Advertisement

ಸಾಂಸ್ಕೃತಿಕ ಅಂತಃಸತ್ವ ಎಂಬ ಯುವ ಶಕ್ತಿ

11:37 PM Feb 18, 2023 | Team Udayavani |

ಪ್ರಚಲಿತ ಸಹಸ್ರಮಾನವು ಯುವ ಶಕ್ತಿಗೆ ಸೇರಿದ್ದು ಎಂಬುದು ಗಮನಾರ್ಹ. ಯಾವುದೇ ಪ್ರಾದೇಶಿಕವಾದ ನೆಲೆಗಟ್ಟು ಸದೃಢವಾಗುವುದು ಈ ಯುವ ಸಂಪತ್ತಿನಿಂದ. ಏಕೆಂದರೆ ಅವರು ದಣಿವರಿಯದ ಉತ್ಸಾಹಿಗಳು ಮತ್ತು ಸಾಹಸಿಗರು. ಜಗತ್ತಿನಲ್ಲೀಗ ಅತೀ ಹೆಚ್ಚು ಯುವಶಕ್ತಿಯನ್ನು ಭಾರತವೇ ಹೊಂದಿದೆ. ದೇಶದಲ್ಲಿ 25 ವರ್ಷ ವಯಸ್ಸಿಗಿಂತ ಕಿರಿಯರ ಪ್ರಮಾಣ ಸರಾಸರಿ ಶೇ. 50. ಇಲ್ಲಿ 35ಕ್ಕಿಂತ ಕಿರಿಯರ ಪ್ರಮಾಣ ಶೇ. 60. ಎಲ್ಲ ರಾಜ್ಯಗಳೂ ಜಿಲ್ಲೆಗಳೂ ವಸ್ತುಶಃ ಇದೇ ಪ್ರಮಾಣವನ್ನು ಹೊಂದಿರುತ್ತದೆ.

Advertisement

ಹಾಗೆಂದು, ಪ್ರಸ್ತುತ ಯುವ ಶಕ್ತಿಯ ಬಗ್ಗೆ ಹೆಚ್ಚು ಆಶಾವಾದ ಇರಿಸಿಕೊಳ್ಳಲು ಸಾಕಷ್ಟು ಕಾರಣಗಳಿವೆ. ಕಳೆದ ಎರಡು ದಶಕಗಳಲ್ಲಿ ದೇಶದ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತಿರುವುದು ಪ್ರಾಸ್ತಾವಿತವಾದ ಮತ್ತು ಪ್ರಸ್ತುತವಾದ ಯುವ ಶಕ್ತಿಯಿಂದ. ಎಲ್ಲ ಸೃಷ್ಟಿಶೀಲ ಕ್ಷೇತ್ರಗಳಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಕ್ರೀಡಾ ರಂಗವನ್ನು ಕೂಡ ಈ ನಿಟ್ಟಿನಲ್ಲಿ ಉಲ್ಲೇಖಿಸಬಹುದು. ಎಲ್ಲವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅನನ್ಯವಾದ ಸ್ಥಾನವನ್ನು ಒದಗಿ ಸಿಕೊಟ್ಟಿದೆ.

ಕಟ್ಟುವೆವು ನಾವು ಹೊಸ ನಾಡೊಂದನು… ಎಂಬ ಕವಿವಾಣಿಯು ಸಾಕ್ಷಾತ್ಕಾರವಾಗಲು ಈ ಯುವಶಕ್ತಿಗೆ ಪರಿ ಪೂರ್ಣವಾದ ಬೆಂಬಲ ಮತ್ತು ಮಾರ್ಗದರ್ಶನ ಬೇಕು. ಸದೃಢ ಶಕ್ತಿ ಅಂದರೆ ಕೇವಲ ಉದ್ಯೋಗ ಮತ್ತು ಸಂಬಳವಲ್ಲ. ಆರ್ಥಿಕ ಸಾಮರ್ಥ್ಯವೊಂದೇ ಮಾನದಂಡವಲ್ಲ. ಸ್ವಾವಲಂಬನೆಯ ಜತೆ ಸರ್ವತೋಮುಖವಾದ ವ್ಯಕ್ತಿತ್ವಗಳು ರೂಪುಗೊಂಡಾಗ ಮಾತ್ರ ನಿಜವಾದ ಶಕ್ತಿ ಸಮಾಜಕ್ಕೆ ಸಂಚಯವಾಗಲು ಸಾಧ್ಯ.

