Advertisement

ಸಮಾಜ ಬದಲಾವಣೆಗೆ ನೀವೂ ಬದಲಾಗಿ

12:08 PM Nov 19, 2018 | |

ಮೈಸೂರು: ಯುವಜನತೆ ತೃಪ್ತಿ ಹಾಗೂ ಮಾನವೀಯ ಗುಣ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಸಲಹೆ ನೀಡಿದರು. 

Advertisement

ನಗರದ ವಿದ್ಯಾವರ್ಧಕ ಕಾನೂನು ಕಾಲೇಜು ವತಿಯಿಂದ ಕಾಲೇಜಿನ ಚಿಕ್ಕಬೋರಯ್ಯ ಸ್ಮಾರಕ ಹಾಲ್‌ನಲ್ಲಿ ಆಯೋಜಿಸಿದ್ದ “ಭಾರತದಲ್ಲಿ ಭ್ರಷ್ಟಾಚಾರ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿನಲ್ಲಿ ಎಷ್ಟೇ ಹಣ ಗಳಿಸಿದರೂ, ಪ್ರಯೋಜನವಿಲ್ಲ. ಆದರೆ, ರಾಜಕಾರಣಿಗಳಿಗೆ ಹಣಗಳಿಕೆಯಲ್ಲಿ ತೃಪ್ತಿ ಎನ್ನುವುದೇ ಇಲ್ಲದಂತಾಗಿದೆ.

ಹೀಗಾಗಿ ಅನೇಕರು ಅಧಿಕಾರಕ್ಕೆ ಹಾಗೆ ಬಂದಿಲ್ಲ, ಇಂತಿಷ್ಟು ಹಣ ಕೊಟ್ಟು ಬಂದಿದ್ದೇನೆ ಎಂದು ಅಧಿಕಾರಿಗಳೂ ಹೇಳುತ್ತಾರೆ. ಆದ್ದರಿಂದ ಯುವಜನತೆ ತೃಪ್ತಿ ಮತ್ತು ಮಾನವೀಯ ಗುಣವನ್ನು ಬೆಳೆಸಿಕೊಳ್ಳಬೇಕಿದ್ದು, ಆಗ ಮಾತ್ರವೇ ಸಮಾಜದಲ್ಲಿ ಬದಲಾವಣೆ ತರಬಹುದು. ಇದರ ಹೊರತು ನಾನೇಕೆ ಬದಲಾಗಬೇಕು ಎಂಬ ಭಾವನೆ ಮೈಗೂಡಿಸಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ಪಠ್ಯಪುಸ್ತಕಗಳಲ್ಲಿ ನೀತಿ ಪಾಠಗಳು ಮರೆಯಾಗುತ್ತಿದ್ದು, ಮೌಲ್ಯ ಬೋಧನೆ ಕ್ಷೀಣಿಸುತ್ತಿದೆ. ಇದರಿಂದಾಗಿ ಮಾನವೀಯತೆ-ತೃಪ್ತಿ ವಿಚಾರಗಳು ಇಲ್ಲವಾಗಿದೆ. ಇವೆಲ್ಲರ ಪರಿಣಾಮ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದ್ದು, ಪ್ರತಿಯೊಬ್ಬರು ಮಾನವೀಯತೆ ಇಲ್ಲದ ವ್ಯವಸ್ಥೆಯಲ್ಲಿದ್ದೇವೆ. ಈ ಹಿನ್ನೆಲೆಯಲ್ಲಿ ಪಠ್ಯಪುಸ್ತಕಗಳಲ್ಲಿ ಮೌಲ್ಯ, ನೀತಿಪಾಠ ಅಳವಡಿಕೆ ಅಗತ್ಯವಿದೆ ಎಂದರು.

ನೀವು ಹಣಗಳಿಸಿ, ಶ್ರೀಮಂತರಾಗಿ ಮೋಜು ಮಾಡಿ. ಆದರೆ, ಆ ಹಣ ನಿಮ್ಮ ಪರಿಶ್ರಮದಿಂದ ಬಂದಿರಬೇಕು. ಬದಲಿಗೆ ಇನ್ನೊಬ್ಬರ ಜೇಬಿಗೆ ಕೈ ಹಾಕುವ ಕೆಲಸವನ್ನು  ಮಾಡಬೇಡಿ ಎಂದು ಹೇಳಿದರು. ಇಂದು ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ವ್ಯವಸ್ಥೆಯ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.

Advertisement

ನಾಲ್ಕು ಅಂಗಗಳಲ್ಲಿ ಕೆಲಸ ಮಾಡುವ ರಾಜಕಾರಣಿಗಳು, ಅಧಿಕಾರಿಗಳಿಗೆ ಹಣಗಳಿಕೆಯಲ್ಲಿ ತೃಪ್ತಿ ಇಲ್ಲದಂತಾಗಿದ್ದಾರೆ. ಇನ್ನೂ ಕಾರ್ಯಾಂಗದಲ್ಲಿ ಯಾವುದೇ ಹುದ್ದೆ ನೀಡಲು ಇಂತಿಷ್ಟು ಹಣ ಪಡೆಯಲಾಗುತ್ತಿದ್ದು, ಪರಿಣಾಮ ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಹಗರಣಗಳಲ್ಲಿ ಅಧಿಕಾರಿಗಳ ಕೈವಾಡವಿದೆ. ನ್ಯಾಯಾಂಗದಲ್ಲಿ ಒಂದು ಕೇಸ್‌ ಇತ್ಯರ್ಥವಾಗಲು 15 ವರ್ಷಗಳೇ ಬೇಕಾದ ಪರಿಸ್ಥಿತಿ ಇದೆ.

ಇನ್ನೂ ಪತ್ರಿಕಾರಂಗದಲ್ಲಿ ಕಾಸಿಗಾಗಿ ಸುದ್ದಿ(ಪೇಯ್ಡ ನ್ಯೂಸ್‌) ಪರಿಕಲ್ಪನೆ ಜಾರಿಯಲ್ಲಿದ್ದು, ಜತೆಗೆ ಹಲವು ಮಾಧ್ಯಮಗಳು ರಾಜಕಾರಣಿಗಳು, ಉದ್ಯಮಿಗಳ ಹಿಡಿತದಲ್ಲಿ ಕೆಲಸ ಮಾಡುತ್ತಿವೆ ಎಂದು ವಿಷಾದಿಸಿದರು. ಕಾರ್ಯಕ್ರಮದಲ್ಲಿ ಯುಎಸ್‌ಎಐಡಿ ಸಲಹೆಗಾರ ಮತ್ತು ಎಂಜಿಪಿ ಸಂಸ್ಥಾಪಕ ಭಾ.ಮಿ. ಶೆಣೈ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಖಜಾಂಚಿ ಎಸ್‌.ಎನ್‌.ಲಕ್ಷಿನಾರಾಯಣ, ಕಾಲೇಜು ಪ್ರಾಂಶುಪಾಲ ಕೆ.ಬಿ.ವಾಸುದೇವ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next