Advertisement
ಸುಂದರಿ ಎಂಬವರು 35 ವರ್ಷಗಳಿಂದ ನೆಟ್ಟಾರಿನಲ್ಲಿ ಹಂಚಿನ ಸಣ್ಣ ಮನೆಯಲ್ಲಿ ತನ್ನ ಮಗನೊಂದಿಗೆ ವಾಸವಿದ್ದರು. ಕಟ್ಟಡ ಸಂಖ್ಯೆ, ಪಡಿತರ ಚೀಟಿ, ಆಧಾರ್ ಕಾರ್ಡ್ ಇದ್ದರೂ ಸುಂದರಿ ಅವರಿಗೆ ಉಳಿದುಕೊಳ್ಳಲು ಸರಿಯಾದ ಮನೆ ಇರಲಿಲ್ಲ. ಎರಡು ವರ್ಷಗಳ ಹಿಂದೆ ಇದ್ದ ಸಣ್ಣ ಮನೆಯ ಭಾಗವೂ ಕುಸಿದು ಹೋಗಿತ್ತು. ಸುಂದರಿ ಅವರ ಮಗನೂ ಮಗಳ ಮನೆಗೆ ಹೋದ ಬಳಿಕ ಸುಂದರಿ ಒಬ್ಬಂಟಿಯಾಗಿದ್ದರು. ಹಗಲು ಮನೆಯಲ್ಲಿ ಅಡುಗೆ ಮಾಡಿ, ರಾತ್ರಿ ಮಲಗಲು ಪಕ್ಕದ ಮನೆಗೆ ಹೋಗುತ್ತಿದ್ದರು.
ಸುಂದರಿ ಅವರ ಮನೆಯ ಪರಿಸ್ಥಿತಿಯನ್ನು ಗಮನಿಸಿದ ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಿಖಾಯದ ಅಧ್ಯಕ್ಷ ಜಮಾಲುದ್ದೀನ್ ಕೆ.ಎಸ್., ತಾತ್ಕಾಲಿಕ ಮನೆ ನಿರ್ಮಿಸಿಕೊಡಲು ನಿರ್ಧರಿಸಿ ಬೆಳ್ಳಾರೆ ಗ್ರಾ.ಪಂ.ಗೆ ಮಾಹಿತಿ ನೀಡಿದರು. ವಿಖಾಯದ 20-30 ಯುವಕರ ತಂಡ ರವಿವಾರ ಸುಂದರಿ ಅವರಿಗೆ ಶೀಟ್‌ನ ತಾತ್ಕಾಲಿಕ ಮನೆಯನ್ನು ನಿರ್ಮಿಸಿಕೊಟ್ಟದ್ದಾರೆ. ಭಾರೀ ಮಳೆಯನ್ನೂ ಲೆಕ್ಕಿಸದೆ ಯುವಕರು ಶ್ರಮ ವಹಿಸಿ ಮಹಿಳೆಗೆ ಸೂರು ಒದಗಿಸಿದ್ದಾರೆ. ಗ್ರಾ.ಪಂ., ಟ್ರಸ್ಟ್ ಸಹಕಾರ
ವಿಖಾಯದ ಯುವಕರು ಮನೆ ನಿರ್ಮಿಸಲು ಬೆಳ್ಳಾರೆ ಗ್ರಾ.ಪಂ. ಹಾಗೂ ಬೆಳ್ಳಾರೆಯ ಶಂಸುಲ್ ಉಲಮಾ ಟ್ರಸ್ಟ್ ಸಹಕಾರ ನೀಡಿವೆ. ಮನೆ ನಿರ್ಮಿಸಲು ಬೇಕಾದ ಸಲಕರಣೆಗಳನ್ನು ಒದಗಿಸಲು ಹಲವರು ಮುಂದೆ ಬಂದರು. ಗ್ರಾ.ಪಂ. ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಸಹಕಾರ ನೀಡಿದೆ. ವಿಖಾಯದ ಯುವಕರು ದಿನವಿಡೀ ತಮ್ಮ ಶ್ರಮ ಸೇವೆಯ ಸಹಕಾರ ನೀಡಿದ್ದಾರೆ.
