Advertisement

ಗ್ರಾಮೀಣಾಭಿವೃದ್ಧಿಗಾಗಿ “ಯುವ ಸಬಲೀಕರಣ ಘಟಕ’

12:00 AM Jan 02, 2020 | Lakshmi GovindaRaj |

ಬೆಂಗಳೂರು: ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಯುವ ಸಬಲೀಕರಣ ಘಟಕ ತೆರೆಯುವ ಮೂಲಕ ಗ್ರಾಮೀಣಾಭಿವೃದ್ಧಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯದ ಯುವಕರಿಗೆ ತಾಂತ್ರಿಕವಾಗಿ ಉತ್ತೇಜನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Advertisement

ರಾಜ್ಯದ ಎಲ್ಲ ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳು ಕಡ್ಡಾಯವಾಗಿ ಯುವ ಸಬಲೀಕರಣ ಘಟಕ ತೆರೆಯಬೇಕು. ಅಲ್ಲದೆ, ಕಾಲೇಜಿನ ಹಿರಿಯ ಪ್ರಾಧ್ಯಾಪಕರೊಬ್ಬರು ಇದಕ್ಕೆ ನೋಡಲ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕು. ಎಲ್ಲ ಕಾಲೇಜಿನ ಪ್ರಾಂಶುಪಾಲರು ಜ.7ರೊಳಗೆ ಯುವ ಸಬಲೀಕರಣ ಘಟಕ ತೆರೆಯಬೇಕು. ಘಟಕದ ಎಲ್ಲ ಕಾರ್ಯಚಟುವಟಿಕೆಗಳ ಅನುಷ್ಠಾನಕ್ಕೆ ನೋಡಲ್‌ ಅಧಿಕಾರಿಗಳು ಸದಾ ವಿದ್ಯಾರ್ಥಿಗಳ ಜತೆಗೆ ಇರುವಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದೆ.

ಅಪೌಚಾರಿಕ ಕೌಶಲ್ಯ ಅಥವಾ ತರಬೇತಿಯ ಕೊರತೆ ಇರುವ ಸಮುದಾಯಗಳೊಂದಿಗೆ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡು, ಅವರ ಜೀವನ ಮಟ್ಟ ಸುಧಾರಣೆಗೆ ಉತ್ತೇಜನ ನೀಡಬೇಕು ಮತ್ತು ಇದಕ್ಕಾಗಿ ಸೂಕ್ತ ತರಬೇತಿ ನೀಡಬೇಕು. ಸಮುದಾಯ ಆಧಾರಿತ ಕಾರ್ಯಕ್ರಮಗಳು ಯೋಜನೆಗಳನ್ನು ಈ ಘಟಕದ ಮೂಲಕ ಸಮರ್ಪಕವಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಎಂಜಿನಿಯರಿಂಗ್‌ ಕಾಲೇಜು ಮತ್ತು ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿ ಕೌಶಲ್ಯಭರಿತ ಹಾಗೂ ವೈಜ್ಞಾನಿಕವಾಗಿ ಸಾಕಷ್ಟು ಮಾಹಿತಿಯುಳ್ಳ, ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ನಡೆಸಬಲ್ಲ ಸಮರ್ಥ ಪ್ರಾಧ್ಯಾಪಕರನ್ನು ಹೊಂದಿರಬೇಕು.

ಈ ಮೂಲಕ ಸಾಮಾಜಿಕವಾಗಿ ಹಿಂದುಳಿದ ಸಮುದಾಯಕ್ಕೆ ಮತ್ತು ಗ್ರಾಮೀಣ ಭಾಗದಲ್ಲಿ ಅಗತ್ಯವಿರುವವರಿಗೆ ತಾಂತ್ರಿಕ ಸೌಲಭ್ಯ ಒದಗಿಸಬೇಕು ಎಂಬ ಸೂಚನೆ ಸರ್ಕಾರದಿಂದ ಬಂದಿದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದರು. ಗ್ರಾಮೀಣ ಪ್ರದೇಶ ಹಾಗೂ ಕೊಳಗೇರಿಯಲ್ಲಿರುವವರಿಗೆ ತಾಂತ್ರಿಕತೆಯ ಬಗ್ಗೆ ಅಗತ್ಯ ಅರಿವು ಮೂಡಿಸಲು ಮತ್ತು ಸಮಕಾಲಿನ ವಿಷಯಗಳ ಅಗತ್ಯತೆಯನ್ನು ತಿಳಿಸಲು ತಂತ್ರಜ್ಞಾನ ಉತ್ತೇಜನ ನೀಡಬೇಕು.

