Advertisement

YSRCP; ಜಗನ್‌ ಕಚೇರಿಗೆ 42 ಎಕ್ರೆ ಭೂಮಿ,33 ವರ್ಷದ ಭೋಗ್ಯಕ್ಕೆ ಕೇವಲ 1 ಸಾವಿರ!

12:47 AM Jun 24, 2024 | Team Udayavani |

ಅಮರಾವತಿ: ಋಷಿಕೊಂಡ ಬೆಟ್ಟದ ಅರಮನೆ, ವೈಎಸ್‌ಆರ್‌ಸಿಪಿ ಅಕ್ರಮ ಕಚೇರಿ ನೆಲಸಮ ವಿವಾದದ ಬೆನ್ನಲ್ಲೇ ಆಂಧ್ರಪ್ರದೇಶ ಮಾಜಿ ಸಿಎಂ ಜಗನ್‌ ಸರಕಾರದ ಅವಧಿಯ ಮತ್ತೂಂದು ಹಗರಣವನ್ನು ಆಡಳಿತಾರೂಢ ಟಿಡಿಪಿ ಬಯಲಿಗೆ ಎಳೆದಿರುವುದಾಗಿ ಹೇಳಿಕೊಂಡಿದೆ. ಜಗನ್‌ ತಮ್ಮ ಪಕ್ಷದ ಕಚೇರಿಗಳನ್ನು ನಿರ್ಮಿಸಲು 26 ಜಿಲ್ಲೆಗಳಲ್ಲಿ 42 ಎಕ್ರೆ ಭೂಮಿ ಹಂಚಿಕೆ ಮಾಡಿದ್ದು, ಪ್ರತೀ ಎಕ್ರೆ ಭೂಮಿಯನ್ನು 33 ವರ್ಷಕ್ಕೆ ಕೇವಲ 1 ಸಾವಿರ ರೂ.ಗಳಿಗೆ ಲೀಸ್‌ಗೆ ನೀಡಿದ್ದಾರೆಂದು ಆರೋಪಿಸಿದೆ.

Advertisement

ಆಂಧ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ನಾರಾ ಲೋಕೇಶ್‌ ಈ ಆರೋಪ ಮಾಡಿದ್ದಾರೆ. “ಜಗನ್‌ ಅವರೇ, 26 ಜಿಲ್ಲೆಗಳಲ್ಲಿ 42 ಎಕ್ರೆ ಭೂಮಿಯನ್ನು ನೀವು ನಿಮ್ಮ ವೈಎಸ್‌ಆರ್‌ಸಿಪಿ ಕಚೇರಿಗಳ ನಿರ್ಮಾಣಕ್ಕೆಂದು ಭೋಗ್ಯಕ್ಕೆ ನೀಡಿದ್ದೀರಿ. ಅದೂ 33 ವರ್ಷಗಳ ಅವಧಿಯ ಭೋಗ್ಯಕ್ಕೆ ಪ್ರತೀ ಎಕ್ರೆ ಭೂಮಿಗೆ ನೀವು ವಿಧಿಸಿರುವ ಬೆಲೆ ಬರೀ 1,000 ರೂ.!’ ಎಂದಿದ್ದಾರೆ. 12ಕ್ಕೂ ಅಧಿಕ ವೈಎಸ್‌ಆರ್‌ಸಿಪಿ ಕಚೇರಿಗಳ ಫೋಟೋವನ್ನೂ ಹಂಚಿ ಕೊಂಡಿದ್ದಾರೆ. ಜತೆಗೆ ನೀವು ಗುತ್ತಿಗೆ ನೀಡಿರುವ 42 ಎಕ್ರೆ ಭೂಮಿಯ ಮೌಲ್ಯ ಬರೋಬ್ಬರಿ 600 ಕೋಟಿ ರೂ.ಆಗಿದ್ದು, ಈ ಹಣದಲ್ಲಿ 4,200 ಬಡವರಿಗೆ ಪ್ರತಿಯೊಬ್ಬ ರಿಗೂ ಒಂದು ಸೆಂಟ್‌ (435.56 ಚದರ ಅಡಿ)ವಂತೆ ಭೂಮಿ ಕೊಡಬಹುದಿತ್ತು. ರಿಷಿಕೊಂಡ ಅರಮನೆಗೆ ಮಾಡಿರುವ ವೆಚ್ಚದಲ್ಲಿ 25,000 ಜನರಿಗೆ ಮನೆ ಕಟ್ಟಿಸಿಕೊಡಬಹುದಿತ್ತು ಎಂದಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

