ಶ್ರೀರಂಗಪಟ್ಟಣ: ಮುಸ್ಲಿಂ ಯುವಕರ ಗುಂಪೊಂದು ಕಾವೇರಿ ನದಿತೀರದಲ್ಲಿ ಮೋಜು ಮಸ್ತಿ ಮಾಡಿದ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ ಗ್ರಾಮಸ್ಥರೊಂದಿಗೆ ಘರ್ಷಣೆ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ತಾಲೂಕಿನ ಕಾರೇಕುರ ಗ್ರಾಮದ ಕಾವೇರಿ ನದಿ ತೀರದಲ್ಲಿ ಭಾನುವಾರ ನಡೆದಿದೆ.
ಕಾರೇಕುರ ಗ್ರಾಮದ ಕಾವೇರಿ ನದಿ ತೀರದಲ್ಲಿ ಮುಸ್ಲಿಂ ಯುವಕರ ಗುಂಪೊಂದು ಭಾನುವಾರ ಮಧ್ಯಾಹ್ನ ಮೋಜು ಮಸ್ತಿ ಮಾಡಿ ತೆರಳುವ ಸಂದರ್ಭದಲ್ಲಿ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರು ಹಾಗೂ ಮುಸ್ಲಿಂ ಯುವಕರ ನಡುವೆ ಘರ್ಷಣೆ ನಡೆದಿದೆ. ಈ ಸಂದರ್ಭದಲ್ಲಿ ಮುಸ್ಲಿಂ ಯುವಕರ ಮೇಲೆ ಹಲ್ಲೆ ಮಾಡಿ ದ್ದಾರೆ ಎಂದು ಶ್ರೀರಂಗ ಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಮಧ್ಯರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದು, ಆ ಸಮಯದಲ್ಲೇ ಗ್ರಾಮಕ್ಕೆ ಆಗಮಿ ಸಿದ ಪೊಲೀಸರು ವಿಚಾರಣೆಗಾಗಿ ಗ್ರಾಮದ ಐದಾರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಶ್ರೀರಂಗಪಟ್ಟಣ ಟೌನ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹಲ್ಲೆ ಮಾಡಿ ಗ್ರಾಮಸ್ಥರ ವಿರುದ್ಧವೇ ದೂರು: ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಚಂದನ್ ಮಾತನಾಡಿ, ಕಾರೇಕುರ ಗ್ರಾಮಕ್ಕೆ ಮುಸ್ಲಿಂ ಯುವಕರ ಗುಂಪೊಂದು ಮೋಜು, ಮಸ್ತಿಗಾಗಿ ಬಂದು ಗ್ರಾಮದ ರೈತರ ಜಮೀನಿನ ಮೇಲೆ ದಾಂದಲೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಗ್ರಾಮಸ್ಥರ ಮೇಲೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಂತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ನಂತರ ಪೊಲೀಸ್ ಠಾಣೆಗೆ ತೆರಳಿ ಗ್ರಾಮಸ್ಥರ ವಿರುದ್ಧವೇ ದೂರು ನೀಡಿ ತಮ್ಮ ರಾಜಕೀಯ ಪ್ರಭಾವ ಬಳಿಸಿ ರಾತ್ರಿ ಹೊತ್ತಿನಲ್ಲಿ ಗ್ರಾಮಸ್ಥರನ್ನು ಪೊಲೀಸರು ವಶಕ್ಕೆ ಪಡೆದಿರುವುದು ಸರಿಯಲ್ಲ. ಪೊಲೀಸರು ಪ್ರಭಾವಕ್ಕೆ ಒಳಗಾಗಿ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ನಿರಂತರ ಅನೈತಿಕ ಚಟುವಟಿಕೆ: ಗ್ರಾಪಂ ಸದಸ್ಯ ಮುರಳಿಧರ್ ಮಾತನಾಡಿ, ಕಾರೇಕುರ ಗ್ರಾಮದ ನದಿ ತೀರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ. ಇಲ್ಲಿ ನಿತ್ಯ ಮಾದಕ ವಸ್ತುಗಳ ಸೇವನೆ ಹಾಗೂ ಮದ್ಯಪಾನ ಮಾಡಿ ಖಾಲಿ ಬಾಟಲ್ ಗಳನ್ನು ರೈತರ ಜಮೀನಿಗೆ ಬಿಸಾಡುತ್ತಿದ್ದಾರೆ. ಅಲ್ಲದೆ, ಮಹಿಳೆಯರ ಜೊತೆ ಅಸಭ್ಯ ವರ್ತನೆ ನಡೆದುಕೊಳ್ಳು ತ್ತಿರುವುದರಿಂದ ಗ್ರಾಮಸ್ಥರು, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದ್ದರೂ, ಕ್ರಮವಹಿಸುತ್ತಿಲ್ಲ. ಈ ಹಿಂದೆ ತಹಶೀಲ್ದಾರ್ ಅವರಿಂದ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಿ 144 ಸೆಕ್ಷನ್ ಜಾರಿಗೊಳಿಸಿದ್ದರೂ ಇಲ್ಲಿಯವರೆಗೂ ಪೊಲೀಸ್ ಅಧಿಕಾರಿಗಳು ಕ್ರಮ ವಹಿಸದ ಕಾರಣ ಕಾರೇಕುರ ಗ್ರಾಮದಲ್ಲಿ ನಿತ್ಯ ಅಹಿತಕರ ಘಟನೆ ನಡೆಯುತ್ತಿವೆ. ಗ್ರಾಮಸ್ಥರು ಇದರಿಂದ ರೋಸಿ ಹೋಗಿದ್ದಾರೆ. ಕಾರೇಕುರ ರಸ್ತೆಯಲ್ಲಿ ಮಕ್ಕಳು, ಮಹಿಳೆಯರು ಓಡಾಡಲು ಭಯದ ವಾತಾವರಣ ವಿದ್ದು, ಪೊಲೀಸರು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಕಚೇರಿ ಮುಂಭಾಗ ಧರಣಿ: ಪೊಲೀಸ್ ಅಧಿಕಾರಿಗಳ ನಡೆಯಿಂದ ಅಸಮಾಧಾನಗೊಂಡ ಗ್ರಾಮಸ್ಥರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೂ ಮುತ್ತಿಗೆ ಹಾಕಿ, ಅಲ್ಲಿಯೂ ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ವೇಳೆ ದೂರವಾಣಿ ಮೂಲಕ ಪ್ರತಿಭಟನಾಕಾರ ರೊಂದಿಗೆ ಮಾತನಾಡಿದ ತಹಶೀಲ್ದಾರ್ ಅಶ್ವಿನಿ, ಕಾರೇಕುರ ಗ್ರಾಮದ ಕಾವೇರಿ ನದಿ ತೀರದ ಸುತ್ತಮುತ್ತ ಈಗಾಗಲೇ 144 ಸೆಕ್ಷನ್ ಜಾರಿಯಲ್ಲಿದ್ದು, ಅಂತಹ ಸ್ಥಳಗಳಿಗೆ ಅತಿಕ್ರಮಿಸುವುದು ಅಪರಾಧವಾಗಿದೆ. ಮಂಗಳವಾರ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಹಿಂದುಪರ ಸಂಘಟನೆಗಳ ಮುಖಂಡರು, ಕಾರೇಕುರ ಸೇರಿ ಸುತ್ತ ಮುತ್ತಲಿನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಪ್ಪಿತಸ್ಥರ ವಿರುದ್ಧ ಕ್ರಮ : ಡಿವೈಎಸ್‌ಪಿ ಮುರಳಿಧರ್ ಮಾತನಾಡಿ, ಕಾರೇಕುರ ಗ್ರಾಮದಲ್ಲಿ ನಡೆದ ಪ್ರಕರಣ ಸಂಬಂಧ ಪೊಲೀಸ್ ವರಿಷ್ಠಾಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ಸಂಬಂಧ ದೂರು ನೀಡಿರುವುದರಿಂದ ಗ್ರಾಮದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಗ್ರಾಮಸ್ಥರು ಪ್ರತಿ ದೂರು ನೀಡಿದ್ದಾರೆ. ಅದನ್ನು ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಕಾರೇಕುರ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಕಾವೇರಿ ನದಿ ತೀರದಲ್ಲಿ ಮೋಜು, ಮಸ್ತಿ ಸೇರಿದಂತೆ ಇತರೆ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.