Advertisement
ಜೂಡೋ ಸ್ಪರ್ಧೆಯಲ್ಲಿ ತಂಗ್‌ಜಮ್ ತಬಾಬಿದೇವಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಒಲಿಂಪಿಕ್ಸ್ ಮಟ್ಟದಲ್ಲಿ ಪ್ರಪ್ರಥಮ ಜೂಡೋ ಪದಕ ತಂದಿತ್ತಿದ್ದಾರೆ. ವನಿತೆಯರ 44 ಕೆಜಿ ವಿಭಾಗದ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ತಬಾಬಿದೇವಿ ವೆನೆಜುವೆಲ್ಲಾದ ಮರಿಯಾ ಗಿಮಿನೆಜ್ ವಿರುದ್ಧ 0-11 ಅಂಕಗಳಿಂದ ಸೋಲುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟರು. ಭಾರತ ಇಲ್ಲಿಯವರೆಗೆ ಒಲಿಂಪಿಕ್ಸ್‌ನ ಹಿರಿಯರ ಅಥವಾ ಯೂತ್ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಪದಕ ಗೆದ್ದಿರಲಿಲ್ಲ.16 ವರ್ಷದ ತಬಾಬಿದೇವಿ ಸೆಮಿಫೈನಲ್‌ನಲ್ಲಿ ಕ್ರೊವೇಶಿಯಾದ ಅನಾವಿಕ್ಟೋರಿಜಾ ಪುಲ್ಜಿಜ್ ವಿರುದ್ಧ 10-0 ಅಂಕಗಳಿದ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದ್ದರು. ಈ ಮೂಲಕ ಭಾರತ ಯೂತ್ ಒಲಿಂಪಿಕ್ಸ್‌ನ ಆರಂಭಿಕ ದಿನ 2 ಬೆಳ್ಳಿ ಪದಕ ಜಯಿಸಿತು.
ಆರಂಭಿಕ ದಿನ ಭಾರತದ ಶೂಟರ್ ತುಷಾರ್ ಮಾನೆ ಬೆಳ್ಳಿ ಪದಕ ಜಯಿಸಿದ್ದರು. ಪುರುಷರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ತುಷಾರ್ ಒಟ್ಟು 247.5 ಅಂಕಗಳನ್ನು ಸಂಪಾದಿಸುವ ಮೂಲಕ ಈ ಸಾಧನೆಗೈದರು. ರಶ್ಯದ ಗ್ರಿಗೊರಿ ಸ್ಯಾಮ್ ಕೋವ್ 249.2 ಅಂಕಗಳೊಂದಿಗೆ ಚಿನ್ನ, ಸರ್ಬಿಯದ ಅಲೆಕ್ಸಾ ಮಿಟ್ರೊವಿಕ್ 227. 9 ಅಂಕ ಪಡೆದು ಕಂಚಿನ ಪದಕ ಜಯಿಸಿದರು. ಅರ್ಹತಾ ಸುತ್ತಿನಲ್ಲಿ 623.7 ಅಂಕ ಪಡೆದ ತುಷಾರ್ 3ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದರು. ಪುರುಷರ ಸ್ವಿಮ್ಮಿಂಗ್‌ನ 100 ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದ ಅರ್ಹತಾ ಸುತ್ತಿನಲ್ಲಿ ರಾಷ್ಟ್ರೀಯ ಚಾಂಪಿಯನ್ ಶ್ರೀಹರಿ ನಟರಾಜನ್ 9ನೇ ಸ್ಥಾನ ಪಡೆದು ಫೈನಲ್‌ಗೇರಲು ವಿಫಲರಾದರು. ಅಗ್ರ 8 ಸ್ಪರ್ಧಿಗಳು ಮಾತ್ರ ಫೈನಲ್ ಪ್ರವೇಶಿಸುತ್ತಾರೆ. ಶ್ರೀಹರಿ 56 ನಿಮಿಷ 48 ಸೆಕೆಂಡ್‌ಗಳಲ್ಲಿ ಈಜಿ ಗುರಿ ತಲುಪಿದ್ದರು.
Related Articles
ಸೋಮವಾರ ನಡೆದ ವನಿತೆಯರ 10 ಮೀ. ಏರ್‌ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮೆಹುಲಿ ಘೋಷ್ ಬೆಳ್ಳಿ ಪದಕ ಗೆದ್ದರು.13 ಕ್ರೀಡೆಗಳಲ್ಲಿ 46 ಭಾರತೀಯ ಕ್ರೀಡಾಪಟುಗಳ ಸ್ಪರ್ಧಿಸತ್ತಿದ್ದು, ಇದೇ ಮೊದಲ ಬಾರಿಗೆ ಯೂತ್ ಒಲಿಂಪಿಕ್ಸ್ ಭಾರತ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2014ರಲ್ಲಿ ಚೀನದಲ್ಲಿ ನಡೆದ ಕೂಟದಲ್ಲಿ ಭಾರತ ಕೇವಲ 2 ಪದಕ ಗೆದ್ದಿತ್ತು. 2010ರ ಆರಂಭಿಕ ಯೂತ್ ಒಲಿಂಪಿಕ್ಸ್ ಕೂಟದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ 6 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿ ಸಿತ್ತು.
Advertisement