Advertisement

ನಿಟ್ಟೆ ಅರ್ಬಿ ಫಾಲ್ಸ್ ನಲ್ಲಿ ಯುವಕ ನೀರುಪಾಲು

09:53 AM Aug 16, 2019 | keerthan |

ಕಾರ್ಕಳ: ಸೆಲ್ಫಿ ತೆಗೆಯಲು ಹೋಗಿ ಯುವಕನೋರ್ವ ನೀರು ಪಾಲಾದ ಘಟನೆ ನಿಟ್ಟೆ ಅರ್ಬಿಫಾಲ್ಸ್‌ನಲ್ಲಿ ಗುರುವಾರ ಸಂಭವಿಸಿದೆ. ಬೋಳ ಕೃಷ್ಣಮೂಲ್ಯರ ಮಗ ಎಲೆಕ್ಟ್ರೀಷಿಯನ್‌ ಸುದೇಶ್‌ ಬೊಳ (19) ನೀರು ಪಾಲಾದ ಯುವಕ.

Advertisement

ಘಟನೆ ವಿವರ
ನಾಲ್ವರು ಗೆಳೆಯರು ನಿಟ್ಟೆ ಗ್ರಾಮದಲ್ಲಿನ ಅರ್ಬಿ ಫಾಲ್ಸ್‌ಗೆ ತೆರಳಿ ಜಲಪಾತದ ಬದಿಯಲ್ಲಿ ನಿಂತು ಸೆಲ್ಫಿ ತೆಗೆಯುವ ವೇಳೆ ದುರಂತ ಸಂಭವಿಸಿದ್ದು, ಈ ವೇಳೆ ಸುದೇಶ್‌ ಹಾಗೂ ಭರತ್‌ ಕಾಲು ಜಾರಿ ಜಲಪಾತಕ್ಕೆ ಉರುಳಿದರು. ಭರತ್‌ ಈಜು ಬಲ್ಲವರಾಗಿದ್ದು ನೀರಿನಿಂದ ಮೇಲೆರಿ ಬಂದರೆ, ಸುದೇಶ್‌ ನೀರುಪಾಲಾದರು. ಇವರು ಮದ್ಯ ಸೇವನೆ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ.

ರಕ್ಷಣೆಗೆ ಮುಂದಾದ ಭರತ್‌
ಸುದೇಶ್‌ ನೀರಲ್ಲಿ ಮುಳುಗುತ್ತಿರುವ ವೇಳೆ ಭರತರು ರಕ್ಷಣೆಗೆ ಮುಂದಾಗಿದ್ದರು. ಸುದೇಶ್‌ ಅವರನ್ನು ರಕ್ಷಣೆ ಮಾಡಲು ಭರತ್‌ ಸರ್ವ ಪ್ರಯತ್ನ ಮಾಡಿದರಾದರೂ ನೀರಿನ ರಭಸಕ್ಕೆ ಸುದೇಶ್‌ ಅವರನ್ನು ನೀರಿನಿಂದ ಮೇಲೆ ತರಲು ಸಾಧ್ಯವಾಗಿಲ್ಲ.

Advertisement

ಪತ್ತೆಯಿಲ್ಲ
ಗುರುವಾರ ಮಧ್ಯಾಹ್ನ 2:30ರ ವೇಳೆ ಘಟನೆ ಸಂಭವಿಸಿದೆಯಾದರೂ ರಾತ್ರಿ ತನಕ ಸುದೇಶ್‌ ಅವರ ಪತ್ತೆಯಾಗಿಲ್ಲ. ಪೊಲೀಸ್‌ ಇಲಾಖೆ, ಅಗ್ನಿ ಶಾಮಕ ದಳದವರು ಸುದೇಶ್‌ ಪತ್ತೆಗಾಗಿ ಸತತ ಪ್ರಯತ್ನ ನಡೆಸಿದರಾದರೂ ಯಶ ಕಾಣಲಿಲ್ಲ.

ಶಾಂಭವಿ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಕಾರ್ಯಾಚರಣೆಗೂ ತೊಡಕಾಗಿ ಪರಿಣಮಿಸಿದೆ.

ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಎಸ್‌ಐ ನಾಸಿರ್‌ ಹುಸೇನ್‌, ತಹಶೀಲ್ದಾರ್‌ ಪುರಂದರ ಹೆಗ್ಡೆ, ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಡಾ| ಮೇ| ಹರ್ಷ ಕೆ.ಬಿ., ನಿಟ್ಟೆ ಗ್ರಾಮ ಪಂಚಾಯತ್‌ ಪಿಡಿಒ ಸುಧಾಕರ್‌ ಶೆಟ್ಟಿ, ಗ್ರಾಮ ಕರಣಿಕ ಆನಂದ್‌ ಸ್ಥಳಕ್ಕೆ ಭೇಟಿ ನೀಡಿದರು.

ಸುರಕ್ಷತೆಯಿಲ್ಲ
ಕಾರ್ಕಳ ತಾಲೂಕಿನಿಂದ 9 ಕಿ.ಮೀ. ದೂರದಲ್ಲಿರುವ ಈ ಪ್ರಸಿದ್ಧ ಜಲಪಾತ ನೋಡಿ ಕಣ್ಮುಂಬಿಕೊಳ್ಳಲು ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಧಾವಿಸುತ್ತಾರೆ. ಆದರೆ, ಇಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯವಾಗಲಿ, ಸುರಕ್ಷತೆಯ ದೃಷ್ಟಿಯಿಂದ ತಡೆಬೇಲಿ, ಸೂಚನಾ ಫ‌ಲಕವಾಗಲಿ ಇಲ್ಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next