ಕುಣಿಗಲ್: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ತಾಲೂಕು ಯುವ ಕಾಂಗ್ರೆಸ್‌ನಿಂದ ಪಟ್ಟಣದಲ್ಲಿ ಎತ್ತಿನಗಾಡಿ ಜಾಥಾ ನಡೆಸಿದರು.
ಜನಸಾಮಾನ್ಯರ ಮೇಲೆ ಬಿಜೆಪಿ ಸರ್ಕಾರ ಬೆಲೆ ಏರಿಕೆ ಹೇರಿ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಕೂಡಲೇ ದರಗಳನ್ನು ಇಳಿಸುವಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಡಾ.ಎಚ್.ಡಿ.ರಂಗನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಲೋಹಿತ್, ಟೌನ್ ಅಧ್ಯಕ್ಷ ಕೆ.ಆರ್.ಮಾರುತಿ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಎನ್.ಹುಚ್ಚಮಾಸ್ತಿ ಗೌಡ ಸರ್ಕಲ್ ವರೆಗೆ ಎತ್ತಿನಗಾಡಿ ಮೂಲಕ ಪ್ರತಿಭಟನೆ ನಡೆಸಿ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಧಿಕ್ಕಾರ ಕೂಗಿ ಖಾಲಿ ಸಿಲಿಂಡರ್, ಬೈಕ್ ಅಣಕು ಶವಯಾತ್ರೆ ಮಾಡಿದರು.
ಬಿಜೆಪಿ ವಿರುದ್ಧ ಕಿಡಿ: ಶಾಸಕ ಡಾ.ಎಚ್.ಡಿ. ರಂಗನಾಥ್ ಮಾತನಾಡಿ, ಕಾಂಗ್ರೆಸ್ ತನ್ನ 56 ವರ್ಷದ ಅಧಿಕಾರದ ಆಡಳಿತ ಅವಧಿಯಲ್ಲಿ ಬಡತನ ನಿರ್ಮೂಲನೆ, ನೀರಾವರಿ, ವಿದ್ಯುತ್, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಬಾಹ್ಯಕಾಶದಲ್ಲಿ ಸಾಧನೆ, ಆಹಾರ ಭದ್ರತೆ, ದೇಶದ ಭದ್ರತೆ, ರಸ್ತೆ ಅಭಿವೃದ್ಧಿ ಸೇರಿದಂತೆ ಹತ್ತಾರು ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿ ವಿಶ್ವದಲ್ಲಿಯೇ ಗಮನ ಸೆಳೆದಿದೆ. ಆದರೆ, ಬಿಜೆಪಿ ಕಾಂಗ್ರೆಸ್ ಸೇವೆ ಶೂನ್ಯವೆಂದು ಟೀಕೆ ಮಾಡುತ್ತಿದೆ ಎಂದು ದೂರಿದರು.
ಅಶಾಂತಿಗೆ ಕಾರಣ: ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಲೋಹಿತ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದನ್ನು ಮರೆ ಮಾಚಲು ವಿವಾದಗಳನ್ನು ಸೃಷ್ಟಿಸಿ ಹಿಂದೂ, ಮುಸ್ಲಿಮರ ಮಧ್ಯೆ ಧರ್ಮದ ವಿಷ ಬೀಜ ಬಿತ್ತಿ ರಾಜ್ಯದ ಅಶಾಂತಿಗೆ ಕಾರಣ ವಾಗಿದೆ ಎಂದು ಸರ್ಕಾರದ ವಿರುದ್ಧ ಹರಿದಾಯ್ದರು.
ಯುವ ಕಾಂಗ್ರೆಸ್ ಟೌನ್ ಅಧ್ಯಕ್ಷ ಕೆ.ಆರ್. ಮಾರುತಿ ಮಾತನಾಡಿ, ಡಾ.ಮನಮೋಹನ್ ಸಿಂಗ್ ಆಡಳಿತ ಅವಧಿಯಲ್ಲಿ 350 ರಿಂದ 400 ರೂ.ಗೆ ಸಿಲಿಂಡರ್ ಒಂದಕ್ಕೆ ನೀಡುವುದರ ಜತೆಗೆ ಸಹಾಯಧನ ನೀಡಲಾಗುತ್ತಿತ್ತು. ಪೆಟ್ರೋಲ್ ಲೀ.ಗೆ 60 ರೂ. ಡೀಸೆಲ್ 42 ರೂ. ದರ ಇತ್ತು. ದರ ಹೆಚ್ಚಳವಾಗಿದೆ ಎಂದು ಬಿಜೆಪಿ ಮುಖಂಡರು ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಆದರೆ ಈಗ ಪ್ರಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ ಎಂದು ಲೇವಡಿ ಮಾಡಿದರು. ಪ್ರತಿಭಟನೆಯಲ್ಲಿ ಹುಲಿಯೂರುದುರ್ಗ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್, ನಿಶಾಂತ್, ಮಹೇಂದ್ರ, ಅರುಣ್, ಹನುಮಂತು, ವಿಜಿ, ಹರೀಶ್, ಜೀವನ್, ಸಂತೋಷ್ ಭಾಗವಹಿಸಿದ್ದರು.
ಎನ್‌ಡಿಎ ಸರ್ಕಾರದ ಜನವಿರೋಧಿ ನೀತಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿ ಹಂಚಿಗೆ ತಲುಪಿದೆ. ದೇಶದ ಇತಿ ಹಾಸದಲ್ಲೇ ಎಂದೂ ಕಂಡರಿಯ ದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನರ ಬದುಕನ್ನು ಬೀದಿಗೆ ತಳ್ಳಿದೆ.
–ಡಾ.ಎಚ್.ಡಿ.ರಂಗನಾಥ್, ಶಾಸಕ