ಅಸ್ಸಾಂ: ಪ್ರೀತಿ ಎಂದರೆ ಭರವಸೆ, ನಂಬಿಕೆ, ತ್ಯಾಗ. ಪದಗಳಿಂದ ಪ್ರೀತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಅಸ್ಸಾಂನಲ್ಲಾದ ಪ್ರೇಮ ಕಥೆಯ ದುರಂತವನ್ನು ಕೇಳಿದರೆ ಎಂಥವರಿಗೂ ಹೀಗೆ ಆಗಬಾರದಿತ್ತು ಎಂದು ಅನ್ನಿಸುವುದು ಖಂಡಿತ.
ಬಿಟುಪನ್ ತಮುಲಿ ಹಾಗೂ ಪಾರ್ಥನಾ ಇಬ್ಬರು ಪರಸ್ಪರ ಪ್ರೀತಿಸುವ ಹೃದಯಗಳು. ಇಬ್ಬರ ಪ್ರೀತಿಯಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ಇಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವುದು ಎರಡು ಕುಟುಂಬಕ್ಕೂ ತಿಳಿದಿದೆ. ಮಕ್ಕಳಿಬ್ಬರೂ ಖುಷಿಯಾಗಿದ್ದರೆ ಅಷ್ಟೇ ಸಾಕೆಂದು ಎರಡೂ ಕುಟುಂಬದ ಸದಸ್ಯರು ಬಯಸಿದ್ದರು.
ಬಹಳ ಸಮಯದಿಂದ ಪ್ರೀತಿಯಲ್ಲಿದ್ದ ಇಬ್ಬರು ಮದುವೆಯ ಬಗ್ಗೆ, ಭವಿಷ್ಯದ ಬಗ್ಗೆ ಬಣ್ಣ ಬಣ್ಣದ ಕನಸನ್ನು ಹೊಂದಿದ್ದರು. ಆದರೆ ವಿಧಿಯ ಆಟದ ಮುಂದೆ ಆ ಎಲ್ಲಾ ಕನಸುಗಳು ನುಚ್ಚುನೂರಾಗಿದೆ.
ಪ್ರಾರ್ಥನಾ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಶುಕ್ರವಾರ (ನ.18 ರಂದು) ಚಿಕಿತ್ಸೆ ಫಲಿಸದೇ ಪ್ರಾರ್ಥನ ಕೊನೆಯುಸಿರೆಳೆದಿದ್ದಾರೆ.
ಪ್ರಾರ್ಥನಾಳನ್ನೇ ಬದುಕಾಗಿಸಿಕೊಂಡಿದ್ದ ಬಿಟುಪನ್ ಆಘಾತದಿಂದ ಕುಗ್ಗಿ ಹೋಗಿದ್ದಾನೆ. ತನ್ನ ಪ್ರೇಯಸಿಯ ಶವದ ಮುಂದೆ ಅತ್ತು ಅತ್ತು ದುಃಖಿತನಾಗಿದ್ದಾನೆ. ಜೀವವಿಲ್ಲದೇ ನೆಲದ ಮೇಲೆ ಮಲಗಿರುವ ಪ್ರಾರ್ಥನಾಳ ಮುಂದೆ ವಧುವಿಗೆ ಹಾಕುವ ವರಮಾಲೆಯನ್ನು ತಂದು ಅವಳ ಕೊರಳಿಗೆ ಹಾಕಿದ್ದಾನೆ. ಬಳಿಕ ತಾಳಿಯನ್ನೂ ಕಟ್ಟಿ, ಇನ್ಮುಂದೆ ಮದುವೆಯಾಗುವುದಿಲ್ಲ ನಿನ್ನೊಂದಿಗೆನೇ ನನ್ನ ಮದುವೆ ಆಯಿತು ಎಂದು ಹೇಳಿ ದುಃಖಿಸಿದ್ದಾನೆ.
ನನ್ನ ತಂಗಿ ಅದೃಷ್ಟವಂತಳು. ಅಂತಿಮ ವಿಧಿವಿಧಾನದ ಉದ್ದಕ್ಕೂ ಬಿಟುಪನ್ ಅಳುತ್ತನೇ ಇದ್ದ. ಅವನೊಂದಿಗೆ ಮದುವೆ ಆಗಬೇಕೆಂದು ನನ್ನ ಅಕ್ಕ ಬಯಸಿದ್ದಳು. ಅವಳ ಅಂತಿಮ ಆಸೆಯನ್ನು ಬಿಟುಪನ್ ನೆರವೇರಿಸಿದ್ದಾನೆಂದು ಪ್ರಾರ್ಥನಾಳ ಅವರ ಸೋದರ ಸಂಬಂಧಿಯಾದ ಸುಭೋನ್ ಹೇಳುತ್ತಾರೆ.
ಇಬ್ಬರ ಪ್ರೇಮ ಕಥೆ ಹೀಗೆ ದುರಂತವಾಗಿ ಅಂತ್ಯವಾಯಿತೆಂದು ನೆರೆದವರು ಕಣ್ಣೀರು ಹಾಕಿದ್ದಾರೆ.