ಈ ನಿಟ್ಟಿನಲ್ಲಿ ಬಾಲ್ಯ, ಹದಿಹರೆಯ ಮತ್ತು ಯೌವ್ವನ ಎಂಬ ಹಂತಗಳನ್ನು ಗಮನದಲ್ಲಿರಿಸಿ ಚಿಂತನೆಯನ್ನು ನಡೆಸಬಹುದು. ಬಾಲ್ಯಕಾಲದಲ್ಲಿ ಪೋಷಕರು ಮತ್ತು ಗುರುಹಿರಿಯರ ಆರೈಕೆಯಿಂದ ಬದುಕಿನ ಕುರಿತಾದ ಕುತೂಹಲ ಮತ್ತು ಆಸಕ್ತಿ ಯನ್ನು ಬೆಳೆಸಿಕೊಳ್ಳುವ ಮನೋಭಾವ ರೂಪುಗೊಳ್ಳುತ್ತದೆ. ಸದಭಿರುಚಿಯ ಚಿಂತನೆಗಳನ್ನು ರೂಢಿಸಿಕೊಳ್ಳಲು ತಳ ಹದಿಯು ಸಿದ್ಧವಾಗುತ್ತದೆ. ಪ್ರೌಢ ಹಂತದ ಶಾಲಾ ಶಿಕ್ಷಣ ಪೂರ್ಣಗೊಳ್ಳುವವರೆಗೆ, ಈಗಂತೂ ಎಳೆಯರಿಗೆ ಅಪಾರ ಅಥವಾ ಅನಂತ ಅವಕಾಶಗಳಿವೆ. “ಸ್ಕೈ ಈಸ್‌ ದ ಲಿಮಿಟ್‌’ ಎಂಬ ಹಾಗೆ. ಅದು ಪ್ರದರ್ಶನ ರೂಪದಲ್ಲಿ ಸ್ಪರ್ಧೆಗಳ ರೂಪದಲ್ಲಿ, ಅಧ್ಯಯನದ ರೂಪದಲ್ಲಿ ಅಥವಾ ವೀಕ್ಷಣೆಯ ರೂಪದಲ್ಲಿಯೂ ಅನಾವರಣಗೊಳ್ಳಬಹುದು. ನಾವು ನಿರಂತರವಾಗಿ ಆಶಿಸುವ ಸುಸಂಸ್ಕೃತ ಮನಸುಗಳು ರೂಪುಗೊಳ್ಳುವ ಪರಿ ಇದು.

ಪ್ರೌಢಶಾಲಾ ಹಂತದವರೆಗಿನ ಈ ಸಾಧ್ಯತೆಗಳ ಬುನಾದಿಯ ಮೇಲೆ ಕಟ್ಟಲು ಸುಲಭ ಹದಿಹರೆಯದ ಕಾಲಘಟ್ಟವನ್ನು. ಇಂದಿನ ಸನ್ನಿವೇಶಕ್ಕೆ ಹೇಳುವುದಾದರೆ ಇದು ಪ್ರೌಢಹಂತದಿಂದ ಹದಿಹರೆಯ ದಾಟುವ ಕಾಲಘಟ್ಟ. ಆಧುನಿಕ ಶಿಕ್ಷಣ ವಿನ್ಯಾಸದಲ್ಲಿದು ಪದವಿ ಪೂರ್ವದಿಂದ ಸ್ನಾತಕೋತ್ತರ ಪದವಿಯ ತನಕ ವ್ಯಕ್ತಿತ್ವವು ಪೂರ್ಣವಾಗಿ ವಿಕಸನ ಗೊಳ್ಳುವ ಸಂದರ್ಭವಿದು. ಪದವಿ ಪೂರ್ವ ಹಂತವು ಬಹುಮಟ್ಟಿಗೆ ಶಿಕ್ಷಣವೇ ಕೇಂದ್ರೀಕೃತವಾದರೆ, ಉಳಿದಂತೆ ಬಹುಮುಖೀ ಅಥವಾ ಬಹುಸ್ವರೂಪೀ ಚಟುವಟಿಕೆಗಳಿಗೆ ಸೂಕ್ತ. ಕಲೆ, ಸಂಸ್ಕೃತಿ ಮುಂತಾದ ಸೃಷ್ಟಿ ಶೀಲತೆಯಲ್ಲಿ ಏಕಾಗ್ರತೆಯಿಂದ ಸಾಧಿಸುವ ಮತ್ತು ಆಯ್ದ ಸಾಂಸ್ಕೃತಿಕ ರಂಗದಲ್ಲಿ ಸ್ವಂತಿಕೆಯನ್ನು ರೂಢಿಸಿಕೊಳ್ಳಬಹುದಾಗಿದೆ. ನಾಡಿನ ಅನೇಕ ಸಾಧಕರು ಈ ಹಂತದಲ್ಲಿ ಗಮನ ಸೆಳೆದವರಾಗಿದ್ದಾರೆ. ಗುರುಹಿರಿಯರ ಮಾರ್ಗದರ್ಶನದ ಜತೆಯಲ್ಲಿ ಸ್ವನಿರ್ಧಾರ ಕೂಡ ಅನುಷ್ಠಾ ನಗೊಳ್ಳುವ ಹಂತ ಇದಾಗಿದೆ. ಸರ್ವತೋಮುಖವಾಗಿ ಆಯ್ದ ಕ್ರಿಯಾಶೀಲ ರಂಗದ ಸಾಧನೆಗಿದು ನಿರ್ಣಾಯಕ.