ವೈಎಸ್ಸಾರ್‌ಸಿಪಿ ತಿರುಗೇಟು
ಟಿಡಿಪಿ ಆರೋಪಕ್ಕೆ ಎಕ್ಸ್‌ನಲ್ಲಿ ವೈಎಸ್‌ಆರ್‌ಸಿಪಿ ತಿರುಗೇಟು ನೀಡಿದ್ದು, 2014ರಿಂದ 2019ರ ಅವಧಿಯಲ್ಲಿ ಟಿಡಿಪಿ ಸರಕಾರವು ಸಾವಿರಾರು ಕೋ. ರೂ. ಮೌಲ್ಯದ ಭೂಮಿಯನ್ನು ಅತ್ಯಲ್ಪ ಮೊತ್ತಕ್ಕೆ ಹಂಚಿಕೆ ಮಾಡಿತ್ತು ಎಂದಿದೆ.

ಟಿಡಿಪಿಯಿಂದ 4 ಸುದ್ದಿ ವಾಹಿನಿಗಳ ಪ್ರಸಾರಕ್ಕೆ ತಡೆ: ಜಗನ್‌ ಪಕ್ಷ ಆರೋಪ
ಆಂಧ್ರಪ್ರದೇಶದಲ್ಲಿ ಟಿಡಿಪಿ ಮತ್ತು ವಿಪಕ್ಷ ವೈಎಸ್‌ಆರ್‌ಸಿಪಿ ನಡುವಿನ ಸಮರ ಈಗ ಚಾನೆಲ್‌ಗ‌ಳ ಮೇಲೆ ನಿಷೇಧ ಹೇರುವ ಹಂತಕ್ಕೆ ತಲುಪಿದೆಯೇ?ಮಾಜಿ ಸಿಎಂ ಜಗನ್‌ರೆಡ್ಡಿ ನೇತೃತ್ವದ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷ ಇಂಥದ್ದೊಂದು ಆರೋಪ ಮಾಡಿದೆ. ಟಿವಿ9, ಎನ್‌ಟಿವಿ, 10ಟಿವಿ ಮತ್ತು ಸಾಕ್ಷಿ ಟಿವಿಗಳನ್ನು ಪ್ರಸಾರ ಮಾಡಬಾರದು ಎಂದು ಕೇಬಲ್‌ ಆಪರೇಟರ್‌ಗಳಿಗೆ ಮೌಖಿಕವಾಗಿ ಸಂದೇಶ ರವಾನೆಯಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಮೈತ್ರಿಕೂಟದ ಸರಕಾರವೇ ಕಾರಣ ಎಂದು ವೈಎಸ್‌ಆರ್‌ಸಿಪಿ ರಾಜ್ಯಸಭಾ ಸದಸ್ಯ ಎಸ್‌.ನಿರಂಜನ ರೆಡ್ಡಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ (ಟ್ರಾಯ್‌)ಕ್ಕೆ ದೂರು ನೀಡಿದ್ದಾರೆ.

ಅಸೆಂಬ್ಲಿ, ಲೋಕಸಭೆ ಚುನಾವಣೆ ಬಳಿಕ ಈ ರೀತಿ ನಡೆದಿದೆ ಎಂದೂ ಅವರು ಆರೋಪಿಸಿದ್ದಾರೆ. ಇದೇ ವೇಳೆ ಕೇಬಲ್‌ ಆಪರೇಟರ್‌ಗಳು ಕೂಡ ಮಾಜಿ ಸಿಎಂ ಜಗನ್ಮೋಹನ ರೆಡ್ಡಿಯವರ ವೈಎಸ್‌ಆರ್‌ಸಿಪಿಗೆ ಬೆಂಬಲ ನೀಡುವ 4 ಚಾನೆಲ್‌ಗ‌ಳನ್ನು ಪ್ರಸಾರ ಮಾಡಬಾರದು ಎಂಬ ಸೂಚನೆ ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next