ಬೆಂಗಳೂರು: ಮದ್ಯ ತರುವ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪಂತರಪಾಳ್ಯದ ಅಂಬೇಡ್ಕರ್ ಸ್ಲಂ ನಿವಾಸಿ ಶಶಿ (22) ಎಂಬಾತನೇ ಕೊಲೆಯಾದ ಯುವಕನಾಗಿದ್ದಾನೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಎಂಟು ಗಂಟೆ ಬಳಿಕ ಮದ್ಯ ತರುವ ವಿಚಾರಕ್ಕೆ ಶಶಿ ಹಾಗೂ ಆತನ ಸ್ನೇಹಿತರಾದ ವೇಲು, ವಿನೋದ್ ನಡುವೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಶಶಿ, ವಿನೋದ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಕೋಪಗೊಂಡ ವಿನೋದ್, ತನ್ನ ಸ್ನೇಹಿತರನ್ನು ಕರೆಸಿಕೊಂಡ ಶಶಿ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಚಾಕು ಇರಿತದಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಶಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.