Advertisement

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

06:36 PM Apr 12, 2021 | Team Udayavani |

ಚೈತ್ರ ಚಿಗುರಿದೆ. ಹಳೆಯ ಬೇರಿನ ಆಶ್ರಯದಿ ಹೊಸ ಕನಸು ಚಿಗುರಿದೆ. ಹೌದು ನಮ್ಮ ನೆಲದ ಹೊಸವರ್ಷ ಅಥವಾ ವರ್ಷದ ಮೊದಲ ಹಬ್ಬ ಯುಗಾದಿ. ಬದುಕಿನಂಗಳದಲ್ಲಿ ನಿತ್ಯವು ಯುಗಾದಿಯೇ ನಮಗೆಲ್ಲ. ಜೀವನದ ಹಾದಿಯಲ್ಲಿ ನಮ್ಮ ಪ್ರಯತ್ನಗಳು ಸೋತಾಗ ಅವುಗಳನ್ನು ಕಹಿ ಎಂದು ಭಾವಿಸುತ್ತೇವೆ ಹಾಗೆಯೇ ಗೆಲುವನ್ನು ಸಿಹಿ ಎಂದು ಸಂಭ್ರಮಿಸುತ್ತೇವೆ. ಸ್ವಲ್ಪ ತಿಳಿದು ನೋಡುವುದಾದರೆ ಸೋಲಿಲ್ಲದೆ ಗೆಲುವಿಗೆ ಸಂಭ್ರಮದ ಮಾತೆಲ್ಲಿ ಹೇಳಿ? ಅದೇನೆ ಇರಲಿ ಹಿಂದೂ ಸಂಪ್ರದಾಯದ ಹೊಸ ವರ್ಷ ಯುಗಾದಿಯ ಸುತ್ತ ಒಂದು ನೋಟ ಹಾಯಿಸಿದಾಗ ಮನ ಮನೆಗಳಲ್ಲಿ ಆಚರಿಸುವ ಈ ಹಬ್ಬದ ಸಂಭ್ರಮ ಹೆಚ್ಚಾಗದೆ ಇರದು.

Advertisement

ಯುಗಾದಿ ಅತ್ಯಂತ ಸಂಭ್ರಮದ ಹಬ್ಬ. ಯುಗದ ಆದಿಯಲ್ಲಿ ಬರುವ ಈ ಹಬ್ಬವನ್ನು ಚಾಂದ್ರಮಾನ ದಿನ ಗಣನೆಯ ಪ್ರಕಾರ ನಾಡಿನಾದ್ಯಂತ ಆಚರಿಸುತ್ತಾರೆ. ಹಾಗೆಯೆ ನಮ್ಮ ಉತ್ತರ ಕರ್ನಾಟಕದಲ್ಲಿ ಅತ್ಯಂತ ವಿಶೇಷ. ಅಂದು ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಪಂಚಾಂಗ ಪೂಜೆ ಮಾಡಿ ಬೇವು-ಬೆಲ್ಲ ಸವಿಯುತ್ತಾರೆ. ಈ ಹಬ್ಬ ನಮ್ಮ ಬದುಕಿನ ಸಾರವನ್ನೇ ಹೇಳುತ್ತದೆ. ಬೇವು ಬೆಲ್ಲ ಸವಿಯುವಾಗ ನಾವು ಹೇಳುವ ಶ್ಲೋಕ ಹೀಗಿದೆ….

ಶತಾಯುಃ ವಜ್ರದೇಹಾಯ

ಸರ್ವ ಸಂಪತ್ಕರಾಯಚ್ l

ಸರ್ವ ಅರಿಷ್ಠ ವಿನಾಶಾಯ

Advertisement

ನಿಂಭಕಂದಳ ಭಕ್ಷಣಮ್ll

ಹೀಗೆಂದರೆ ನೂರು ವರ್ಷ ಆಯುಷ್ಯವನ್ನು ಕೊಟ್ಟು ,ಸದೃಢ ಆರೋಗ್ಯ ನೀಡಿ,ಸಕಲ ಸಂಪತ್ತು ಹಾಗೂ ಬರುವ ಎಲ್ಲ ಅರಿಷ್ಠಗಳನ್ನು ಶಮನ ಮಾಡು ಎಂದು ಬೇವು ಬೆಲ್ಲ ಮೆಲ್ಲುವೆ ಎನ್ನುತ್ತಾರೆ.

