ಬೆಂಗಳೂರು: ಈ ದೇಶದ ಯುವಕರಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರುವ ಶಕ್ತಿಯಿದೆ. ದೇಶದ ಜನಸಂಖ್ಯೆಯಲ್ಲಿ 30 ವರ್ಷದ ಒಳಗಿನ ಯುವಕ ಯುವತಿಯರು 60% ಇದ್ದಾರೆ. ಭಾರತದಲ್ಲಿ 107 ಕೋಟಿ ಜನರಿಗೆ ಕೆಲಸ ಮಾಡುವ ಶಕ್ತಿ ಇದೆ. ಆದರೆ 107 ಕೋಟಿಯಲ್ಲಿ 40% ಒಳಗೆ ಜನರಿಗೆ ಮಾತ್ರ ಕೆಲಸವಿದೆ. ಜಗತ್ತಿನಲ್ಲಿ ಯಾವುದೇ ದೇಶದಲ್ಲಿ ಇಷ್ಟೊಂದು ಯುವ ಶಕ್ತಿಯಿಲ್ಲ. ಆದರೆ ದುರದೃಷ್ಟ ಯುವ ಶಕ್ತಿ ಬಳಸಿಕೊಳುವುದಕ್ಕೆ ಆಗುತ್ತಿಲ್ಲ. ಮೋದಿ ಪ್ರಧಾನಿಯಾದ ಮೇಲೆ ಯುವಕರಿಗೆ ಕೆಲಸವೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಯುವ ಜನೋತ್ಸವ ವಿಸ್ತೃತ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವ ಶಕ್ತಿ ಇರುವ ನಮ್ಮ ದೇಶದಲ್ಲಿ ನಿರುದ್ಯೋಗ ತಾಂಡವಾಡುತಿದೆ. ನಗರದಲ್ಲಿ ಪ್ರದೇಶ 9% ಹಾಗೂ ಗ್ರಾಮೀಣ ಪ್ರದೇಶದಲ್ಲಿ 6 % ನಿರುದ್ಯೋಗ ಸಮಸ್ಯೆ ಉಂಟಾಗಿದೆ. ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಖುದ್ದಾಗಿ ಟ್ವೀಟ್ ಮಾಡಿ 2011 ರಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತ 3ನೇ ಸ್ಥಾನದಲ್ಲಿತ್ತು, ಇವಾಗ ಮೋದಿ ಪ್ರಧಾನಿಯಾದ ಮೇಲೆ ವಿಶ್ವದ ಆರ್ಥಿಕತೆಯಲ್ಲಿ ಭಾರತ 164 ಸ್ಥಾನ ಪಡೆದಿದೆ ಎಂದಿದ್ದಾರೆ ಎಂದರು.
ಯುವಕರಿಗೆ ದೊಡ್ಡ ಅವಮಾನ ಯಾರಾದರೂ ಮಾಡಿದ್ದರೆ ಅದು ಪ್ರಧಾನಿ ಮೋದಿ. ಕೇಂದ್ರ ಸರ್ಕಾರ ಅಗ್ನಿಪಥ್ ಎಂಬ ಯೋಜನೆ ತಂದಿದ್ದಾರೆ. ಸೇನೆಯಲ್ಲಿ ಯುವಕರಿಗೆ ನಾಲ್ಕು ವರ್ಷ ಕೆಲಸ ಕೊಡುತ್ತಾರಂತೆ. ನಾಲ್ಕು ವರ್ಷ ಮುಗಿದ ಮೇಲೆ ಯುವಕರು ಏನ ಮಾಡಬೇಕು? 17 ವರ್ಷದ ವಯಸ್ಸಿಗೆ ಸೇನೆಗೆ ಸೇರಿ ಯುವಕರು ಅಲ್ಲಿಂದ ಹೊರಗಡೆ ಬಂದ ಮೇಲೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ನಾರಾಯಣ ಗುರು ಪಠ್ಯವನ್ನು ಸಮಾಜ ವಿಜ್ಞಾನ ವಿಷಯಕ್ಕೆ ವರ್ಗಾಯಿಸಿ: ಸುನೀಲ್ ಕುಮಾರ್ ಒತ್ತಾಯ
ಮೊನ್ನೆ ಪ್ರಧಾನಿ ಮೋದಿ ಬೆಂಗಳೂರು ಮತ್ತು ಮೈಸೂರಿಗೆ ಬಂದಿದ್ದರು. ಎಲ್ಲಿ ಕೂಡ ಪಿಎಂ ಮೋದಿ ಉದ್ಯೋಗ, ರೈತರ ಬಗ್ಗೆ ಮಾತಾಡಿಲ್ಲ. ಯುವಕರು ಉದ್ಯೋಗ ಬೇಡಿದರೆ ಪಕೋಡಾ ಮಾರಿ ಎಂದು ಪ್ರಧಾನಿ ಹೇಳುತ್ತಾರೆ. ನಾನು ಬಾದಾಮಿಲ್ಲಿ ರಥೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ನನ್ನ ಪರ ಘೋಷಣೆ ಕೂಗಿದ್ದರು. ಇನ್ನು ಕೆಲವು ಯುವಕರು ಮೋದಿ, ಮೋದಿ ಎಂದು ಘೋಷಣೆ ಕೂಗಿದರು. ಮೋದಿ ನಿಮ್ಮ ಮನೆ ಹಾಳು ಮಾಡಿದ್ದಾರೆ. ಯಾಕೆ ಮೋದಿ ಮೋದಿ ಅಂತಿರಾ ಎಂದು ನಾನು ಅವರಲ್ಲಿ ಕೇಳಿದೆ ಎಂದರು.