ಮಂಗಳೂರು : ಮೀನುಗಾರಿಕೆಗೆ ತೆರೆಯಳಿದ ಯುವಕನೊಬ್ಬ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ನಡೆದಿದೆ.
ಇಲ್ಲಿನ ಮೀನುಗಾರಿಕಾ ದಕ್ಕೆಯಿಂದ ಅ. 24 ರಂದು ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಅಲ್ ಕೌಸರ್ ಎಂಬ ಬೋಟ್‌ನಿಂದ ತಮಿಳುನಾಡು ಮೂಲದ ವೆಲ್ ಮುರುಗನ್ (24) ಎಂಬವರು ಸಮುದ್ರಕ್ಕೆ ಬಿದ್ದು, ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.
ರಾತ್ರಿ 10;30 ಕ್ಕೆ ದಕ್ಕೆಯಿಂದ ಹೊರಟ್ಟಿದ್ದ ಈ ಬೋಟ್‌ನಲ್ಲಿ ಒಟ್ಟು 10 ಮಂದಿ ಇದ್ದು, ರಾತ್ರಿ 11;15 ರ ವೇಳೆಗೆ ಅದರಲ್ಲಿದ್ದ ವೆಲ್ ಮುರುಗನ್ ಕಾಣೆಯಾಗಿದ್ದರು. ಜತೆಗಿದ್ದವರು ಟಾರ್ಚ್ ಹಾಕಿ ಸುತ್ತ ಮುತ್ತ ಸಮುದ್ರದಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಆಸುಪಾಸಿನ ಪ್ರದೇಶದಲ್ಲಿ ವ್ಯಾಪಕ ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ.
ಬೋಟು ಸಮುದ್ರದಲ್ಲಿ ಮುಂದಕ್ಕೆ ಸಾಗುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ವೆಲ್ ಮುರುಗನ್ ಅವರು ಬೋಟ್‌ನಿಂದ ಸಮುದ್ರದ ನೀರಿಗೆ ಬಿದ್ದಿರ ಬೇಕೆಂದು ಶಂಕಿಸಲಾಗಿದೆ.
ಇದನ್ನೂ ಓದಿ : ಪ್ರವಾಸಿಗರೇ ಎಚ್ಚರ : ಚಿಕ್ಕಮಗಳೂರಿನ ಎತ್ತಿನಭುಜ ಪ್ರವಾಸಿ ತಾಣದಲ್ಲಿವೆ ಕಾಡಾನೆ ಹಿಂಡು
ವೆಲ್ ಮುರುಗನ್ ಅವರು 4 ತಿಂಗಳ ಹಿಂದೆ ತಮಿಳುನಾಡಿನಿಂದ ಮಂಗಳೂರಿಗೆ ಬಂದು ಅಲ್ ಕೌಸರ್ ಬೋಟ್‌ನಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದರು.
ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