ಚಿಕ್ಕಮಗಳೂರು: ಮೂಡಿಗೆರೆ ಕಿರುಗುಂದ ಗ್ರಾಮದ ದಲಿತ ಯುವಕನ ಮೇಲೆ ಗೋಣಿ ಬೀಡು ಠಾಣಾಧಿಕಾರಿ ದೌರ್ಜನ್ಯ ಎಸಗಿರುವ ಪ್ರಕರಣ ನಡೆದಿದ್ದು, ಯುವಕನಿಗೆ ಮಾತ್ರ ಕುಡಿಸಿದ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಅಮಾನವೀಯ ಕೃತ್ಯ ಎಸಗಿದ್ದಾರೆಂದು ನೊಂದ ಯುವಕ ಹೇಳಿಕೆ ನೀಡಿದ್ದಾರೆ.
ಕಿರುಗುಂದ ಗ್ರಾಮದ ವಿವಾಹಿತ ಮಹಿಳೆ ಆಕೆಯ ಪತಿಯ ನಡುವಿನ ಜಗಳ ವಿಚಾರಕ್ಕೆ ಗೋಣಿಬೀಡು ಪೋಲಿಸ್ ಠಾಣೆಯ ಪಿಎಸ್‌ಐ ಅರ್ಜುನ್ ಯಾವುದೇ ದೂರು ಇಲ್ಲದೇ ಗ್ರಾಮದ ದಲಿತ ಯುವಕ ಪುನೀತ್ (22) ಯುವಕನನ್ನು ಶಂಕೆಯ ಮೇಲೆ ಮೇ.10 ರಂದು ಠಾಣೆಗೆ ಕರೆತಂದಿದ್ದು ಮಹಿಳೆಯೊಂದಿಗೆ ಅನೈತಿಕ ಸಂಬಂಧ ಮತ್ತು ಆಕೆಯನ್ನು ಬಚ್ಚಿಟ್ಟಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ.
ಇದಕ್ಕೆ ಒಪ್ಪಿಕೊಳ್ಳದಿದ್ದಾಗ ಪಿಎಸ್‌ಐ ಅರ್ಜುನ್ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಕುಡಿಯಲು ನೀರು ಕೇಳಿದ್ದಕ್ಕೆ ಮೂತ್ರವನ್ನು ಕುಡಿಸಿದ್ದಾರೆ ಎಂದು ಯುವಕ ಆರೋಪಿಸಿದ್ದು, ನೊಂದ ಯುವಕ ಎಸ್.ಪಿ, ಐಜಿ, ಡಿಐಜಿಗೆ ಪತ್ರ ಬರೆದು ತನಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾನೆ. ಯುವಕನ ದೂರಿನ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿವೈಎಸ್ ಪಿ ಒಬ್ಬರನ್ನು ನೇಮಿಸಿದ್ದರು.
ಬಳಿಕ ಗೋಣಿಬೀಡು ಠಾಣಾಧಿಕಾರಿ ಅರ್ಜುನ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಕಚೇರಿಗೆ ವರ್ಗಾವಣೆ ಮಾಡಿ ಗೋಣಿಬೀಡು ಠಾಣೆಗೆ ಮಹಿಳಾ ಪಿಎಸ್‌ಐ ಒಬ್ಬರನ್ನು ನೇಮಿಸಿದ್ದರು. ಈ ಕ್ರಮವನ್ನು ಮೂಡಿಗೆರೆ ದಲಿತಪರ ಸಂಘಟನೆಗಳು ಮತ್ತು ರಾಜಕೀಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಪಿಎಸ್‌ಐ ಅರ್ಜುನ್ ಅವರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದ್ದರು. ಪಿಎಸ್‌ಐ ದಲಿತ ಅರ್ಜುನ್ ದೌರ್ಜನ್ಯ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಅರ್ಜುನ್ ಮೇಲೆ ಪ್ರಕರಣ ದಾಖಲಾಗಿದೆ.
‘ಕಿರುಗುಂದ ಗ್ರಾಮದ ದಲಿತ ಯುವಕನಿಗೆ ಗೋಣಿಬೀಡು ಠಾಣಾಧಿಕಾರಿ ದೌರ್ಜನ್ಯ ಎಸಗಿರುವ ಬಗ್ಗೆ ದೂರು ಬಂದಿದೆ. ಈ ಸಂಬಂಧ ತನಿಖೆಗೆ ಡಿವೈಎಸ್‌ಪಿ ಒಬ್ಬರನ್ನು ನೇಮಕ ಮಾಡಲಾಗಿದೆ. ತನಿಖಾ ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು.’
-ಎಂ.ಎಚ್.ಅಕ್ಷಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.