ಚಿತ್ರದುರ್ಗ: ಹಿಂದೂಗಳ ಪಾಲಿನ ಹೊಸ ವರ್ಷ, ಹೊಸ ಸಂವತ್ಸರ ಆರಂಭವಾಗುವ ಯುಗಾದಿ ಹಬ್ಬ ಆಚರಣೆಗೆ ನಗರದಲ್ಲಿ ಖರೀದಿ ಭರಾಟೆ ಜೋರಾಗಿದೆ. ಹಬ್ಬಕ್ಕೆ ಎರಡು ದಿನ ಮುಂಚಿತವಾಗಿಯೇ ವ್ಯಾಪಾರ ಬಿರುಸಾಗಿದ್ದು, ಗಾಂಧಿ ವೃತ್ತ, ಮೆದೇಹಳ್ಳಿ ರಸ್ತೆ, ಹೊಳಲ್ಕೆರೆ ರಸ್ತೆ, ದಾವಣಗೆರೆ ರಸ್ತೆ, ಆನೆಬಾಗಿಲು ರಸ್ತೆ ಹಾಗೂ ಲಕ್ಷ್ಮೀ ಬಜಾರ್‌ನಲ್ಲಿ ಜನ ಜಾತ್ರೆ ಕಾಣಿಸುತ್ತಿದೆ.
ಹಬ್ಬಕ್ಕೆ ಹೊಸ ಬಟ್ಟೆ ಖರೀ ದಿಸಲು ಲಕ್ಷ್ಮೀ ಬಜಾರ್ ಗೆ ಜನರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆತಂಕದ ಸಂಗತಿಯೆಂದರೆ ಬಹುತೇಕರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರವಂತೂ ಮರೆತೇ ಹೋದಂತಿದೆ. ಹಬ್ಬದ ಸಂಭ್ರಮದ ನಡುವೆ ಕೊರೊನಾ ಮರೆತಿರುವ ಜನರು ಮಾವು, ಬೇವು, ಹೂವು, ಉಡುದಾರ, ಬಳೆ ಸೇರಿದಂತೆ ಹಬ್ಬಕ್ಕೆ ಸಂಬಂಧಿ ಸಿದ ವಸ್ತುಗಳ ಖರೀ ದಿಯಲ್ಲಿ ಮಗ್ನರಾಗಿದ್ದಾರೆ.
ಹಣ್ಣಿನ ದರ ಏರಿಕೆ: ಹಬ್ಬಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಹಣ್ಣು, ಹೂವು ಹಾಗೂ ತರಕಾರಿ ಬೆಲೆ ಏರಿಕೆಯಾಗುತ್ತದೆ. ಯುಗಾದಿ ಸಂದರ್ಭದಲ್ಲಿ ಕೂಡ ದರ ಏರಿಕೆಯ ಬಿಸಿ ಜನರಿಗೆ ತಟ್ಟುತ್ತಿದೆ. ಒಂದು ಕೆಜಿ ಸೇಬು ಬೆಲೆ 170 ರಿಂದ 200, ದ್ರಾಕ್ಷಿ 60 ರಿಂದ 120, ಮೋಸಂಬಿ 80, ವೀಳ್ಯದೆಲೆ 100 ಎಲೆಯ ಕಟ್ಟಿಗೆ 80 ರಿಂದ 100, ಬಾಳೆಹಣ್ಣು ಕೆಜಿಗೆ 50 ರೂ.ನಂತೆ ಮಾರಾಟವಾಯಿತು.
ಎಪಿಎಂಸಿಯ ಸಗಟು ವ್ಯಾಪಾರದ ಮಾರುಕಟ್ಟೆಯಲ್ಲಿ ಗುಣಮಟ್ಟದ ಹಳದಿ, ಕಲರ್ ಸೇವಂತಿಗೆ ಹೂ 5 ರಿಂದ 6 ಮಾರಿಗೆ 1 ಸಾವಿರ ರೂ., ಬಿಳಿ ಸೇವಂತಿಗೆ, ಮಲ್ಲಿಗೆ ಹೂ 7 ರಿಂದ 8 ಮಾರಿಗೆ 1,000. ಇದೇ ದರಕ್ಕೆ ಕನಕಾಂಬರ ಹಾಗೂ ಕಾಕಡ 10ರಿಂದ 12 ಮಾರಿನಂತೆ ಹೂ ಖರೀದಿಯಾಗುತ್ತಿದ್ದವು. ವಿವಿಧ ಬಣ್ಣಗಳ ಚಿಕ್ಕ ಗುಲಾಬಿ (ಬಟನ್ಸ್) ಹೂವು ಕೆಜಿಗೆ 240 ರಿಂದ 280 ರೂ. ಗಳಿಗೆ ಮಾರಾಟವಾಯಿತು.