Related Articles
35 ವರ್ಷಗಳಿಂದ ಸುಂದರಿ ಅವರ ಕುಟುಂಬ ಇಲ್ಲಿ ವಾಸವಾಗಿದ್ದರೂ ಜಾಗದ ದಾಖಲೆ ಪತ್ರವಾಗಿಲ್ಲ. ಸುಂದರಿ ಅವರ ಮನೆ ಗೋಮಾಳ ಜಾಗದಲ್ಲಿರುವುದರಿಂದ ಜಾಗದ ದಾಖಲೆ ಇಲ್ಲದೆ ಪಂಚಾಯತ್‌ನ ಮನೆಯೂ ಅವರಿಗೆ ದೊರೆತಿಲ್ಲ. ಮಳೆಗಾಲದಲ್ಲಿ ಪಕ್ಕದ ಮನೆಯಲ್ಲಿ ಮಲಗುತ್ತಿದ್ದ ಸುಂದರಿಯ ಪರಿಸ್ಥಿತಿಗೆ ತತ್‌ಕ್ಷಣ ಸ್ಪಂದಿಸಿದ ವಿಖಾಯದ ಯುವಕರು ಸುಂದರಿ ಅವರಿಗೆ ವಾಸಿಸಲು ಯೋಗ್ಯವಾದ ಮನೆ ನಿರ್ಮಿಸಿಕೊಟ್ಟಿದ್ದಾರೆ.
Advertisement
ಜಾಗದ ದಾಖಲೆಗೆ ಪ್ರಯತ್ನಸುಂದರಿ ಅವರ ಜಾಗದ ದಾಖಲೆಯ ಸಮಸ್ಯೆಯ ಬಗ್ಗೆ ತಹಶೀಲ್ದಾರರಿಗೆ ಗಮನಕ್ಕೆ ತಂದಿದ್ದೇವೆ. ಸುಮಾರು 35 ವರ್ಷಗಳಿಂದ ಸುಂದರಿ ಅವರ ಕುಟುಂಬ ಇಲ್ಲಿ ವಾಸವಾಗಿದ್ದು, ತಹಶೀಲ್ದಾರರು 94ಸಿ ಯಲ್ಲಿ ಜಾಗದ ದಾಖಲೆಯನ್ನು ಶೀಘ್ರವಾಗಿ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಅನಿಲ್ ರೈ ಚಾವಡಿಬಾಗಿಲು ಅವರು ಹೇಳಿದರು. ಆಶ್ರಯ ಮನೆ ಶೀಘ್ರ ಒದಗಿಸಿ
ಸುಂದರಿ ಅವರ ಮನೆ ಪರಿಸ್ಥಿತಿಯ ಬಗ್ಗೆ ವಿಖಾಯದ ಸದಸ್ಯರಲ್ಲಿ ಹೇಳಿದಾಗ ಮನೆ ನಿರ್ಮಿಸಲು ಯುವಕರು ಮುಂದೆ ಬಂದು ಸಹಕರಿಸಿದ್ದಾರೆ. ಗ್ರಾ.ಪಂ. ಹಾಗೂ ಶಂಸುಲ್ ಉಲಮಾ ಟ್ರಸ್ಟ್ ಸಹಕಾರದಿಂದ ಸುಂದರಿ ಅವರಿಗೆ ವಾಸಿಸಲು ಯೋಗ್ಯವಾದ ಮನೆ ನಿರ್ಮಿಸಿದ್ದೇವೆ. ಇವರ ಜಾಗದ ಸಮಸ್ಯೆ ಸರಿಪಡಿಸಿ ಪಂಚಾಯತ್ ಆಶ್ರಯ ಮನೆ ಶೀಘ್ರ ಒದಗಿಸಲಿ.
– ಜಮಾಲುದ್ದೀನ್ ಕೆ.ಎಸ್.,
ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಿಖಾಯ ಶೀಘ್ರವೇ ಆಶ್ರಯ ಮನೆ
ಸುಂದರಿ ಅವರಿಗೆ ಸದ್ಯ ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಜಾಗದ ದಾಖಲೆ ನೀಡಲು ಇರುವ ಸಮಸ್ಯೆಯನ್ನು ಸರಿಪಡಿಸಿದ ಬಳಿಕ ಅವರಿಗೆ ಪಂಚಾಯತ್‌ನಿಂದ ಆಶ್ರಯ ಮನೆ ಒದಗಿಸಲಾಗುವುದು.
– ಧನಂಜಯ ಕೆ.ಆರ್.
ಪಿಡಿಒ, ಬೆಳ್ಳಾರೆ - ಉಮೇಶ್ ಮಣಿಕ್ಕಾರ