Advertisement

Yugadi- 2024; ಕ್ರೋಧಿ ಸಂವತ್ಸರ ಜಾಗತಿಕ ಪ್ರಭಾವ-ರಾಜ್ಯದಲ್ಲಿ ಚುನಾವಣೆ ನಂತರದ ಭವಿಷ್ಯವೇನು?

12:35 AM Apr 09, 2024 | Team Udayavani |

ಎಪ್ರಿಲ್‌ ಒಂಬತ್ತು, 2024ರಂದು ಮಂಗಳವಾರ ಚಾಂದ್ರಮಾನ ಯುಗಾದಿ. ಅಂದಿನಿಂದ ಕ್ರೋಧಿ ಸಂವತ್ಸರ ಆರಂಭವಾಗಿ ಮಾರ್ಚ್‌ 29, 2025ರಂದು ಶನಿವಾರ ಮುಗಿಯುವುದು. ಮೇಷ ಸಂಕ್ರಾಂತಿಯ ಮರುದಿನ ಸೌರ ಯುಗಾದಿ ಎಪ್ರಿಲ್‌ 14, 2024 ಆದಿತ್ಯವಾರ ಆರಂಭವಾಗಿ ಎಪ್ರಿಲ್‌ 13, 2025 ರವಿವಾರ ಮುಗಿಯುವುದು. ಈ ಅವಧಿಯಲ್ಲಿ ನಡೆಯುವ ಶುಭಾಶುಭ ಘಟನೆಗಳನ್ನು “ವರ್ಷಫ‌ಲ’ ಎಂದು ಸೌರ, ಆರ್ಯ, ದೃಕ್‌ ಸಿದ್ಧಾಂತಾನುಸಾರ ಪಂಚಾಂಗಗಳು ಪ್ರಾಚೀನ ಕಾಲದಿಂದಲೂ ತಿಳಿಸು ತ್ತಾ ಬಂದಿವೆ.

Advertisement

ಜಗನ್ನಿಯಾಮಕನಾದ “ಕಾಲ’ ಎಂಬ ಹೆಸರಿನ ಪರಬ್ರಹ್ಮನ ನಾಭಿಕಮಲದಿಂದ ಉತ್ಪನ್ನನಾದ ಚತುರ್ಮುಖ ಬ್ರಹ್ಮನ ನೂರು ವರ್ಷ ಆಯುಷ್ಯದಲ್ಲಿ ಪೂರ್ವಾರ್ಧದ 50 ವರ್ಷಗಳು ಕಳೆದಿವೆ. ದ್ವಿತೀಯ ಪರಾರ್ಧದಲ್ಲಿ ಒಟ್ಟು 14 ಮನ್ವಂತರಗಳಲ್ಲಿ ಆರು ಮನ್ವಂತರಗಳು ಕಳೆದಿದ್ದು , ಇದೀಗ ಏಳನೆಯ ವೈವಸ್ವತ ಮನ್ವಂತರ. ಇದರಲ್ಲಿಯೂ ಕೃತ, ತ್ರೇತಾ, ದ್ವಾಪರ, ಕಲಿ ಎಂಬ ನಾಲ್ಕು ಯುಗಗಳ ಪೈಕಿ ಮೂರು ಯುಗಗಳು ಕಳೆದಿದ್ದು , ಇದೀಗ ನಾಲ್ಕನೆಯ ಕಲಿಯುಗವಾಗಿದೆ. ಈ ಕಲಿಯುಗದಲ್ಲಿ 5,123 ವರ್ಷಗಳು ಕಳೆದಿದ್ದು , ಶಾಲಿವಾಹನ ಶಕದ ಪ್ರಕಾರ 1,946 ವರ್ಷಗಳು ಕಳೆದಿವೆ. ಇದೀಗ ಆರಂಭವಾದ ವರ್ಷಕ್ಕೆ “ಕ್ರೋಧಿ’ ಎಂದು ಹೆಸರು. ಹೆಸರಿಗೆ ತಕ್ಕಂತೆ ರಾಷ್ಟ್ರದ, ಪ್ರಪಂಚದ ಜನರಲ್ಲಿ ಅಸಹನೆ, ವೈರಭಾವಗಳಿರುತ್ತವೆ. “ದಾಂಪತ್ಯೋ ವೈರಂ ಅನ್ಯೋನ್ಯಂ’, “ಸತತಂ ರೋಗಾಃ’ ಎನ್ನುವಂತೆ ರೋಗ-ರುಜಿನದಿಂದ, ಯುದಟಛಿ ಹಾಗೂ ಯುದ್ಧಭೀತಿಯಿಂದ ಜನರು ನರಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಸತ್ಕರ್ಮಗಳಿಗೆ ದಾನ, ಧರ್ಮ ಮಾಡಲು ಹಿಂಜರಿಯುವ ಸಾಧ್ಯತೆಯಿದೆ.

ಅಂಗಾರಕನು ಚಾಂದ್ರ ಪದ್ಧತಿಯಂತೆ ರಾಜನಾದರೆ, ಶನಿಯು ಮಂತ್ರಿಯಾಗುವನು. ಸೌರ ಪದ್ಧತಿಯಂತೆ ಶನಿಯು ರಾಜನಾದರೆ, ಅಂಗಾರಕನು ಮಂತ್ರಿಯಾಗುವನು. ಹೀಗೆ ಜ್ಯೋತಿಷಶಾಸOಉ ರೀತ್ಯಾ ಇಬ್ಬರು ಪಾಪಗ್ರಹರಿಗೆ ಪರಮಾಧಿಕಾರ ದೊರಕುವ ಪ್ರಯುಕ್ತ ಜಗತ್ತಿನಲ್ಲಿ ಯುದ್ಧ , ಕಲಹ, ಅಗ್ನಿಭಯ, ಬಿರುಗಾಳಿ, ಭೂಕಂಪನಗಳ ಭಯವಿರುತ್ತದೆ.

