Advertisement

ಬದುಕಿನ ಸಾರ ತಿಳಿಸುವ ಹಬ್ಬ ಮತ್ತೆ ಬಂದಿತು ಯುಗಾದಿ

07:34 PM Apr 05, 2021 | Team Udayavani |

ಯುಗಾದಿ ಎಂದಾಗ ನೆನಪಾಗುವುದೇ ಕಹಿ, ಸಿಹಿಯ ಮಿಶ್ರಣವಾದ ಬೇವುಬೆಲ್ಲ. ಎಲ್ಲರ ಬದುಕಿನ ಸಾರವೂ ಇದೇ ಆಗಿರುತ್ತದೆ. ಹಬ್ಬದ ಆಚರಣೆಯಲ್ಲಿ ವೈಶಿಷ್ಟ್ಯಗಳಿದ್ದರೂ ಬದುಕಿನಲ್ಲಿ ಸುಖ, ದುಃಖಗಳನ್ನು ಹೇಗೆ ಸಮಾನವಾಗಿ ಸ್ವೀಕರಿಸಬೇಕು ಎಂಬುದನ್ನು ಕಲಿಸುವುದೇ ಇದರ ಮುಖ್ಯ ಉದ್ದೇಶ.

Advertisement

ಮರಗಿಡಗಳಲ್ಲಿ ಚಿಗುರೆಲೆಗಳು ಕಾಣಿಸಿಕೊಂಡು ಹೊಸ ಜೀವನದ ಆರಂಭದೊಂದಿಗೆ  ವಸಂತಾಗಮನದ ಸೂಚನೆಯನ್ನು ನೀಡುತ್ತವೆ. ಹಿಂದೂ ನಂಬಿಕೆಯ ಪ್ರಕಾರ ಸೃಷ್ಟಿಕರ್ತನಾದ ಬ್ರಹ್ಮ ತನ್ನ ಸೃಷ್ಟಿ ಕಾರ್ಯವನ್ನು ಚೈತ್ರ ಮಾಸದಲ್ಲಿ ಪ್ರಾರಂಭಿಸಿದ ಎನ್ನುಲಾಗುತ್ತದೆ. ಹೀಗಾಗಿ ಚೈತ್ರ ಮಾಸ (ಮಾರ್ಚ್‌- ಎಪ್ರಿಲ್‌ ತಿಂಗಳು)ದ ಮೊದಲ ದಿನವನ್ನು ಈ ಬಾರಿ ಎಪ್ರಿಲ್‌ 13ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಯುಗಾದಿ ಹಬ್ಬವನ್ನು ವಿಶೇಷವಾಗಿ ದಕ್ಷಿಣ ಭಾರತದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರಸ್ತುತ ದೂರದೂರಗಳಲ್ಲಿ ನೆಲೆಯಾಗಿರುವ ಭಾರತೀಯರು ಅದರಲ್ಲೂ ಮುಖ್ಯವಾಗಿ ಕನ್ನಡಿಗರು  ತಾವಿರುವ ಪ್ರದೇಶಗಳಲ್ಲೇ ಯುಗಾದಿಯನ್ನು ಬಹು ಸಂಭ್ರಮದಿಂದ ಆಚರಿಸುತ್ತಾರೆ.

“ಯುಗ” ಅಂದರೆ ತಲೆಮಾರು ಹಾಗೂ “ಆದಿ’ ಎಂದರೆ ಆರಂಭ. ಇದರರ್ಥ ಹೊಸ ತಲೆಮಾರು ಅಥವಾ ಹೊಸ ಶಕೆಯ ಆರಂಭವಾಗಿದೆ. ವಸಂತ ಋತುವಿನ ಆರಂಭದ ಈ ದಿನದಿಂದ ಹಿಂದೂ ಸಂಪ್ರದಾಯದಲ್ಲಿ ಹೊಸ ವರ್ಷದ ಆರಂಭವಾಗುತ್ತದೆ.

ಭಾರತದಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ಕರ್ನಾಟಕ ರಾಜ್ಯದಲ್ಲಿ ಯುಗಾದಿ ಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು ಗುಡಿ ಪಡ್ವ ಎಂದು, ಸಿಂಧಿ ಜನರು ಈ ಹಬ್ಬವನ್ನು ಚೇತಿ ಚಾಂದ್‌ ಹಬ್ಬವೆಂದು  ಆಚರಿಸುತ್ತಾರೆ.

