ಬೆಂಗಳೂರು: ಮುಂದಿನ ಆಯವ್ಯಯದಲ್ಲಿ ಯುವ ಬಜೆಟ್ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಡಾ.ಆರ್.ಬಾಲಸುಬ್ರಹ್ಮಣ್ಯ ಸಮಿತಿಯಿಂದ ಕರಡು ಯುವ ನೀತಿ ಸ್ವೀಕಾರ ಮಾಡಿ ಮಾತನಾಡಿದ ಅವರು, ದೇಶದ ಶೇ. 46ರಷ್ಟು ಜನಸಂಖ್ಯೆ ಯುವಕರಾಗಿದ್ದು, ಇವರನ್ನು ದೇಶ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಯುವ ನೀತಿಯ ಕರಡು ಕೂಡಲೇ ಸಚಿವ ಸಂಪುಟದ ಅನುಮೋದನೆ ಪಡೆದು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಕರಡು ಯುವ ನೀತಿಯ ಮುಖ್ಯಾಂಶಗಳನ್ನು ಉಲ್ಲೇಖೀಸಿದ ಡಾ. ಬಾಲಸುಬ್ರಹ್ಮಣ್ಯ ಅವರು, ಯುವ ನೀತಿಯು ಯುವ ಕೇಂದ್ರಿತವಾಗಿದ್ದು, ನೀತಿಯ ಅನುಷ್ಠಾನಕ್ಕೆ ಕಾರ್ಯತಂತ್ರ, ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನದ ಅಂಶಗಳನ್ನೂ ಒಳಗೊಂಡಿದೆ. ಸುಸ್ಥಿರ ಅಭಿವೃದ್ಧಿ ಗುರಿಯೊಂದಿಗೂ ಸಂಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಆಯವ್ಯಯದಲ್ಲಿ ಯುವಕರು ಸ್ವ ಉದ್ಯೋಗ ಕೈಗೊಳ್ಳಲು ರೂಪಿಸಿರುವ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ ಯುವಕರ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸಲು ನೇಮಕಗೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ಈ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ, ಸಚಿವರಾದ ವಿ.ಸೋಮಣ್ಣ, ಡಾ. ಅಶ್ವತ್ಥನಾರಾಯಣ, ಶಿವರಾಮ ಹೆಬ್ಟಾರ ಉಪಸ್ಥಿತರಿದ್ದರು.