Advertisement

Auto ರಿಕ್ಷಾದಲ್ಲೇ 4 ರಾಜ್ಯ ಸುತ್ತಿದ ಬಂಟ್ವಾಳದ ಯುವಕರು

12:34 AM Jul 15, 2024 | Team Udayavani |

ಬಂಟ್ವಾಳ: ನಗರದ ಯುವಕರಿಬ್ಬರು ಆಟೋ ರಿಕ್ಷಾದಲ್ಲೇ 11 ದಿನಗಳಲ್ಲಿ 4,200 ಕಿ.ಮೀ. ಸಂಚರಿಸಿ ನಾಲ್ಕು ರಾಜ್ಯಗಳನ್ನು ಸುತ್ತಾಡಿ ಐದು ಜ್ಯೋತಿರ್ಲಿಂಗಗಳ ದರ್ಶನ ಮಾಡಿ ಬಂದಿದ್ದಾರೆ.

Advertisement

ಮೆಲ್ಕಾರಿನ ಕ್ಯಾಟರಿಂಗ್‌ ಉದ್ಯಮಿ ವಿಜೇತ್‌ ನಾಯಕ್‌ ಹಾಗೂ ಕಲ್ಲಡ್ಕದ ಸಾಫ್ಟ್‌ವೇರ್‌ ಎಂಜಿನಿಯರ್‌ ವಿಶ್ವಾಸ್‌ ಪ್ರಭು ಅವರು ಜೂ. 29ರಂದು ಮುಂಜಾನೆ 4 ಗಂಟೆಗೆ ಪ್ರವಾಸ ಆರಂಭಿಸಿ ಜು. 9ರಂದು ಊರಿಗೆ ಮರಳಿದ್ದಾರೆ.

ಇವರಿಬ್ಬರೂ ಬಾಲ್ಯ ಸ್ನೇಹಿತರಾಗಿದ್ದು, ಈ ಹಿಂದೆ ಆಟೋ ರಿಕ್ಷಾದ ಮೂಲಕ ಅನಂತಪುರ, ಚಾರ್ಮಾಡಿ ಮೊದಲಾದ ಭಾಗಗಳಿಗೆ ಸಾಕಷ್ಟು ಬಾರಿ ತೆರಳಿದ್ದರು. ಆದರೆ ಇಷ್ಟು ದೂರದ ಪ್ರವಾಸವನ್ನು ಇದೇ ಮೊದಲ ಬಾರಿಗೆ ಕೈಗೊಂಡಿದ್ದರು. ಪ್ರವಾಸ, ಟ್ರಕ್ಕಿಂಗ್‌ ಹುಚ್ಚು ಇವರಿಗೆ ಬಾಲ್ಯದಿಂದಲೇ ಇತ್ತು. ಈ ಹಿಂದೆ ರೈಲಿನ ಮೂಲಕ ಉತ್ತರ ಭಾರತದ ತೀರ್ಥಕ್ಷೇತ್ರಗಳಿಗೆ ಹೋಗಿ ಬಂದಿದ್ದರು.
ವಿಜೇತ್‌ ನಾಯಕ್‌ ತನ್ನ ಉದ್ಯಮಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಒಂದೂವರೆ ವರ್ಷದ ಹಿಂದೆ ಖಾಸಗಿ (ಬಿಳಿ ನಂಬರ್‌ ಪ್ಲೇಟ್‌) ರಿಕ್ಷಾವನ್ನು ಖರೀದಿಸಿದ್ದು, ಇದರಲ್ಲಿ ಯಾವುದೇ ರಾಜ್ಯಕ್ಕೆ ಹೋಗಲು ಟೂರಿಸ್ಟ್‌ ಪರವಾನಿಗೆ ಪಡೆಯಬೇಕಿಲ್ಲ.

ಕಡಿಮೆ ಬಜೆಟ್‌ ಪ್ರವಾಸ
ಊರಿನಿಂದ ಹೊರಟ ಯುವಕರು ಕರ್ನಾಟಕ, ಗೋವಾವನ್ನು ದಾಟಿ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿ ಗೃಷ್ಣೇಶ್ವರ, ಭೀಮಾಶಂಕರ, ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಕ್ಷೇತ್ರಗಳ ದರ್ಶನ ಮಾಡಿ ಮುಂದೆ ಗುಜರಾತ್‌ನ ನಾಗೇಶ್ವರ, ಸೋಮನಾಥ ಜ್ಯೋತಿರ್ಲಿಂಗ ಕ್ಷೇತ್ರಗಳಿಗೆ ತೆರಳಿದ್ದಾರೆ. ಜತೆಗೆ ಎಲ್ಲೋರ, ದ್ವಾರಕಾ, ಏಕತಾ ವಿಗ್ರಹ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ತಲಾ 14 ಸಾವಿರ ರೂ.ಗಳಷ್ಟು ಖರ್ಚಾಗಿದೆ ಎನ್ನಲಾಗಿದೆ. 11 ದಿನಗಳ ಪ್ರವಾಸದಲ್ಲಿ ಊಟ-ಉಪಾಹಾರವನ್ನೂ ಇವರೇ ತಯಾರಿಸಿದ್ದಾರೆ. ಅಂದರೆ ದಿನಸಿ ಸಾಮಾಗ್ರಿಗಳು, ಗ್ಯಾಸ್‌ ಸ್ಟೌ, ಪಾತ್ರೆಗಳನ್ನು ಜತೆಯಲ್ಲಿ ಕೊಂಡೊಯ್ದಿದ್ದರು. ಪ್ರತಿ ಮೂರು ಗಂಟೆಗಳಿಗೊಮ್ಮೆ ಒಬ್ಬೊಬ್ಬರು ಆಟೋ ಚಲಾಯಿಸಿದ್ದಾರೆ.

ಇದೇ ಮೊದಲ ಬಾರಿಗೆ ಲಾಂಗ್‌ ಜರ್ನಿ ಕೈಗೊಂಡಿದ್ದು, ರೂಟ್‌, ಕಿ.ಮೀ. ಸಹಿತ ಎಲ್ಲ ಯೋಜನೆಗಳನ್ನು ಮೊದಲೇ ಹಾಕಿಕೊಂಡ ಪರಿಣಾಮ ನಿರೀಕ್ಷೆಯಂತೆಯೇ ಪ್ರವಾಸವನ್ನು ಪೂರ್ಣಗೊಳಿಸಿದ್ದೇವೆ. ಹೊಸ ರಿಕ್ಷಾ ಆದುದರಿಂದ ಕಂಡೀಶನ್‌ ಉತ್ತಮವಾಗಿದ್ದು, ಎಲ್ಲೂ ಸಮಸ್ಯೆ ಆಗಿಲ್ಲ.
-ವಿಜೇತ್‌ ನಾಯಕ್‌, ಮೆಲ್ಕಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next