ಕೆಲವು ದೇಶಗಳು ಅತಿವೃಷ್ಟಿಯಿಂದ ನಲುಗಿದರೆ, ಕೆಲವು ದೇಶಗಳಲ್ಲಿ ಅನಾವೃಷ್ಟಿಯಿದ್ದು , ಪ್ರಕೃತಿಯಲ್ಲಿ ಅಸಮತೋಲನವಿರುವುದು. ದರೋಡೆಕೋರರ, ಕಳ್ಳಕಾಕರ, ಕಡಲುಗಳ್ಳರ ಕಾಟ ಹೆಚ್ಚುವುದು. ಆಹಾರ ಪದಾರ್ಥಗಳ ಅಭಾವವೂ ತೋರಿಬರುವುದು. ಕೆಲವು ರಾಷ್ಟ್ರಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಬಹುದು.ಕುಜನು ಪಶು, ಕೋಶ, ಭೂಮಿ, ಸಿOಉà, ತರು, ಸಸ್ಯ, ದುಷ್ಕರ್ಮಗಳ ಒಡೆಯನಾದ ಪ್ರಯುಕ್ತ ಅನೇಕ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು ಕಾಣಿಸುವುದು. ಪಶು-ಪಕ್ಷಿಗಳಿಗೂ ರೋಗಬಾಧೆ ಕಾಣಿಸುವುದು.

ಗುರುವಿಗೆ ರಸಾಧಿಪತ್ಯ ಇರುವ ಪ್ರಯುಕ್ತ ರಸಪದಾರ್ಥಗಳಿಗೆ ತೊಂದರೆಯಾಗುವುದು. ಸುವರ್ಣದ ಬೆಲೆ ಹೆಚ್ಚುತ್ತದೆ. ತೈಲದ ಬೆಲೆಯಲ್ಲಿ ಏರು-ಪೇರು ಸಂಭವಿಸಿ ತೈಲೋತ್ಪಾದಕ ರಾಷ್ಟ್ರಗಳಿಗೆ ಆರ್ಥಿಕ ಬಿಕ್ಕಟ್ಟು ಸಂಭವಿಸಬಹುದು. ಶನಿಗೆ ದಂಡಾಧಿಪತ್ಯವಿರುವ ಪ್ರಯುಕ್ತ ಅಯೋಗ್ಯರಿಗೆ ಕೆಲವು ಆಯಕಟ್ಟಿನ ಸ್ಥಾನದ ಅಧಿಕಾರವು ಲಭಿಸಬಹುದು. ರವಿಯು ಆ‌ರ್ದಾ ನಕ್ಷತ್ರವನ್ನು ಜ್ಯೇಷ್ಠಮಾಸದ ಶುಕ್ಲಪಕ್ಷ ಹುಣ್ಣಿಮೆಯಂದು ಪ್ರವೇಶಿಸುವ ಪ್ರಯುಕ್ತ ದೇಶದ ಕೆಲವು ಭಾಗಗಳಲ್ಲಿ
(ಉತ್ತರ ಭಾರತದಲ್ಲಿ) ಉತ್ತಮ ಮಳೆಯಾಗುವುದು.

Advertisement

ಶನಿಯು ಮೇಘ  ಮತ್ತು ವರ್ಷಕ್ಕೆ (ಮಳೆಗೆ) ಅಧಿಪತಿಯಾದ ಪ್ರಯುಕ್ತ ಮಳೆಯ ಪ್ರಮಾಣ ಚೆನ್ನಾಗಿರದು. ಈ ಕ್ರೋಧಿ ಸಂವತ್ಸರದಲ್ಲಿ ಗುರು-ಶುಕ್ರರಿಬ್ಬರೂ ಮೇ ಎಂಟರಿಂದ ಜುಲೈ ಮೂರರ ತನಕದ ಅವಧಿಯಲ್ಲಿ ಅಸ್ತಂಗತರಾಗುವರು. ಜೂನ್‌ 23ರಿಂದ ಜುಲೈ ಐದರ ತನಕ “ಕ್ಷಯ ಪಕ್ಷ’ ಎಂದು ಕರೆಯುವ ಪಕ್ಷದ 13 ದಿವಸಗಳ ಅವಧಿಯಲ್ಲಿ ಶುಭಕಾರ್ಯ ಮಾಡುವವರಿಗೆ ಅನನುಕೂಲವಿದೆ. ಕ್ಷಯ ಪಕ್ಷ ಬಂದ ವರ್ಷದಲ್ಲಿ ಯುದಟಛಿದಿಂದ ಅಥವಾ ಪ್ರಾಕೃತಿಕ ಕಾರಣದಿಂದ ಜನಕ್ಷಯವಾಗುವುದು (ಮಹಾಭಾರತ ಯುದ್ಧ ನಡೆದ ಸಮಯ ಭಾದ್ರಪದ ಕೃಷ್ಣಪಕ್ಷ ಕ್ಷಯ ಪಕ್ಷವಾಗಿತ್ತು). ಈ ವರ್ಷ ಜ್ಯೇಷ್ಠ ಕೃಷ್ಣ ಪಕ್ಷವು ಕ್ಷಯಪಕ್ಷವಾಗಿರುತ್ತದೆ. ಹೀಗಾಗಿ ಪ್ರಪಂಚದಲ್ಲಿ ಮತೀಯ ಕಲಹ, ಜನಾಂಗ ಕಲಹ, ಅನಗತ್ಯ ಅಹಮಿಕೆಯಿಂದ ಇಸ್ರೇಲ್‌ -ಹಮಾಸ್‌, ರಷ್ಯಾ-ಉಕ್ರೇನ್‌, ಟರ್ಕಿ- ಅಫ್ಘಾನಿಸ್ತಾನದಲ್ಲಿ ಘೋಷಿತ ಅಥವಾ ಅಘೋಷಿತ ಯುದ್ಧ ಮುಂದುವರಿಯುತ್ತದೆ. ಈ ಸಂವತ್ಸರದಲ್ಲಿ ಗುರುವು ವೃಷಭ ರಾಶಿಯಲ್ಲಿರುವನು. ಅದು ಅವನ ಶತ್ರುಕ್ಷೇತ್ರ.

