Advertisement
15ರಿಂದ 35 ವಯೋಮಿತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಸೂಕ್ತ ಜಾಗೃತಿ ಹಾಗೂ ಕಾಳಜಿಯಿಂದಷ್ಟೇ ಇದರ ನಿಯಂತ್ರಣ ಸಾಧ್ಯವಿದೆ. ಜನರನ್ನು ಇನ್ನೂ ಬೆಂಬಿಡದ ಕೋವಿಡ್ ಬಿಕ್ಕಟ್ಟು ಕೂಡ ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಕೋವಿಡ್ ಸಂದರ್ಭದಲ್ಲಿ ಜನರು ವಿವಿಧ ಕಾರಣಗಳಿಗಾಗಿ ಸಾಲ ಮಾಡಿದ್ದರು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದು, ಪಡೆದ ಸಾಲವನ್ನು ಹಿಂತಿರುಗಿಸಲಾಗದ ಅತಂತ್ರರಾಗಿದ್ದಾರೆ. ಇದು ಕೂಡ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ.
Related Articles
Advertisement
ಕಳೆದ 2 ವರ್ಷಗಳಿಂದ ಹೆಚ್ಚಿನವರಿಗೆ ಸಾಮಾನ್ಯ ಜೀವನ ವೆಂಬುವುದೇ ಮರೀಚಿಕೆಯಾಗಿದೆ. ಖನ್ನತೆ, ಮದ್ಯಪಾನ, ಪರೀಕ್ಷೆ ಒತ್ತಡ ಹಾಗೂ ಅನುತೀರ್ಣ, ಕೌಟುಂಬಿಕ ದೌರ್ಜನ್ಯ ಹಾಗೂ ಕಲಹ, ಆರೋಗ್ಯ ಸಮಸ್ಯೆಗಳು, ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗಿ ಮೊಟಕುಗೊಂಡ ಸಂಬಂಧಗಳು, ಬಿದ್ದುಹೋದ ಗೆಳೆತನ, ಮನೆಮಂದಿ ಸೂಕ್ತ ರೀತಿಯಲ್ಲಿ ಸ್ಪಂದಿಸದಿರುವುದೆಲ್ಲ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗುತ್ತಿದೆ.
ಲಾಕ್‌ಡೌನ್ ವೇಳೆ ಅಧಿಕ ಆತ್ಮಹತ್ಯೆ
ಜಿಲ್ಲೆಯಲ್ಲಿ 2020ರಲ್ಲಿ ಜನವರಿಯಿಂದ ಜೂನ್ ತಿಂಗಳವರೆಗೆ 90ಕ್ಕೂ ಅಧಿಕ ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು. ಕೋವಿಡ್-ಲಾಕ್‌ಡೌನ್ ಸಡಿಲಿಕೆ ಅನಂತರವೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಮಾನಸಿಕ ಖನ್ನತೆ, ಆರ್ಥಿಕ ಮುಗ್ಗಟ್ಟು, ಉದ್ಯೋಗ ನಷ್ಟ, ಮದ್ಯ ವ್ಯಸನ, ಕೋವಿಡ್ ಸೋಂಕಿನ ಭಯ, ಕೌಟುಂಬಿಕ ಕಲಹ, ದೀರ್ಘಕಾಲದ ಅನಾರೋಗ್ಯ, ವಿಪರೀತ ಒತ್ತಡಗಳು ಆತ್ಮಹತ್ಯೆಗೆ ಮೂಲ ಕಾರಣವಾಗಿದೆ.
ಪರಿಹಾರ ಹೇಗೆ?
ಒಬ್ಬ ವ್ಯಕ್ತಿಯ ಚಲನವಲನಗಳಿಂದಲೇ ಮುನ್ಸೂಚನೆ ಲಭಿಸುತ್ತದೆ. ಸಿಕ್ಕ ಸಿಕ್ಕವರಿಗೆ ಕರೆಮಾಡಿ ಮಾತನಾಡುವುದು, ತನಗೆ ಬಯಸಿದ ಸ್ಥಳಗಳಿಗೆ ಭೇಟಿ ನೀಡಿ ಸುತ್ತಾಡು ವುದು, ಒಮ್ಮೆಲೆ ಚುರುಕುತನ ಪಡೆಯುವುದು ಇವುಗಳೆಲ್ಲ ಲಕ್ಷಣ ಗಳಾಗಿವೆ. ಖನ್ನತೆಯಲ್ಲಿರುವವರು ಒಮ್ಮೆಲೇ ಚುರುಕುಗೊಂಡರೂ ಅದು ಆತ್ಮಹತ್ಯೆಗೆ ಪ್ರಚೋದನೆಗೊಳಗಾಗುವ ಸಾಧ್ಯತೆಗಳಿರುತ್ತವೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.
ವಿನಯಪೂರ್ವಕ ಮಾತು ಅಗತ್ಯ
ಮನೆ ಮಂದಿ ಹಾಗೂ ಗೆಳೆಯರು ಪರಸ್ಪರ ಆತ್ಮೀಯವಾಗಿ ವರ್ತಿಸಬೇಕು. ಗೆಳೆಯರ ಬಗ್ಗೆ ಅನುಮಾನ ಬಂದರೆ ತತ್‌ಕ್ಷಣ ವಿನಯದಿಂದ ಮಾತನಾಡಿಸಿ ಅವರನ್ನು ಪರಿವರ್ತನೆ ಮಾಡಲು ಸಾಧ್ಯವಿದೆ. ಹೆಲ್ಪ್ಲೈನ್ ಸಂಖ್ಯೆ 104ಕ್ಕೆ ಕರೆಮಾಡಿಯೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. –ಡಾ| ಮಾನಸ್ ಕುಮಾರ್, ಮಾನಸಿಕ ತಜ್ಞರು, ಬಾಳಿಗ ಆಸ್ಪತ್ರೆ
– ಪುನೀತ್ ಸಾಲ್ಯಾನ್