ಎಲ್ಲ ಹಬ್ಬಗಳಂತೆ ಯುಗಾದಿಯಂದೂ ವಿಶೇಷ ಖಾದ್ಯಗಳಿರುತ್ತವೆ. ಇದರಲ್ಲಿ ಬಹುಮುಖ್ಯವಾದದ್ದು ಪಚಡಿ ಅಂದರೆ ಬೇವಿನ ಚಿಗುರು, ಹೂವು, ಬೆಲ್ಲ, ಹಸಿ ಮಾವು, ಹುಣಸೆ ಹುಳಿ ರಸ, ಕಾಯಿ ಮೆಣಸು ಮೊದಲದವುಗಳನ್ನು ಸೇರಿಸಿ ಮಾಡುವ ಖಾದ್ಯ. ಇದರಲ್ಲಿ ಒಂದೊಂದು ಪದಾರ್ಥವೂ ಜೀವನದ ಸಂಕೇತವಾಗಿದೆ. ಮುಖ್ಯವಾಗಿ ಬೇವಿನ ಚಿಗುರು, ಹೂವು ಕಹಿಯಾಗಿದ್ದು ಇದು ದುಃಖವನ್ನು ಸೂಚಿಸಿತ್ತದೆ. ಅದೇ ರೀತಿ ಬೆಲ್ಲ ಸಿಹಿಯಾಗಿದ್ದು ಸಂತೋಷವನ್ನು, ಹಸಿ ಮಾವು ಬದುಕಿನಲ್ಲಿ ಬರುವ ಅಚ್ಚರಿಗಳನ್ನು, ಹುಣಸೆ ಹುಳಿಯ ರಸ ಬೇಸರವನ್ನು, ಉಪ್ಪು ಭಯವನ್ನು, ಕಾಯಿ ಮೆಣಸು ಕೋಪವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಬೇವು ಬೆಲ್ಲ ಹೆಚ್ಚು ಮಹತ್ವ ಪಡೆದಿದ್ದು ಜೀವನವು ಸುಖದುಃಖಗಳ ಸಮ್ಮಿಲನ ಎಂಬ ವಾಸ್ತವವನ್ನು ಎಲ್ಲರೂ ಸ್ವೀಕರಿಸಲೇಬೇಕು ಎನ್ನುವುದನ್ನು ತಿಳಿಸುತ್ತದೆ. ಪಚಡಿಯೊಂದಿಗೆ ಒಬ್ಬಟ್ಟಿನ ಊಟ ಯುಗಾದಿಯ ವಿಶೇಷ.

Advertisement

ದೇವಾಲಯ, ಕೆಲವು ಮನೆಗಳಲ್ಲಿ ಹೊಸ ವರ್ಷದಂದು ಪಂಚಾಂಗ ಶ್ರವಣ ಮಾಡಲಾಗುತ್ತದೆ. ಜತೆಗೆ ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಇದಲ್ಲದೆ ಯುಗಾದಿಯಂದು ಅಭ್ಯಂಗ ಸ್ನಾನ, ತುಪ್ಪದಲ್ಲಿ ಮುಖ ನೋಡಿಕೊಳ್ಳುವ ಪದ್ಧತಿ, ಕುಟುಂಬದ ಹಿರಿಯ ಮಹಿಳೆಯರು ಕಿರಿಯರಿಗೆ ಕುಂಕುಮ ಹಚ್ಚಿ ಆರತಿ ಮಾಡುವುದು, ಹೊಸ ಬಟ್ಟೆ ಧರಿಸುವುದು, ಮನೆ ಬಾಗಿಲಿಗೆ ರಂಗೋಲಿ ಹಾಗಿ, ಮಾವು, ಬೇವಿನ ಎಲೆಗಳ ತೋರಣ ಕಟ್ಟಿ,  ಮನೆ ದೇವರಿಗೆ ಅಭ್ಯಂಗ, ಬೇವು, ಮಾವು, ಹುಣಸೆ ಹೂವುಗಳ ಅರ್ಪಣೆ,  ಪೂಜೆ , ಅಭಿಷೇಕ, ಅಲಂಕಾರ, ನೈವೇದ್ಯ, ಮಂಗಳಾರತಿ, ಪಂಚಾಂಗ ಪೂಜೆಯನ್ನು ಮಾಡಲಾಗುತ್ತದೆ. ಕೆಲವರು ಬೇವು ಬೆಲ್ಲ  ಸವಿದು, ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.

ಯುಗಾದಿಲ್ಲಿ ಆಚರಿಸುವ ಕೆಲವೊಂದು ಪದ್ಧತಿಗಳಿಗೆ ವೈಜ್ಞಾನಿಕ ಕಾರಣವೂ ಇದೆ. ಮುಖ್ಯವಾಗಿ ತಲೆಗೆ ಹರಳೆಣ್ಣೆ ಸವರಿ ಸ್ನಾನ ಮಾಡುವುದು ವಿಶೇಷ. ಯುಗಾದಿಯ ಅನಂತರ ಸೂರ್ಯನ ತಾಪ ಹೆಚ್ಚಾಗುತ್ತದೆ. ಇದಕ್ಕಾಗಿ ದೇಹವನ್ನು ಸಜ್ಜುಗೊಳಿಸಲು ಯುಗಾದಿಯಂದು ತಲೆಗೆ ಹರಳೆಣ್ಣೆ ಹಾಕಲಾಗುತ್ತದೆ. ಇದರಿಂದ ದೇಹ ತಂಪಾಗಿರುವುದು. ತಾಜಾ ಮಾವಿನ ಎಲೆಗಳನ್ನು ಮನೆ ಮುಂದೆ ಹಾಕುವುದರಿಂದ ತಾಜಾ ಗಾಳಿ ಮನೆಯೊಳಗೆ ಬರುತ್ತದೆ ಮಾತ್ರವಲ್ಲ ತಂಪಾದ ಅನುಭವವನ್ನು ಕೊಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next