“ದ್ವಿತೀಯಗೇ ಗುರೌ ಭೂಪತಿಕಲಹಃ ಸತತಂ ಸ್ಸುಃ ಮಧ್ಯಾನಿ ಅರ್ಘ‌ವೃಷ್ಟಿ ಸಸ್ಯಾನಿ’ ಎನ್ನುವಂತೆ ರಾಜಕೀಯ ಮುಖಂಡರ ನಡುವೆ ಭಿನ್ನಾಭಿಪ್ರಾಯ ಸ್ಫೋಟಿಸುತ್ತದೆ. ರಾಜ್ಯಗಳಲ್ಲೂ ಭಾಷೆ, ಗಡಿ, ತೆರಿಗೆ ಸಂಬಂಧಿಸಿದ ಕಲಹಗಳು
ಆರಂಭವಾಗುವುವು. ಶನಿಯು ಕುಂಭ ರಾಶಿಯಲ್ಲಿ ಸಂಚರಿಸಲಿದ್ದು , ಇದು ಅವನ ಮೂಲ ತ್ರಿಕೋಣ, ಸ್ವಕ್ಷೇತ್ರವಾದ ಪ್ರಯುಕ್ತ “ಕುಂಭರಾಶಿಗತಶ್ಚಂದ್ರಃ ಪ್ರಜಾನಾಂ ಕ್ಷೇಮಕೃತ್‌ ಭವೇತ್‌, ಅಂಗವಂಗಕಳಿಂಗಾಂಧ್ರ ಸೌರಾಷ್ಟ್ರೇಷು ಶುಭಫ‌ಲಂ’
ಎಂಬಂತೆ ಬಿಹಾರ, ಬಂಗಾಳ, ಒಡಿಶಾ, ಆಂಧ್ರ ರಾಜ್ಯಗಳಲ್ಲಿ ಮಳೆ, ಬೆಳೆ ಚೆನ್ನಾಗಿರುತ್ತವೆ.

ಈ ವರ್ಷದ ಮೇಷ ಸಂಕ್ರಾಂತಿಗೆ “ರಾಕ್ಷಸೀ’ ಎಂದು ಹೆಸರು. “ರಾಕ್ಷಸೀ ಚಾಪ್ಯನಿಷ್ಟಕೃತ್‌’ ಎನ್ನುವಂತೆ ಇದು ಅನಿಷ್ಟ ಫ‌ಲವನ್ನು ಸೂಚಿಸುತ್ತದೆ. ಸಂಕ್ರಾಂತಿ ಪುರುಷ (ಕಾಲಪುರುಷ)ನು ರಜತಾಭರಣ ಧರಿಸಿ, ಚಂದನವನ್ನು ಲೇಪಿಸಿಕೊಂಡು, ಬಕುಳ ಪುಷ್ಪವನ್ನು ಮುಡಿದು, ವರಾಹವಾಹನವನ್ನೇರಿ, ಕಡಲೆ ಅಕ್ಷತೆಯನ್ನು ಧರಿಸಿ ಪಶ್ಚಿಮ ದಿಕ್ಕಿಗೆ ಪ್ರಯಾಣ ಮಾಡುತ್ತಾನೆ. ಇವನು ಧರಿಸಿದ ವಸ್ತುಗಳು ಅಭಾವ ಅಥವಾ ನಾಶಪ್ರದವಾದರೆ, ಇವನು ಸಾಗುವ ದಿಕ್ಕಿನಲ್ಲಿ ಅನಿಷ್ಟ ಉಂಟಾಗುತ್ತದೆ.ಹೀಗಾಗಿ ದೇಶದ ಕರಾವಳಿಯಲ್ಲಿ ವಾಯುಭಾರ ಕುಸಿತ, ಮತ್ಸ éಕ್ಷಾಮ, ಚಂಡಮಾರುತದ ಹಾವಳಿ ಉಂಟಾಗಬಹುದಾದರೂ ಬಿಳಿ ಧಾನ್ಯ ಸಮೃದ್ಧಿಯಾಗುತ್ತದೆ.

ಯುದ್ದೋಪಕರಣಗಳ ಮಾರಾಟದಿಂದಲೂ ಧನಾಗಮವಿರುತ್ತದೆ. ರಾತ್ರಿಯ ಕಾಲದಲ್ಲಿ ದುಡಿಯುವ ವರ್ಗಕ್ಕೆ ಕ್ಷೇಮವಿದೆ. ಈ ಸಂವತ್ಸರದಲ್ಲಿ ಭರತಖಂಡದಲ್ಲಿ ಯಾವುದೇ ಗ್ರಹಣದ ದೃಶ್ಯ ಗೋಚರವಾಗದು. ಆದರೆ, ಪ್ರಪಂಚದಲ್ಲಿ ಒಟ್ಟು ಐದು ಗ್ರಹಣಗಳು ಸಂಭವಿಸುವುವು. ಅಮೆರಿಕಾ, ಆಫ್ರಿಕಾಗಳ ಮೇಲೆ ವರ್ಷ ಗ್ರಹಣದಿಂದ ಪರಿಣಾಮವಿದೆ.

