Advertisement

ಯುವ ನೇತೃತ್ವದಿಂದ ಪರಿವರ್ತನೆ: ಸುನಿಲ್‌ ಕುಮಾರ್‌

10:32 PM Feb 03, 2020 | Sriram |

ಹೆಬ್ರಿ: ಹಿರಿಯರ ಮಾರ್ಗ ದರ್ಶನದಲ್ಲಿ ಯುವಕರಿಗೆ ನೇತೃತ್ವ ನೀಡಿದಾಗ ಹೊಸತನದ ಪರಿವರ್ತನೆ ಸಾಧ್ಯ. ಅಂತಹ ಪರಿವರ್ತನೆ ಇಂದು ನಾರಾಯಣ ಗುರು ಸಮುದಾಯದಿಂದ ಹೊರಹೊಮ್ಮಿದೆ. ಯುವ ಜನತೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಅವರು ಫೆ.2ರಂದು ಹೆಬ್ರಿ ನಾರಾಯಣ ಗುರು ಸೇವಾ ಸಂಘದ ಸಭಾಭವನದಲ್ಲಿ 30ನೇ ವರ್ಷದ ಪ್ರಯುಕ್ತ ನಡೆದ ಬೃಹತ್‌ ಬಿಲ್ಲವ ಸಮಾವೇಶದಲ್ಲಿ ಯುವ ಘಟಕ ಉದ್ಘಾಟಿಸಿ ಮಾತನಾಡಿದರು.

ಕಟ್ಟಡಕ್ಕೆ ಅನುದಾನ
ಹೆಬ್ರಿ ನಾರಾಯಣ ಗುರು ಸೇವಾ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಗರಿಷ್ಠ ಮಟ್ಟದ ಅನುದಾನವನ್ನು ಸರಕಾರದಿಂದ ಬಿಡುಗಡೆ ಮಾಡಲಾಗುವುದು ಎಂದು ಶಾಸಕರು ಹೇಳಿದರು.

ಆಶೀರ್ವಚನ
ಹೊಸ್ಮಾರು ಪರಮಪೂಜ್ಯ ಸ್ವಸ್ತಿ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಒಂದೇ ಜಾತಿ ಒಂದೇ ಮತ ಒಂದೇ ದೇವರು ಎನ್ನುವ ಅಮರ ಸಂದೇಶದ ಮೂಲಕ ಶೋಷಿತ ಸಮುದಾಯದ ಜನರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ ಯುವ ಪ್ರವರ್ತಕ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳ ಪರಿಪಾಲನೆಗಾಗಿ ಸಂಘವು ಸ್ಥಾಪನೆಗೊಂಡಿದೆ. ಈ ನಿಟ್ಟಿನಲ್ಲಿ ಹೆಬ್ರಿ ನಾರಾಯಣಗುರು ಸಂಘವು ಉತ್ತಮ ಸಾಮಾಜಿಕ ಚಟುವಟಿಕೆಗಳನ್ನು ಮಾಡು ತ್ತಿರುವುದು ಶ್ಲಾಘನೀಯ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಅವರ ದಿಕ್ಸೂಚಿ ಭಾಷಣ ಮಾಡಿದರು.

Advertisement

ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಎಚ್‌. ಜಯಕರ್‌ ಪೂಜಾರಿ ನಡೋಡಿ ಅಧ್ಯಕ್ಷತೆ ವಹಿಸಿದ್ದರು.ಯುವ ಘಟಕದ ಪದಾಧಿಕಾರಿಗಳನ್ನು ಪೂರ್ವಾಧ್ಯಕ್ಷರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಾಧಕರನ್ನು ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಮುದ್ರಾಡಿ ಆದಿಶಕ್ತಿ ದೇವಸ್ಥಾನದ ಧರ್ಮಯೋಗಿ ಮೋಹನ್‌, ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್‌, ದೊಂಡೇರಂಗಡಿ ಪಂಚಮಿ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಪುರಂದರ ಪೂಜಾರಿ, ಉದ್ಯಮಿ ಮನೋಜ್‌ ಸಿ. ಪೂಜಾರಿ, ಗೌರವಾಧ್ಯಕ್ಷ ಎಚ್‌. ಬೋಜ ಪೂಜಾರಿ ಜರ್ವತ್ತು, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಆರ್‌.ಪಿ., ಕಾರ್ಯದರ್ಶಿ ಸುಜಾತ ಹರೀಶ್‌, ಯುವ ಘಟಕದ ಅಧ್ಯಕ್ಷ ವಿಶುಕುಮಾರ್‌, ಕಾರ್ಯದರ್ಶಿ ವಿನಯ್‌ ಪೂಜಾರಿ, ಶೀನ ಪೂಜಾರಿ, ನಾರಾಯಣ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.

ಕೋಶಾಧಿಕಾರಿ ಪ್ರಭಾಕರ ಪೂಜಾರಿ ವರದಿ ವಾಚಿಸಿ, ಗೌರವ ಸಲಹೆಗಾರ ಮಂಜುನಾಥ ಪೂಜಾರಿ ಪ್ರಸಾವಿಸಿದರು. ಸಂಘದ ಪ್ರ.ಕಾರ್ಯದರ್ಶಿ ಮುದ್ದು ಪೂಜಾರಿ ಸ್ವಾಗತಿಸಿ, ಪ್ರಕಾಶ್‌ ಪೂಜಾರಿ ನಿರೂಪಿಸಿದರು. ಯುವ ಘಟಕ ಸಂಘಟನಾ ಕಾರ್ಯದರ್ಶಿ ನಿತೀಶ್‌ ಎಸ್‌.ಪಿ. ವಂದಿಸಿದರು.

ಹೆಬ್ರಿ ಅನಂತಪದ್ಮನಾಭ ದೇವಸ್ಥಾನದಿಂದ ನಾರಾಯಣ ಗುರು ಸೇವಾ ಸಂಘದ ಸಭಾಭವನದವರೆಗೆ ಭಜನ ತಂಡಗಳ ನೃತ್ಯ ಕುಣಿತ, ಚೆಂಡೆವಾದನ ಮೊದಲಾದ ಆಕರ್ಷಕ ವೈಭವದ ಮೆರವಣಿಗೆ ನಡೆಯಿತು.

ಬಳಿಕ ಸಮಾಜದ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ವೈವಿಧ್ಯ ಮೊದಲಾದ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next