ಬೆಂಗಳೂರು: ಸ್ನೇಹಿತೆ ಜತೆ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ಕೊಠಡಿ ಬಾಡಿಗೆಗೆ ಪಡೆದು ತಂಗಿದ್ದ ಯುವಕ, ಸ್ನಾನಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿರ್ಲೋಸ್ಕರ್ ಲೇಔಟ್‌ನಲ್ಲಿ ನಡೆದಿದೆ. ಬಾಗಲಗುಂಟೆಯ ಕಾರ್ತಿಕ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ಘಟನೆ ಅನುಮಾನಾಸ್ಪದವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು, ಕಾರ್ತಿಕ್ ಜತೆಗೆ ತಂಗಿದ್ದ ಯುವತಿಯ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಕಾರ್ತಿಕ್ ಹಾಗೂ ಆತನೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದ ಯುವತಿ ಸ್ನೇಹಿತರಾಗಿದ್ದು, ಹರ್ಬಲ್ ವಸ್ತುಗಳ ಮಾರಾಟ ಪ್ರತಿನಿಧಿಗಳಾಗಿದ್ದಾರೆ. ಭಾನುವಾರ ಆನ್‌ಲೈನ್ ಮೂಲಕ ಕಿರ್ಲೋಸ್ಕರ್ ಲೇಔಟ್‌ನಲ್ಲಿರುವ ಹೋಟೆಲ್‌ನಲ್ಲಿ ಕೊಠಡಿ ಬುಕ್ ಮಾಡಿ, ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಕೊಠಡಿಗೆ ಆಗಮಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಜೊಮ್ಯಾಟೋ ಮೂಲಕ ಆಹಾರ ತರಿಸಿಕೊಂಡು ಊಟ ಮಾಡಿ ಮಲಗಿದ್ದಾರೆ.
ಬುಧವಾರ ಬೆಳಗ್ಗೆ 6ಗಂಟೆ ಸುಮಾರಿಗೆ ಯುವತಿ ನಿದ್ದೆಯಿಂದ ಎದ್ದಾಗ, ಕಾರ್ತಿಕ್ ಕಂಡಿಲ್ಲ. ಸ್ನಾನಗೃಹದ ಬಾಗಿಲು ತೆರೆಯಲು ಹೋದಾಗ ಅದು ಒಳಗಿನಿಂದ ಲಾಕ್ ಆಗಿತ್ತು. ಆತಂಕಗೊಂಡ ಯುವತಿ, ಹಲವು ಬಾರಿ ಕೂಗಿದರೂ ಒಳಗಿನಿಂದ ಪ್ರತಿಕ್ರಿಯೆ ಬಂದಿಲ್ಲ. ಕೂಡಲೇ ಇಬ್ಬರಿಗೂ ಪರಿಚಯವಿರುವ ಸ್ನೇಹಿತನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾಳೆ. ಆತ ಬಂದ ಬಳಿಕ ಹೋಟೆಲ್ ಸಿಬ್ಬಂದಿ ಜತೆ ಸೇರಿ ಸ್ನಾನ ಗೃಹದ ಬಾಗಿಲು ಓಡೆದು ನೋಡಿದಾಗ ಶವರ್ ಪೈಪ್‌ಗೆ ಬಟ್ಟೆಯಿಂದ ನೇಣುಬಿಗಿದುಕೊಂಡು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಕರೆ ಕುರಿತು ಜಗಳ: ರಾತ್ರಿ 10.30ರ ಸುಮಾರಿಗೆ ಯುವತಿಯ ಮೊಬೈಲ್‌ಗೆ ಯುವಕನೊಬ್ಬ ಕರೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಕಾರ್ತಿಕ್ ಕರೆ ಸ್ವೀಕರಿಸದಂತೆ ಸೂಚಿಸಿದ್ದ. ಆದರೂ ಯುವತಿ ಕಾಲ್ ರಿಸೀವ್ ಮಾಡಿ ಮಾತನಾಡಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು, ಬೈದಾಡಿಕೊಂಡಿದ್ದಾರೆ. ಯುವತಿ ಮಲಗಿದ ಬಳಿಕ ಆಕೆಗೆ ಕರೆ ಮಾಡಿದವನಿಗೆ ತನ್ನ ಮೊಬೈಲ್‌ನಿಂದ ಕರೆ ಮಾಡಿದ್ದ ಕಾರ್ತಿಕ್, “ಕೆಲವೊಂದು ವಿಚಾರ ಮಾತನಾಡುವುದಿದೆ, ಬಾ’ ಎಂದು ಕರೆದಿದ್ದಾನೆ.
ಆತ ಮತ್ತೂಮ್ಮೆ ಸಿಗುವುದಾಗಿ ಹೇಳಿದ್ದಾನೆ. ಇದಾದ ಬಳಿಕ ಕಾರ್ತಿಕ್ ಕೂಡ ಮಲಗಿದ್ದ. ಆದರೆ, ನಸುಕಿನ ಜಾವ ಎದ್ದಿದ್ದ ಕಾರ್ತಿಕ್ ಬೆಡ್‌ಮೇಲೆ ಹಾಕಿದ್ದ ಉದ್ದನೆಯ ಬಟ್ಟೆ ತೆಗೆದುಕೊಂಡು ಸ್ನಾನಗೃಹಕ್ಕೆ ತೆರಳಿ ಶವರ್ ಫೈಪ್‌ಗೆ ನೇಣುಹಾಕಿಕೊಂಡಿದ್ದಾನೆ ಎಂದು ಯುವತಿಯ ವಿಚಾರಣೆ ಹಾಗೂ ಇದುವರೆಗಿನ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಮರಣೋತ್ತರ ಪರೀಕ್ಷೆ ವರದಿ ಬಳಿಕ ಸ್ಪಷ್ಟತೆ: ಘಟನೆ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ದೊರೆತಿಲ್ಲ. ಕಾರ್ತಿಕ್ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಕಾರ್ತಿಕ್ ಸಾವಿನ ಬಗ್ಗೆ ಅನುಮಾನವಿದೆ ಎಂದು ಆತನ ತಂದೆ ಹನುಮಂತರಾಯ ಅವರು ದೂರಿನಲ್ಲಿ ತಿಳಿಸಿದ್ದಾರೆ. ಕಾರ್ತಿಕ್ ಮೃತದೇಹದ ಮರಣೋತ್ತರ ಪರೀಕ್ಷೆ ಗುರುವಾರ ನಡೆಯಲಿದ್ದು, ವರದಿ ಬಂದ ಬಳಿಕ ಸಾವಿಗೆ ಸಂಬಂಧಿಸಿದಂತೆ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಎಂದು ಅಧಿಕಾರಿ ಹೇಳಿದರು.