ಭಾರತದ ಭವಿಷ್ಯ
ಭಾರತದ ಲಗ್ನ ವೃಷಭ ಹಾಗೂ ರಾಶಿ ಕರ್ಕಾಟಕ, ಯೋಗಕಾರಕ ಶನಿ. ವರ್ತಮಾನ ಕಾಲದಲ್ಲಿ ಕರ್ಮಸ್ಥಾನದಲ್ಲಿರುವವನು. ಗುರುವು ಜನ್ಮರಾಶಿಯಿಂದ ಲಾಭಕ್ಕೆ , ಜನ್ಮಲಗ್ನಕ್ಕೆ ಬಂದರೆ, ರಾಹುವು ಜನ್ಮಲಗ್ನದಿಂದ ಏಕಾದಶ ಸ್ಥಾನದಲ್ಲಿರುವನು. ಆದರೆ, ಯೋಗಕಾರಕನ ಬಲಿಷ್ಠ ಸ್ಥಿತಿಯಿಂದಾಗಿ ಪ್ರಪಂಚದಲ್ಲಿರುವ ಉಳಿದ ದೇಶಗಳಿಗೆ ಹೋಲಿಸಿದಲ್ಲಿ ಭಾರತ ಈ ಸಂವತ್ಸರದಲ್ಲಿ ಪ್ರಗತಿಯತ್ತ ಸಾಗಲಿದೆ.

ಆರ್ಥಿಕ ಸ್ಥಿರತೆ ಇರುತ್ತದೆ. ಸೆಮಿಕಂಡಕ್ಟರ್‌, ಔಷಧ, ಯುದೊಟಛೀಪಕರಣ, ಜೈವಿಕ ಇಂಧನ ಕ್ಷೇತ್ರಗಳಲ್ಲಿ ಬಹು ಪ್ರಗತಿಯಾಗುತ್ತದೆ. ಗುರುವು ಭಾವದಲ್ಲಿ ಷಷ್ಠದಲ್ಲಿರುವನು. ಲಗ್ನ ಕರ್ಮಾಧಿಪತಿಗಳ ಯೋಗ ಪ್ರಬಲ ರಾಜಯೋಗವಾಗಿದ್ದು , ಭಾರತಕ್ಕೆ ಯೋಗ್ಯ ನಾಯಕತ್ವ ಲಭಿಸುವುದು. ಈ ಲೋಕಸಭಾ ಚುನಾವಣೆಯಲ್ಲಿ ಸ್ಥಿರವಾದ ಸರಕಾರ ಅಧಿಕಾರಕ್ಕೆ ಬರುವುದು.
ಪಾಪಗ್ರಹಗಳಾದ ಕುಜ, ಶನಿಗಳು ವಿಕ್ರಮ ಸ್ಥಾನದಲ್ಲಿದ್ದರೆ, ಗ್ರಹರೆಲ್ಲರೂ ಕೇಂದ್ರಕೋನದಲ್ಲಿರುವರು. ನವಮಾಧಿಪತಿ ರವಿಯು ಚತುರ್ಥದಲ್ಲಿದ್ದು , ಉಚ್ಚಗಾಮಿಯಾದ ಪ್ರಯುಕ್ತ ಬಲಿಷ್ಠನೇ ಆಗಿರುತ್ತಾನೆ. ವಾಯುತಣ್ತೀ ರಾಶಿ ಹಾಗೂ ಜಲತಣ್ತೀ ರಾಶಿಯಲ್ಲಿ ಪಾಪಗ್ರಹರು ಕೂಡಿಕೊಂಡ ಪ್ರಯುಕ್ತ ದೇಶದಲ್ಲಿ ಜಲಕ್ಷಾಮ, ಚಂಡಮಾರುತದ ಹಾವಳಿ, ಅಪಘಾತ, ಅಗ್ನಿ ದುರಂತಗಳು ಕಾಣಿಸಿಕೊಳ್ಳುತ್ತವೆ. ಮಾಧ್ಯಮ, ಕ್ರೀಡೆ, ವಿದೇಶಾಂಗ, ಸಂಪರ್ಕ ಸಾಧನಗಳ ಇಲಾಖೆಗಳಲ್ಲಿ ಹಗರಣಗಳು ಯಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಬಾಹ್ಯಾಕಾಶದ ಸಂಶೋಧನೆಯಲ್ಲಿ ಯಶಸ್ಸಿದೆ. ಷೇರು ಮಾರುಕಟ್ಟೆಯಲ್ಲಿ ಮಧ್ಯೆ ಮಧ್ಯೆ ಮಹಾಕುಸಿತಗಳು ಸಂಭವಿಸಿದರೂ ಒಟ್ಟಂದದಲ್ಲಿ ಮಾರುಕಟ್ಟೆ ಸ್ಥಿರವಾಗಿರುತ್ತದೆ. ಹಸುರು ಇಂಧನ ವಾಹನ, ಬ್ಯಾಂಕಿಂಗ್‌, ಔಷಧ, ಷೇರು ದಲ್ಲಾಳಿ ವ್ಯವಹಾರ, ಜಿ.ಡಿ.ಪಿ. (ಒಟ್ಟು ದೇಶೀಯ ಉತ್ಪನ್ನ) ದರ ಸುಸ್ಥಿರವಾಗಿರುತ್ತದೆ. ಕರಸಂಗ್ರಹಣ ಚೆನ್ನಾಗಿರುವುದು. ಬೃಹತ್‌ ಕಾಮಗಾರಿ ನಡೆಸುವ ಕ್ಷೇತ್ರದ ಷೇರುಗಳು ಉತ್ತಮ ಇಳುವರಿ ನೀಡಬಲ್ಲವು. ರಫ್ತು ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡುವುದು. ರಾಜಕೀಯ ಪಕ್ಷಗಳಲ್ಲಿ ಅಂತಃಕಲಹ ಹೆಚ್ಚುವುದಲ್ಲದೆ ಸಹಿಷ್ಣುತೆ ಇರುವುದಿಲ್ಲ . ನೆರೆ ರಾಷ್ಟ್ರಗಳ ಕಿರಿಕಿರಿಯಿದ್ದರೂ ಹಾನಿ ಉಂಟುಮಾಡುವುದರಲ್ಲಿ ಯಶಸ್ಸನ್ನು ಕಾಣಲಾರವು. ಶ್ರಮಿಕ ವರ್ಗ ಹಾಗೂ ರೈತರ ಅಸಮಾಧಾನ ಚಳವಳಿಯ ಮಾರ್ಗ ಹಿಡಿಯಬಹುದು.

