ಬದುಕು ಎನ್ನುವುದು ಅನಿಶ್ಚಿತತೆಗಳ ಆಗರ. ಭವಿಷ್ಯವನ್ನು ಹೀಗೆ ಅಂತ ಊಹಿಸಲು ಸಾಧ್ಯವಿಲ್ಲ. ಹಾಗೆಯೇ ಭೂತ ಕಾಲವನ್ನು ಮತ್ತೆ ಬದಲಿಸಲು ಅಸಾಧ್ಯ. ಸದ್ಯ ಈಗ ಇರುವ ಸಮಯದಲ್ಲಿ ಸಂತೋಷವಾಗಿರುವುದೇ ನಮಗೆ ನಾವು ಕೊಡುವ ದೊಡ್ಡ ಬಹುಮಾನ.
ಪ್ರತಿ ಸೂರ್ಯೋದಯ ನಮಗೆ ನಗಲು, ಖುಷಿ ಖುಷಿಯಾಗಿರಲು ಅವಕಾಶ ನೀಡುತ್ತದೆ. ಆದರೆ ನಾವು ಭವಿಷ್ಯದ ನೆಪದಲ್ಲಿ, ಭಯದಲ್ಲಿ ಅದನ್ನು ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದೇವೆ. ಆಗಿದ್ದು ಆಗಿ ಹೋಯಿತು. ಬರಲಿರುವುದು ಇನ್ನೂ ದೂರದಲ್ಲಿದೆ. ಅವುಗಳ ಚಿಂತೆಯಲ್ಲೇ ಕಾಲ ಕಳೆದರೆ ಈಗಿನ ಸಮಯವನ್ನು ಅನುಭವಿಸಲು ಸಾಧ್ಯವಿಲ್ಲ. ನಾಳೆಯ ಚಿಂತೆಯಲ್ಲಿ ಇಂದು ಕಳೆದುಕೊಂಡವರ ಕುರಿತಾದ ಕಥೆಯೊಂದಿದೆ.
ಬಹಳ ವರ್ಷಗಳ ಹಿಂದೆ..ಒಂದೂರು. ಅಲ್ಲಿ ಕೃಷಿಯನ್ನೇ ನಂಬಿಕೊಂಡು ಬದುಕುತ್ತಿದ್ದ ಕುಟುಂಬವೊಂದಿತ್ತು. ಪಾಲಿಗೆ ಬಂದ ಚಿಕ್ಕ ಹೊಲದಲ್ಲಿ ಅವರು ಭತ್ತ ಬೆಳೆಯುತ್ತಿದ್ದರು. ಆ ಕುಟುಂಬಕ್ಕೆ ವರ್ಷಕ್ಕೆ ಬೇಕಾಗುವಷ್ಟು ಭತ್ತ ಬೆಳೆಯುತ್ತಿತ್ತು. ಆ ಹೊಲವೊಂದೇ ಅವರ ಆಹಾರದ ಮೂಲವಾಗಿತ್ತು. ಅದೊಂದು ವರ್ಷ ಹೊಲದಲ್ಲಿ ನಿರೀಕ್ಷಿಸಿದಷ್ಟು ಭತ್ತ ಬೆಳೆಯಲಿಲ್ಲ. ಕೊçಲು ಎಲ್ಲ ಮುಗಿಸಿ ಭತ್ತ ರಾಶಿಯನ್ನು ಲೆಕ್ಕ ಹಾಕಿದಾಗ ಸುಮಾರು ಒಂದು ತಿಂಗಳಿಗಾಗುವಷ್ಟು ಕೊರತೆಯಾಗುತ್ತದೆ ಎಂದು ಅಂದಾಜಿಸಲಾಯಿತು. ಮನೆಯವರೆಲ್ಲ ಒಟ್ಟಿಗೆ ಕೂತು ಏನು ಮಾಡುವುದೆಂದು ಚರ್ಚಿಸತೊಡಗಿದರು. “ಅಕ್ಕಿಯ ಕೊರತೆ ಇರುವುದರಿಂದ ಈ ತಿಂಗಳು ಎಲ್ಲರೂ ಉಪವಾಸ ಇರೋಣ’ ಎಂದ ಯಜಮಾನ. ಮಾರನೇ ದಿನದಿಂದ ಕೊರತೆ ನೀಗಲು ಮನೆಯವರ ಸರ್ಕಸ್ ಆರಂಭವಾಯಿತು. ಎಲ್ಲರೂ ನೀರನ್ನು ಕುಡಿದು ಹಿತ್ತಿಲಲ್ಲಿ ಸಿಗುವ ಹಣ್ಣು ತಿಂದು ಹಸಿವು ನೀಗಿಸತೊಡಗಿದರು. ಸ್ವಲ್ಪ ದಿನದಲ್ಲಿ ಹಣ್ಣುಗಳೂ ಖಾಲಿಯಾದವು. ಸ್ವಲ್ಪ ದಿನದಲ್ಲಿ ಹಸಿವಿನಿಂದ ಮನೆಯವರೆಲ್ಲ ಅಸ್ವಸ್ಥರಾದರು. ಇದು ಕಥೆಯೇ ಇರಬಹುದು. ಆದರೆ ನೀಡುವ ಸಂದೇಶ ಮಾತ್ರ ಅದ್ಬುತ. ಇಂದು ಎನ್ನುವ ಅಮೂಲ್ಯ ಸಮಯ ನಿಮ್ಮ ಕೈಯಲ್ಲಿದೆ. ಹೀಗಾಗಿ ಇದನ್ನು ಖುಷಿ ಖುಷಿಯಾಗಿ ಕಳೆಯಿರಿ.
ಗುರಿ ಇರಲಿ
ಭವಿಷ್ಯದ ಚಿಂತೆಯಿಂದ ಅನೇಕರ ಮುಖದ ನಗು ಮಾಯವಾದ ಪ್ರಸಂಗ ನಮ್ಮ ಕಣ್ಣ ಮುಂದಿದೆ. ಹಾಗಂತ ಭವಿಷ್ಯದ ಯೋಜನೆ ಇಲ್ಲದಿರುವುದು ಕೂಡಾ ಅಪಾಯಕಾರಿ. ವಿದ್ಯಾರ್ಥಿಗಳಿಗೆ, ಯುವ ಜನತೆಗೆ ಭವಿಷ್ಯದ ಚಿಂತನೆ ಅತ್ಯಗತ್ಯ. ಮುಂದೆ ಏನಾಗಬೇಕು ಎನ್ನುವ ಗುರಿ ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗಬೇಕಾದುದು ಅವಶ್ಯ. ಗುರಿ ಇಟ್ಟುಕೊಳ್ಳುವುದು ಮತ್ತು ಮುಂದೆ ಅನಾಹುತವಾಗುತ್ತೆಂದು ಊಹಿಸಿ ಬೆಚ್ಚಿ ಬೀಳುವುದಕ್ಕೆ ವ್ಯತ್ಯಾಸವಿದೆ.
-ರಮೇಶ್ ಬಳ್ಳಮೂಲೆ