಣ” ಎಂದು ಹೇಳಿತು. ಕಪ್ಪೆ ನದಿಯೊಳಗಿದ್ದ ರಾಣಿಯ ಅರಮನೆಯಲ್ಲಿ ಸುಖವಾಗಿತ್ತು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next