ಶತ್ರು ರಾಷ್ಟ್ರಗಳ ಆರ್ಥಿಕ ಹಾಗೂ ಸಾಮಾಜಿಕ ಬಿಕ್ಕಟ್ಟು ದೇಶಕ್ಕೆ ಒಂದರ್ಥದಲ್ಲಿ ವರವಾಗಲಿದೆ. ದೇಶದಲ್ಲಿ ಬಲಪಂಥೀಯ ಪಕ್ಷಗಳು ಪ್ರಾಬಲ್ಯ ಸಾಧಿಸುವುವು. ಕಾಶಿ, ಮಥುರಾ ಮೊದಲಾದ ವಿವಾದಗಳಲ್ಲಿ ಚಳವಳಿಗಾರರಿಗೆ ಕೋರ್ಟ್‌ನಲ್ಲಿ ಮುನ್ನಡೆ ದೊರಕುವುದು. ರಾಷ್ಟ್ರದ ಮುಖ್ಯಸ್ಥಾನದಲ್ಲಿರುವ ನಾಯಕರಿಗೆ ಕಂಟಕವಿದೆ. ದೇಶದಲ್ಲಿ ಸಂಚಾರ ಸಾರಿಗೆ ಕ್ಷೇತ್ರದಲ್ಲಿ ಅಪಘಾತ ಭಯವಿದ್ದರೂ ಅಭಿವೃದ್ದಿ ಯಿದೆ. ಕಂಪ್ಯೂಟರ್‌, ಕೃತಕ ಬುದಿಟಛಿಮತ್ತೆ, ವಿವಿಧ ಕ್ಷೇತ್ರಗಳ ಸಂಶೋಧನೆಯಲ್ಲಿ ಭಾರತೀಯರು ಮುನ್ನಡೆ ಸಾಧಿಸುವರು.

ಭಾವದಲ್ಲಿ ದೇಹ ಸ್ಥಾನಾಧಿಪತಿಯ ರೋಗಸ್ಥಾನ ಸ್ಥಿತಿಯಿಂದಾಗಿ ಕೆಲವು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು, ಉಪಶಮನ ಹೊಂದುವುವು. ಮೂಲ ಕುಂಡಲಿಯ ಚಂದ್ರನಿಂದ ಅಷ್ಟಮದಲ್ಲಿ ಕುಜ-ಶನಿಗಳು ಇರುವುದರಿಂದ ಪ್ರಮುಖ
ನಾಯಕರಿಗೆ ಕಂಟಕವಿದೆ. ಚೀನಾ ಹಾಗೂ ತೈವಾನ್‌ ಸಂಬಂಧ ಮತ್ತಷ್ಟು ಹದಗೆಡುತ್ತದೆ. ಭಾರತದೊಂದಿಗೂ ಚೀನಾದ ತಗಾದೆ ಎಗ್ಗಿಲ್ಲದೆ ಸಾಗುತ್ತದೆ.

ಚೀನಾ
ಮಕರ ಲಗ್ನದ ಕುಂಭಾಂಶದಲ್ಲಿ ಚೀನಾಕ್ಕೆ ಹೊಸ ವರ್ಷ ಆರಂಭವಾಗುವುದು. ಚತುರ್ಥದ ಭಾಗ್ಯಾಧಿಪತಿ ಬುಧನ ಸ್ಥಿತಿಯಿಂದಾಗಿ ಹಾಗೂ ಚತುರ್ಥದ ಗುರುವಿನ ಸ್ಥಿತಿಯಿಂದಾಗಿ ಚೀನಾ ಕೆಲವು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿದರೂ ತಕ್ಕಮಟ್ಟಿಗೆ ಚೆನ್ನಾಗಿಯೇ ನಿರ್ವಹಿಸುವುದು. ರಿಯಲ್‌ ಎಸ್ಟೇಟ್‌ (ಭೂ ವ್ಯವಹಾರ)ಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ನಷ್ಟ ದೇಶದ ಆರ್ಥಿಕ ವಲಯವನ್ನು ಕಂಗೆಡಿಸುವುದು. ಜಿ.ಡಿ.ಪಿ (ಅಭಿವೃದ್ಧಿಯ ದರ)ಯ ಮಟ್ಟವೂ
ತೃಪ್ತಿಕರವಾಗುವುದಿಲ್ಲ . ಆರ್ಥಿಕವಾಗಿ ಇನ್ನೊಬ್ಬರನ್ನು (ಇನ್ನೊಂದು ದೇಶವನ್ನು) ಸಾಲದ ಸುಳಿಗೆ ಸಿಲುಕಿಸುವ ಪ್ರವೃತ್ತಿಯ ಚೀನಾ ಈ ವರ್ಷ ಸ್ವತಃ ಆ ಸಂಕಷ್ಟವನ್ನು ಅನುಭವಿಸುವುದು. ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಇರದು. ವಾಹನ ಹಾಗೂ
ಉತ್ಪಾದನೆಯ ಕ್ಷೇತ್ರದಲ್ಲಿ ಪಾರಮ್ಯವನ್ನು ಕಳೆದುಕೊಳ್ಳಬಹುದು. ವಾಯುಪ್ರಕೋಪ, ಪ್ರವಾಹ, ಭೂಕಂಪ, ರೋಗ-ರುಜಿನಗಳ ಬಾಧೆಯಿಂದ ದೇಶ ಪೀಡಿತವಾಗುತ್ತದೆ. ಚತುರ್ಥ ಸ್ಥಾನದ ಬುಧ-ಗುರುಗಳಿಂದ ಆಂತರಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು
ಸಮರ್ಥವಾಗುವುದು.