‘ ಎಲ್ಲೆಲ್ಲೂ ಹಬ್ಬ ಹಬ್ಬ ಬಂತೂ ಯುಗಾದಿ ಹಬ್ಬ’ ಈ ಹಾಡನ್ನು  ಕೇಳಿದಾಗ ಯುಗಾದಿ ಸಂಭ್ರಮಕ್ಕೆ ಮತ್ತಷ್ಟು ಮೆರಗು ಬಾರದಿರದು. ಬದುಕಿನಲ್ಲಾದ ಎಲ್ಲ ಕಹಿ ಅನುಭವವನ್ನು ಮರೆತು ಮುಂಬರುವ ದಿನಗಳಲ್ಲಿ ಅನುಭಾವ ಹೆಚ್ಚಿಸಿಕೊಳ್ಳುತ್ತ ಏಳಿಗೆಯತ್ತ ಸಾಗೋಣ..’ ನೋವಿನ ನೆಪ ಹೇಳಿ ದೂರವಾದ ಎಷ್ಟೋ ಸಂಬಂಧಗಳು ಮತ್ತೆ ಬೇವು ಬೆಲ್ಲದಂತೆ ಒಂದಾಗಲಿ ಎಂದು ಹಾರೈಸೋಣ. ಬದುಕು ಮುಗಿಯುವ ಮುನ್ನ ಕ್ಷಮಿಸಿ ಬಿಡೋಣ. ಅಳಿಸಲಾಗದಂತೆ ಅಚ್ಚೊತ್ತಿದ ಕಹಿ ನೆನಪುಗಳೆ ನಮ್ಮನ್ನು ನಮ್ಮ ಗುರಿಯನ್ನು ಸದೃಢ ಗೊಳಿಸುತ್ತವೆ ಅಲ್ವೇ ? ಹಾಗಂದ ಮೇಲೆ ಕಹಿಯ ಮಾತೆಲ್ಲಿ ? ಸ್ವಲ್ಪ ಅಳು ಸ್ವಲ್ಪ ನಗು ಬೆರೆತಾಗಲೆ ಸಮರಸದ ಜೀವನ.

ಬುದ್ದ ಬಸವಾದಿ ಮಹಣಿಯರನ್ನೆ ಬಿಡದ ಕಷ್ಟಗಳು ಅವರನ್ನ ಅಸಾಮಾನ್ಯತೆ ಎಡೆಗೆ ಕರೆದೊಯ್ದದ್ದು. ಏರಿಳಿತದ ಬದುಕಿನ ದಾರಿಯಲ್ಲಿ ಸಹನೆ, ಕ್ಷಮೆ, ಪ್ರೀತಿ, ನಂಬಿಕೆ, ನೋವು ಎಲ್ಲವನ್ನು ಸಮವಾಗಿ ತೂಗಿ ಜೀವನದ ತಕ್ಕಡಿ ತೂಗಬೇಕು.

ಗುಡಿಸಲೇ ಇರಲಿ ಅರಮನೆ ಇರಲಿ ಸಿಹಿ ಕಹಿಯ ಲೆಕ್ಕ ಎಲ್ಲರಿಗೂ ಒಂದೇನೇ.ಇದನ್ನರಿತು ಬಾಳೋಣ. ‘’ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ. ಹೊಸ ವರುಷಕ್ಕೆ  ಹೊಸ ಹರುಷಕ್ಕೆ ಹೊಸತು ಹೊಸತು ತರುತಿದೆ” ಈ ಹಳೆಯ ಹಾಡನ್ನು ಎರಡು ಸಾಲು ಗುನುಗುತ್ತ ಭರವಸೆಯ ಬದುಕು ನಮ್ಮದಾಗಿಸಿ ಕೊಳ್ಳೊಣ. ಎಲ್ಲರ ಬದುಕಲ್ಲಿ ಭಗವಂತ ಬೆಳಕು ಚೆಲ್ಲಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಜಯಶ್ರೀ ವಾಲಿಶಟ್ಟರ್…

ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರೇಸಿಂದೋಗಿ

ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next