ಬೆಂಗಳೂರು : ಹುಟ್ಟು ಹಬ್ಬದ ದಿನವೇ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೊಲ್ಲಹಳ್ಳಿ ನಿವಾಸಿ ಹೇಮಂತ್ ಕುಮಾರ್ (25) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ.
ಘಟನೆ ವಿವರ: ಹುಟ್ಟು ಹಬ್ಬದ ಸಲುವಾಗಿ ಹೇಮಂತ್ ನನ್ನು ಸ್ನೇಹಿತರು ಫೋನ್ ಮಾಡಿ ಮನೆಯ ಹೊರಗಡೆ ಬರಲು ಹೇಳಿದ್ದಾರೆ. ಸ್ನೇಹಿತರೊಂದಿಗೆ ರಾತ್ರಿ ಹೊರಗಡೆ ಹೋಗಿದ್ದ ಯುವಕ ಇಂದು ಬೆಳಗ್ಗೆ ಕೋನಸಂದ್ರ ಬಳಿ ಬರ್ಬರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಇದನ್ನೂ ಓದಿ: ಅಪ್ರಾಪ್ತೆ ವಿವಾಹವಾಗಲು ಆಕೆಯ ಆಧಾರ್ ಕಾರ್ಡ್‌ನಲ್ಲಿ ವಯಸ್ಸು ತಿದ್ದುಪಡಿ: ನಾಲ್ವರ ಸೆರೆ
ಹೇಮಂತ್ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ ಮಾಡಿ, ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಪರಿಚಿತರೇ ಈ ಹತ್ಯೆ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ಯುವಕನ ಕೈ ಮೇಲೆ ತ್ರಿಶೂಲ, ಢಮರು ಟ್ಯಾಟು ಕಂಡು ಮೃತ ದೇಹವನ್ನು ಪೋಷಕರು ಪತ್ತೆ ಹಚ್ಚಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.