ಹಿಂದುಳಿದ ಸಮುದಾಯಗಳಿಗೆ ಸೂಕ್ತ ಕೌಶಲತೆ ತರಬೇತಿ ನೀಡಲು ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಂಬಂಧ ವೃದ್ಧಿಗಾಗಿ ಈ ಘಟಕ ಕಾರ್ಯನಿರ್ವಹಿಸಬೇಕು. ಆರ್ಥಿಕ, ಮೂಲಭೂತ ಸೌಕರ್ಯ, ಕೌಶಲ್ಯದ ಅಭಿವೃದ್ಧಿ ವಿವಿಧ ಸಂಘಟನೆ, ಶಿಕ್ಷಣ ಸಂಸ್ಥೆ ಹಾಗೂ ಏಜೆನ್ಸಿಗಳಿಂದ ನೆರವು ಪಡೆಯುವುದು. ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ಹಳ್ಳಿಗಳಲ್ಲಿ ಅಭಿವೃದ್ಧಿಗೆ ಪೂರಕವಾದ ಅರಿವು ಕಾರ್ಯಕ್ರಮ ನಡೆಸುವುದು.

Advertisement

ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ನೈರ್ಮಲೀಕರಣ, ವಸತಿ ಸೌಲಭ್ಯ, ಸಂಪರ್ಕ ಸೌಲಭ್ಯ, ಕೃಷಿ, ಆಹಾರ ತಂತ್ರಜ್ಞಾನ, ಇಂಧನ ಮೂಲಗಳನ್ನು ಉಳಿಸುವ ಕುರಿತು ಅಗತ್ಯ ತರಬೇತಿ ನೀಡಬೇಕು. ಗ್ರಾಮೀಣ ಭಾಗದಲ್ಲಿ ಅಥವಾ ಸಾಮಾಜಿಕವಾಗಿ ಹಿಂದುಳಿದ ಸಮುದಾಯದಲ್ಲಿ ಅರಿವು ಮೂಡಿಸಿ, ಅವರಿಗೆ ಬೇಕಾದ ಕೌಶಲ್ಯ ಒದಗಿಸುವುದು ಸೇರಿದಂತೆ ಹಲವು ಕ್ರಮಗಳ ಬಗ್ಗೆ ಸರ್ಕಾರವು ಆದೇಶದಲ್ಲಿ ತಿಳಿಸಿದೆ.

ಗ್ರಾಮೀಣ ಭಾಗದಲ್ಲಿ ಸೂಕ್ತ ತಾಂತ್ರಿಕತೆಯ ಬಗ್ಗೆ ಅರಿವು ಮೂಡಿಸಲು ಪ್ರದರ್ಶನ ಕೇಂದ್ರಗಳನ್ನು ತೆರೆಯಬೇಕು. ಈ ಘಟಕದ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಬ್ಯಾಂಕ್‌, ಸೊಸೈಟಿ ಹಾಗೂ ಇತರೆ ಆರ್ಥಿಕ ಸಂಸ್ಥೆಗಳಿಂದ ದೊರೆಯುವ ಸಾಲಸೌಲಭ್ಯದ ಮಾಹಿತಿ ನೀಡಬೇಕು. ಹಾಗೆಯೇ ಯುವಕರ ಉನ್ನತಿಗಾಗಿ ಇರುವ ಯೋಜನೆಗಳ ಬಗ್ಗೆಯೂ ಮಾಹಿತಿ ಒದಗಿಸಬೇಕು. ಉದ್ಯೋಗಾವಕಾಶಕ್ಕೆ ವೇದಿಕೆ ಕಲ್ಪಿಸಬೇಕು.

ಹಾಗೆಯೇ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ಮಾಹಿತಿ ನೀಡುವುದು, ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾಂತ್ರಿಕವಾಗಿ ಮುಂದೆ ಬರಲು ಸಹಕರಿಬೇಕು ಹಾಗೂ ಎಐಸಿಟಿಇ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಬೇಕಾದ ಸೂಚನೆಯನ್ನು ಈ ಘಟಕದ ಮೂಲಕ ಪಾಲಿಸಲು ಸರ್ಕಾರ ನಿರ್ದೇಶಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇದರ ನಿರ್ಧಾರವಾಗಿದೆ ಎಂದು ಇಲಾಖೆಯ ಇನ್ನೊರ್ವ ಅಧಿಕಾರಿ ಮಾಹಿತಿ ನೀಡಿದರು.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next