ಪಾಟ್ನಾ: ಬಿಹಾರದ ವಲಸೆ ಕಾರ್ಮಿಕರನ್ನು ತಮಿಳುನಾಡಿನಲ್ಲಿ ಅಮಾನವೀಯವಾಗಿ ಥಳಿಸುತ್ತಿದ್ದಾರೆ ಎಂದು ನಕಲಿ ವಿಡಿಯೋವನ್ನು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ಮೂಲದ ಖ್ಯಾತ ಯೂಟ್ಯೂಬರ್ ಮನೀಶ್ ಕಶ್ಯಪ್ ಪೊಲೀಸರಿಗೆ ಶರಣಾಗಿದ್ದಾರೆ.
ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ಮಾಡಿ, ಅಮಾನವೀಯವಾಗಿ ಥಳಿಸಲಾಗುತ್ತಿದೆ ಎನ್ನುವ ವಿಡಿಯೋವನ್ನು ಯೂಟ್ಯೂಬರ್ ಮನೀಶ್ ಕಶ್ಯಪ್ ಹಂಚಿಕೊಂಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ಸಂಬಂಧ ಬಿಹಾರ ಸಿಎಂ ನಿತೀಶ್ ಕೂಡ ಟ್ವಿಟರ್ ನಲ್ಲಿ ಕಳವಳ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಅಂತರ್ ಜಾತಿ ಸಂಬಂಧಕ್ಕೆ ಮನೆಯವರ ವಿರೋಧ: ದೂರ ಹೋಗಿ ಮದುವೆಯಾದ ಖ್ಯಾತ ಯೂಟ್ಯೂಬರ್
ಇದಾದ ಕೆಲ ಸಮಯದ ಬಳಿಕ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ತಮಿಳುನಾಡು ಪೊಲೀಸರು ಹೋದಾಗ ಈ ವಿಡಿಯೋ ನಕಲಿ ಎನ್ನುವುದು ಗೊತ್ತಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಅಮನ್ ಕುಮಾರ್, ರಾಕೇಶ್ ತಿವಾರಿ, ಯುವರಾಜ್ ಸಿಂಗ್ ರಜಪೂತ್ ಎಂಬ ಆರೋಪಿಗಳನ್ನು ಬಂಧಿಸಿದೆ.
ವಿಶೇಷ ತನಿಖಾ ತಂಡಗಳು ಪ್ರಮುಖ ಆರೋಪಿ ಆಗಿರುವ ಮನೀಶ್ ಕಶ್ಯಪ್ ಮೇಲೆ ಪ್ರಕರಣ ದಾಖಲಿಸಿಕೊಂಡು ಅವರನ್ನು ನಾನಾ ಕಡೆ ಹುಡುಕಲಾಗುತ್ತಿತ್ತು. ಬಂಧನದ ಭೀತಿಯಿಂದ ಮನೀಶ್ ಕಶ್ಯಪ್ ಬಿಹಾರದ ಚಂಪಾರಣ್ ಪೊಲೀಸರ ಮುಂದೆ ಶನಿವಾರ ( ಮಾ. 18 ರಂದು) ಶರಣಾಗಿದ್ದಾರೆ.
ಕಾರ್ಮಿಕರನ್ನು ಥಳಿಸುವ 30 ನಕಲಿ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಸಂಬಂಧ ತಮಿಳುನಾಡಿನಲ್ಲಿ 13 ಪ್ರಕರಣಗಳು ದಾಖಲಾಗಿದೆ. ಬಿಹಾರ ಸರ್ಕಾರ 4 ಉನ್ನತ ಅಧಿಕಾರಿಗಳ ತಂಡವನ್ನು ಪ್ರಕರಣ ಸಂಬಂಧ ರಚಿಸಿತ್ತು.