Advertisement

ಇನ್ನು ಯೌವನದ ಸಂದರ್ಭ. ಸದ್ಯ ಈ ಲೇಖನದ ಆರಂಭಿಕ ಹಂತದಲ್ಲಿ ಈ ಯುವ ಜನತೆಯ ಪ್ರಾಮುಖ್ಯವನ್ನು ಉಲ್ಲೇಖೀ ಸಲಾಗಿದೆ. ನಮ್ಮದು ಬಹುಮುಖೀ ಸಂಸ್ಕೃತಿಯ ಸಮಾಜ. ಒಂದೊಂದು ಆಚರಣೆ ಕೂಡ ತನ್ನದೇ ಆದ ಮಹತ್ವ ಹೊಂದಿದೆ. ಪ್ರದರ್ಶನ ಕಲೆಗಳಲ್ಲಂತೂ ಇದು ಸಂಪೂರ್ಣ ಪ್ರತಿ ಫ‌ಲನ. ಕಲಾರಂಗದ ಎಲ್ಲ ಆಯ್ದ ಕ್ಷೇತ್ರಗಳಲ್ಲಿ ಪರಿಣತಿ ಪಡೆಯಲು ಮುಂದಾಗುವ ಸಾಹಸಕ್ಕಿದು ಸಕಾಲ. ಈಗಿನ ಸಂದರ್ಭದಲ್ಲಿ ನಮ್ಮ ಕರಾವಳಿ- ಮಲೆನಾಡು ಪ್ರದೇಶದಲ್ಲಿ ಈ ರೀತಿಯ ಬಹುಸಾಧಕರಿದ್ದಾರೆ. ಸೃಷ್ಟಿಶೀಲ ಸಮಾಜದ ಪ್ರವರ್ಧನೆಗೆ ಅವರು ಪೂರಕರಾಗಿದ್ದಾರೆ.

ಅಂದಹಾಗೆ: ಸಂಗೀತ, ನೃತ್ಯಕಲೆ ಮುಂತಾದ ನಿರ್ದಿಷ್ಟ ಆಯ್ದ ಕ್ಷೇತ್ರಗಳಲ್ಲಿ ಈ ಮೂರು ಹಂತದ ಸಾಧಕರಲ್ಲಿ ಸುಮಾರು ಶೇ. 50ರಷ್ಟು ಮಂದಿ, ಮುಂದಿನ ಹಂತದಲ್ಲಿ ಕೈಬಿಡುತ್ತಾರೆ. ಉದ್ಯೋ ಗಾನಂತರದ ಮತ್ತು ವಿವಾಹಾನಂತರದ ಬದ್ಧತೆಗಳು ಅಥವಾ ಅನಿವಾರ್ಯತೆಗಳು ಇದಕ್ಕೆ ಕಾರಣ ಅನ್ನುವುದು ವಿಷಾದನೀಯ.

-ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next