ಪಾಕಿಸ್ತಾನ
ತಾ. 8-4-2024, ಸಮಯ – ರಾತ್ರಿ 11.53, ಸ್ಥಳ : ಕರಾಚಿ
ಪಾಪಗ್ರಹರೆಲ್ಲರೂ ಕೇಂದ್ರ ಕೋನದಲ್ಲಿ , ಗುರು-ಬುಧರು ಶತ್ರುಸ್ಥಾನದಲ್ಲಿರುವ ಪ್ರಯುಕ್ತ  ಪಾಕಿಸ್ತಾನ ಬಹಳ ಕಷ್ಟದ ದಿನವನ್ನು ಎದುರಿಸಬೇಕಾದೀತು. ಪ್ರಾಂತೀಯ ಮಟ್ಟದಲ್ಲಿ ಉಗ್ರಗಾಮಿಗಳು ನಡೆಸುವ ಕೃತ್ಯಕ್ಕೆ ದೇಶ ಸಿಲುಕಿ ನಲುಗಬೇಕಾಗುತ್ತದೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತದೆ. ಸಾಲದ ಹೊನ್ನ ಶೂಲ ದೇಶವನ್ನು ಅಧೋಗತಿಗೆ ತಳ್ಳಬಹುದು.

ರಾಜಕೀಯವಾಗಿ ಗುಂಪುಗಾರಿಕೆ, ಆಂತರಿಕ ಸಂಘರ್ಷ ಹೆಚ್ಚುವುವು. ಅಫ್ಘಾನಿಸ್ಥಾನ, ಇರಾನ್‌ ಮೊದಲಾದ ರಾಷ್ಟ್ರಗಳ ಜೊತೆಗಿನ ಹೋರಾಟದಿಂದಾಗಿ ಈ ದೇಶ ಭಾರತದ ತಂಟೆಗೆ ಹೆಚ್ಚು ಬಾರದೆ ಹೋದರೂ ಭಾರತದ ವಿರುದಟಛಿದ ಗುಪ್ತ ಕಾರ್ಯಾಚರಣೆ ಪೂರ್ಣವಾಗಿ ನಿಲ್ಲದು. ಪ್ರಕೃತಿ ವಿಕೋಪದಿಂದ, ಕ್ಷಾಮ-ಡಾಮರದಿಂದ, ಸೇನೆ ಹಾಗೂ ಆಡಳಿತ ಪಕ್ಷದ ಕಚ್ಚಾಟದಿಂದ ದೇಶದ ಮಾನ ಹರಾಜಾದೀತು. ಪ್ರಗತಿಯ ದರ ಕುಂಠಿತವಾಗಿ ವಿದೇಶಿ ವಿನಿಮಯದ ತೀವ್ರ ಕೊರತೆ
ಕಾಡುವುದು.

ಅಮೆರಿಕಾ
ತಾ. 8-4-2024, ಸಮಯ – ರಾತ್ರಿ 11.53, ಸ್ಥಳ : ನ್ಯೂಯಾರ್ಕ್‌

ಈ ದೇಶದ ಭಾಗ್ಯ ಹಾಗೂ ಕರ್ಮಸ್ಥಾನದಲ್ಲಿ ಹೆಚ್ಚಿನ ಗ್ರಹರಿದ್ದು , ಜಗತ್ತಿನ ಅತ್ಯಂತ ಬಲಿಷ್ಠ ಹಾಗೂ ಸಂಪನ್ನ ರಾಷ್ಟ್ರವಾಗಿ ಇದರ ಸ್ಥಾನ ಅಬಾಧಿತವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಸಂಘರ್ಷವಿದ್ದರೂ ಸ್ಥಿರತೆ ಇರುತ್ತದೆ. ರಫ್ತು, ವಿದೇಶಿ ವಿನಿಮಯ ಚೆನ್ನಾಗಿರುತ್ತದೆ. ಸಮುದ್ರದ ಪಾರಮ್ಯ , ವಿದೇಶ ವ್ಯವಹಾರವೂ ಅನಿಯಂತ್ರಿತವಾಗಿರುತ್ತವೆ. ಆದರೆ ಅಷ್ಟಮದ ಕುಜ-ಶನಿಗಳ ಯೋಗದಿಂದಾಗಿ ಪ್ರಕೃತಿ ವಿಕೋಪಗಳಾದ ಅಗ್ನಿ , ವಾಯು, ಜಲ ದುರಂತಕ್ಕೆ ದೇಶ ಪಕ್ಕಾಗಲಿದೆ.

