Advertisement

ಬೀದಿಯಲ್ಲೇ ಬೆಳಗಿತು ಯೂತ್‌ ಒಲಿಂಪಿಕ್ಸ್‌

11:19 AM Oct 08, 2018 | |

ಬ್ಯೂನಸ್‌ ಐರೆಸ್‌ (ಆರ್ಜೆಂಟೀನಾ): ಶನಿವಾರ ರಾತ್ರಿ ಆರ್ಜೆಂಟೀನಾದ ಬ್ಯೂನಸ್‌ ಐರೆಸ್‌ ನಗರದ ಬೀದಿಗಳೆಲ್ಲವೂ ಭವ್ಯ ಕ್ರೀಡಾಲೋಕವೊಂದಕ್ಕೆ ತೆರೆದುಕೊಂಡಿದ್ದವು. ಯಾವ ಬೀದಿಗೆ ಹೋದರೂ ಅಲ್ಲಿ ಕ್ರೀಡಾ ವೈಭವ ಮೇಳೈಸುತ್ತಿತ್ತು. ಜನರೆಲ್ಲ ಈ ಕ್ರೀಡಾ ದೃಶ್ಯಾವಳಿಯನ್ನು ಕಂಡು ಪುಳಕಗೊಂಡಿದ್ದರು.

Advertisement

ಇದು 3ನೇ ಸಮ್ಮರ್‌ “ಯೂತ್‌ ಒಲಿಂಪಿಕ್‌ ಗೇಮ್ಸ್‌’ನ ಉದ್ಘಾಟನೆಯ ಝಲಕ್‌. ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವೊಂದು ಸ್ಟೇಡಿಯಂನಾಚೆ ಬಂದು, ಸಾರ್ವಜನಿಕ ಬೀದಿಗಳಲ್ಲಿ ಚಾಲನೆ ಪಡೆದಿತ್ತು. ಇದಕ್ಕೆ ಸುಮಾರು 2 ಲಕ್ಷದಷ್ಟು ದಾಖಲೆ ಸಂಖ್ಯೆಯ ಸಾರ್ವಜನಿಕರು ಸಾಕ್ಷಿಯಾದರು.

ಆಕಾಶದಿಂದ ಇಳಿದು ಬಂದ ಒಲಿಂಪಿಕ್ಸ್‌ ರಿಂಗ್ಸ್‌, ಇದರ ಮೇಲೆ ಕಲಾಕಾರರ ಮೈನವಿರೇಳಿಸುವ ಪ್ರದರ್ಶನ, ಅಪಾರ್ಟ್‌ಮೆಂಟ್‌ಗಳ ಬಾಲ್ಕನಿಗಳಲ್ಲಿ ಅನಾವರಣಗೊಂಡ ರಂಗುರಂಗಿನ ನೃತ್ಯಲೋಕ, ಊಹೆಗೂ ನಿಲುಕದ ಸಾಂಸ್ಕೃತಿಕ ಕಾರ್ಯಕ್ರಮಗಳು, ಇದನ್ನು ಬೀದಿಯಲ್ಲಿ ನಿಂತು ವೀಕ್ಷಿಸುತ್ತ ಸಂಭ್ರಮಿಸಿದ ಸಾರ್ವಜನಿಕರು… ಒಟ್ಟಾರೆ ಇದೊಂದು ಎಂದೂ ಕಾಣದ ವಿಭಿನ್ನ ಕ್ರೀಡಾ ಸಮಾರಂಭಕ್ಕೆ ಸಾಕ್ಷಿಯಾಗಿತ್ತು.

ಈ ನಡುವೆ ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌ ಅವರಿಂದ ಯೂತ್‌ ಒಲಿಂಪಿಕ್ಸ್‌ ಉದ್ಘಾಟನೆ ಘೋಷಣೆಯಾದೊಡನೆ ಅಭಿಮಾನಿಗಳ ಉದ್ಘೋಷ ಇಡೀ ಬ್ಯೂನಸ್‌ ಐರೆಸ್‌ ನಗರದಲ್ಲಿ ಮಾರ್ದನಿಸಿತು.ಅಂತಿಮ ಹಂತವಾಗಿ ಆರ್ಜೆಂಟೀನಾದ ಯುವ ಆ್ಯತ್ಲೀಟ್‌ಗಳ ಕೈಗಳನ್ನು ಬದಲಾಯಿಸಿಕೊಂಡು ಬಂದ ಕ್ರೀಡಾಜ್ಯೋತಿ ಬೆಳಗಲ್ಪಟ್ಟಿತು. ಅ. 18ರ ತನಕ ಇದು ಪ್ರಜ್ವಲಿಸುತ್ತಲೇ ಇರುತ್ತದೆ.

ಭಾರತದ 47 ಸ್ಪರ್ಧಿಗಳು
206 ದೇಶಗಳ 4 ಸಾವಿರದಷ್ಟು ಆ್ಯತ್ಲೀಟ್‌ಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಭಾರತವೂ ಸೇರಿದೆ. 13 ಕ್ರೀಡೆಗಳಲ್ಲಿ ದೇಶದ 47 ಸ್ಪರ್ಧಿಗಳು ಪ್ರತಿನಿಧಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಮನು ಬಾಕರ್‌ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next