ಮಾದಕ ದ್ರವ್ಯ ವ್ಯವಹಾರ ಹಾಗೂ ಮಾದಕ ವಸ್ತು ಬಳಕೆಯ ಚಟಕ್ಕೆ ಬಿದ್ದ ಮಕ್ಕಳ ಹಾಗೂ ವಯಸ್ಕರ ಸಮಸ್ಯೆ ದೊಡ್ಡದಾಗಿ ಕಾಡುವುದು. ದೇಶದಲ್ಲಿ ತೀವ್ರ ಆರ್ಥಿಕ ಕುಸಿತ ಕಂಡುಬರುವುದು. ರಾಷ್ಟ್ರದ ನಾಯಕರೊಬ್ಬರಿಗೆ ಗಂಡಾಂತರವಿದೆ. ದೇಶದ ಶ್ರಮಿಕ ವರ್ಗ ಹಾಗೂ ವಿದ್ಯಾರ್ಥಿಗಳ ಸಮುದಾಯದ ಅಸಮಾಧಾನ ಹಾಗೂ ಅಸಹನೆ ಹೆಚ್ಚುವುದು. ಸಾಮಾಜಿಕ
ಸಮಸ್ಯೆಯ ಜೊತೆಗೆ ಕೆಲವೊಂದು ಕ್ಷೇತ್ರಗಳಲ್ಲಿ ಆರ್ಥಿಕ ಕುಸಿತವೂ ಸಮಸ್ಯೆ ತಂದೊಡ್ಡಬಹುದು. ಆದರೆ ಭಾಗ್ಯ, ಕರ್ಮದ ಅಧಿಪತಿಗಳಾದ ಗ್ರಹರಿಂದಾಗಿ ವಿಶ್ವದ ದೊಡ್ಡಣ್ಣನ ಸ್ಥಾನ ಹಾಗೂ ಪಾತ್ರ ಅಬಾಧಿತವಾಗಿರಲಿದೆ. ಗ್ರಹಣಗಳು
ಸಂಭವಿಸುವ ಪ್ರಯುಕ್ತ ಭೂಕಂಪ, ಕಾಳಿYಚ್ಚು ಮೊದಲಾದ ನೈಸರ್ಗಿಕ ತೊಂದರೆಗಳಿವೆ.

ರಷ್ಯಾ
ತಾ. 8-4-2024, ಸಮಯ – ರಾತ್ರಿ 11.52, ಸ್ಥಳ : ಮಾಸ್ಕೋ

ಶತ್ರುಸ್ಥಾನದಲ್ಲಿರುವ ಲಗ್ನಾಧಿಪತಿ, ಶತ್ರುಸ್ಥಾನಾಧಿಪತಿ ಗುರುವಿನ ಶತ್ರುವಾದ ಶುಕ್ರನ ನಕ್ಷತ್ರ ಸ್ಥಿತಿ, ಪಂಚಮದ ಕುಜ-ಶನಿಯೋಗ ಇವು ದೇಶದಲ್ಲಿ ಯುದ್ಧ ಹಾಗೂ ಅಶಾಂತಿ ಮುಂದುವರಿಯುವ ಲಕ್ಷಣವನ್ನು ತೋರಿಸುತ್ತವೆ. ದೇಶದ ಪ್ರಜೆಗಳಿಗೆ ಮಾನಸಿಕ ನೆಮ್ಮದಿಯೆನ್ನುವುದು ಅಕ್ಷರಶಃ ಮರೀಚಿಕೆಯಾಗಲಿದೆ. ರಷ್ಯಾ-ಉಕ್ರೇನ್‌ ಯುದಟಛಿ ಮುಂದುವರಿಯುವ ಕಾರಣ ಅಗಾಧ
ಪ್ರಮಾಣದ ಸೈನ್ಯ ನಾಶ, ಆರ್ಥಿಕ ಸಂಕಷ್ಟ ಉಂಟಾಗಲಿವೆ. ಪ್ರಜೆಗಳ ತೀವ್ರ ವಿರೋಧವನ್ನೂ ಆಡಳಿತ ವ್ಯವಸ್ಥೆ ಲೆಕ್ಕಿಸಲಾರದು. ದೇಶ ಆರ್ಥಿಕ ಹಿಂಜರಿತ ಕಾಣುವ ಸಂಭವವಿದೆ. ರಾಜಕೀಯ ಮುಖಂಡರೂ ರೋಗ-ರುಜಿನಗಳಿಗೆ ಬಲಿಯಾಗುವರು. ದೇಶದ ಪ್ರಜನನ ಸಾಮರ್ಥ್ಯ ತೀವ್ರವಾಗಿ ಕುಂಠಿತವಾಗುವುದು. ಆಹಾರದ ಕೊರತೆ ಕಾಡುವುದು. ವಿದೇಶ ನೀತಿಯಲ್ಲೂ ಕಚ್ಚಾಟ ಕಾಣಿಸೀತು.

ಸಪ್ತಮದ ಬುಧ-ಗುರುಗಳಿಂದ ದೇಶವು ಸಮಸ್ಯೆಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು. ವಿಶ್ವಸಂಸ್ಥೆಯಲ್ಲೂ ಮುಜುಗರದ ಸನ್ನಿವೇಶ ಎದುರಿಸಬೇಕಾಗುತ್ತದೆ. ದೇಶದ ಮುಖಂಡರಿಗೆ ತೀವ್ರ ಅನಾರೋಗ್ಯ ಯಾ ಕಂಟಕವಿದೆ. ಮಧ್ಯಪ್ರಾಚ್ಯ ದೇಶಗಳೂ, ಜಪಾನ್‌ ಮೊದಲಾದ ದೇಶಗಳೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುವು. ಆಫ್ರಿಕಾದ ದೇಶಗಳಲ್ಲಿ ಆಹಾರದ ಕೊರತೆಯೊಂದಿಗೆ ಬರಗಾಲದ ಬಿಸಿ, ಆಂತರಿಕ ಕ್ಷೋಭೆಯು ನೆಮ್ಮದಿ ಕೆಡಿಸುತ್ತದೆ.

ಕರ್ನಾಟಕ ಸರಕಾರ ತಾ. 20-5-2023, ಸಮಯ : ರಾತ್ರಿ 12.30, ಸ್ಥಳ : ಬೆಂಗಳೂರು

ಕರ್ನಾಟಕ ಸರಕಾರ ಕಳೆದ ವರ್ಷ ಅಧಿಕಾರಕ್ಕೆ ಬಂದ ಕಾಲದ ಗ್ರಹಸ್ಥಿತಿಯನ್ನು ಮೇಲಿನ ಕುಂಡಲಿಯಿಂದ ತಿಳಿಯಬಹುದು.
ಕರ್ಮಸ್ಥಾನದಲ್ಲಿ ಲಗ್ನಾಧಿಪತಿ ದಿಗ್ಬಲದಿಂದ ಕೂಡಿಕೊಂಡಿರುತ್ತಾನೆ. ಅಂಶದಲ್ಲೂ ಲಗ್ನದಲ್ಲೂ ಗುರುವಿದ್ದು ಲಗ್ನಾಧಿಪತಿ
ಉಚ್ಚಾಂಶದಲ್ಲಿರುತ್ತಾನೆ. ಆದುದರಿಂದ ಸರಕಾರ ಭದ್ರವಾಗಿ ಸ್ಥಾಪನೆಯಾಗಿದೆ. ಆದರೆ, ಪ್ರತಿಪಕ್ಷ ಸ್ಥಾನವಾದ ಸಪ್ತಮದಲ್ಲಿ ಬಲಿಷ್ಠ ಶನಿಯಿದ್ದು , ಪ್ರತಿಪಕ್ಷದಿಂದ ಪ್ರಬಲವಾದ ಹೋರಾಟವನ್ನು ನಿರೀಕ್ಷಿಸಬಹುದು. ಚಂದ್ರದಶೆ ನಡೆಯುತ್ತಿದ್ದು , ಚಂದ್ರ ಉಚ್ಚನಾದರೂ ಅಸ್ತಂಗತನಾಗಿದ್ದಾನೆ.

ಕೃಷ್ಣ ಪ್ರತಿಪದ್‌ “ಕುಹೂ’ ಯೋಗದಲ್ಲಿ ಸರಕಾರ ರಚನೆಯಾದುದು ಪ್ರಬಲವಾದ ದೋಷ. ಆರ್ಥಿಕ ಬಿಕ್ಕಟ್ಟನ್ನು ರಾಜ್ಯ ಎದುರಿಸಬೇಕಾಗುತ್ತದೆ. ಧನಾಧಿಪತಿಗೆ ರಾಹು ಯೋಗ; ಧನಕಾರಕನಿಗೂ ಗುರು-ಚಾಂಡಾಲ ಯೋಗ. ತೀವ್ರವಾದ ಜಲಕ್ಷಾಮ, ಬಿಸಿಲಿನ ಬೇಗೆ ಹಾಗೂ ಬರಗಾಲದಿಂದ ರಾಜ್ಯ ಸರಕಾರ ಕಂಗಾಲು ಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೌರವಯುತವಾದ ಸ್ಥಾನವನ್ನು (ಕನಿಷ್ಠ ಐದು) ಗಳಿಸುವುದು ಕೂಡ ಕಷ್ಟಸಾಧ್ಯ. ಚತುರ್ಥಾಧಿಪತಿ ನೀಚನಾಗಿ ವ್ಯಯಸ್ಥನಾಗಿರುವ ಕಾರಣ, ಚುನಾವಣೆಯ ಅನಂತರ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಮಧ್ಯೆ ಭಿನ್ನಮತ ತೀವ್ರವಾಗುವುದು. ಆದರೆ, ಹೈಕಮಾಂಡ್‌ ಮುಖ್ಯಮಂತ್ರಿಯ ಬದಲಾವಣೆ ಮಾಡದು. ಆಡಳಿತ ಪಕ್ಷದಲ್ಲಿ ಪ್ರಬಲ ವ್ಯಕ್ತಿಯೊಬ್ಬರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವರು. ಆರ್ಥಿಕ ಬಿಕ್ಕಟ್ಟಿನಿಂದ ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಯೋಜನೆಗಳಿಗ ತೊಡಕಾಗುವುದು. ದಶಮದ ರವಿ-ಚಂದ್ರರಿಗೆ ಮಾಂದಿಯೋಗದಿಂದ ಸರಕಾರದ ನೇ ತೃತ್ವ ವಹಿಸಿದವರಿಗೆ ನೆಮ್ಮದಿಯಿರದು. ಪ್ರತಿಪಕ್ಷವಾದ ಬಿಜೆಪಿ-ಜೆಡಿಎಸ್‌ ಕೂಟ 20-23ಕ್ಕೂ ಹೆಚ್ಚು ಸ್ಥಾನ ಗಳಿಸಬಹುದು.

*ಜ್ಯೋತಿಷರತ್ನ ವಿದ್ವಾನ್‌ ಕೆ.ಶ್ರೀಪತಿ ಉಪಾಧ್ಯಾಯ

Advertisement

Udayavani is now on Telegram. Click here to join our channel and stay updated with the latest news.

Next