ಒಮ್ಮೆ ಯಾವುದೋ ಬೇಸರದಲ್ಲಿ ರೈಲು ಹಳಿಗಳ ಮಧ್ಯದಲ್ಲಿ ಒಂಟಿಯಾಗಿ ನಾಲ್ಕೈದು ಕಿಲೋಮೀಟರ್ ನಡೆದೇ ಹೋಗಿದ್ದೆ. ಸಾಯಬೇಕೆಂದು ಹಠಹಿಡಿದು ಆತ್ಮಹತ್ಯೆಯ ದಾರಿ ಹಿಡಿದು ಹೊರಟವಳಿಗೆ, ಆ ಹಾದಿಯುದ್ದಕ್ಕೂ ನೆನಪಾಗಿದ್ದು ನಿನ್ನ ಅಮೃತದಂಥ ಮಾತುಗಳು, ನೀ ಸುರಿದು ಹೋದ ಪ್ರೀತಿ…
ಬೆಳದಿಂಗಳಿನಂಥವನೇ ಕೇಳಿಲ್ಲಿ,
ಪ್ರೀತಿಯ ಬಗ್ಗೆ ನಿನಗದೆಷ್ಟು ಗೌರವ, ಪ್ರೀತಿ ಎಂದರೆ ನಿನ್ನ ಪಾಲಿಗೆ ಬರಿಯ ಪ್ರೀತಿಯಲ್ಲ; ಗುಡಿಯಲ್ಲಿ ಪೂಜಿಸಿಕೊಳ್ಳುವ ದೇವರಷ್ಟೇ ಪ್ರೀತಿಯೂ ಶ್ರೇಷ್ಠ. ಜಗತ್ತಿನ ಎಲ್ಲಾ ಪ್ರೇಮಕಾವ್ಯಗಳನ್ನೂ ನೀನು ಸಲೀಸಾಗಿ ಅರಗಿಸಿಕೊಂಡಿದ್ದೆಯೋ ಏನೋ ಎಂಬ ಪ್ರಶ್ನೆಯೊಂದು ಈ ಕ್ಷಣಕ್ಕೂ ನನ್ನಲ್ಲಿ ಉಳಿದುಬಿಟ್ಟಿದೆ. ನಾ ಕಂಡ ಜಗತ್ತಿನಲ್ಲಿ ಪ್ರೀತಿ ಎಂದರೆ ಕೇವಲ ಹೆಣ್ಣು-ಗಂಡುಗಳ ನಡುವಿನ ಆಕರ್ಷಣೆ, ದೇಹಗಳ ಹಸಿವ ಇಂಗಿಸಲು ಸಿಗುವ ಸುಲಭ ದಾರಿಯಷ್ಟೇ. ಇಲ್ಲಿ ಪ್ರೀತಿ ಎಂಬ ಮಹಾ ಪದದ ಅರ್ಥವೇ ಬುಡಮೇಲಾಗಿದೆ. ಅದಿರಲಿ ಬಿಡು, ನಾನು ಈಗ ಬದುಕುತ್ತಿರುವುದು ನೀನು ಅಮ್ಮನಂತೆ ಬೆರಳ ಹಿಡಿದು ನಡೆಸಿ ಹೋದ ಅದೇ ದಾರಿಯಲ್ಲಿ. ಹಾಗಾಗಿ ನನಗಿಲ್ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ.
ಪ್ರೇಮಿಸುವುದನ್ನಷ್ಟೇ ಅಲ್ಲ, ಬದುಕಿಗೆ ಬೇಕಾದ ಎಲ್ಲವನ್ನೂ ಕಲಿಸಿಕೊಟ್ಟೆ, ಅರ್ಥಮಾಡಿಸಿದೆ. ಈ ಕಗ್ಗಲ್ಲನ್ನೂ ಕಡೆದು ಆಕಾರ ಕೊಟ್ಟು, ಜೀವ ತುಂಬಿದ ಹೆಗ್ಗಳಿಕೆ ನಿನಗೇ ಸಲ್ಲಬೇಕು. ಅಳುವುದಕ್ಕೂ ಸರಿಯಾಗಿ ಬಾರದ ಅಂದಿನ ನಾನು, ಈ ಪರಿ ಬದಲಾಗಿದ್ದೇನೆಂದರೆ ನೀನು ನಂಬುವುದಿಲ್ಲ. ನೀನೇನು? ನಾನೇ ಆಗಾಗ ನಿಲುವುಗನ್ನಡಿಯ ಮುಂದೆ ನಿಂತು, ಇದು ನಾನೇ ಎಂಬುದನ್ನು ಖಾತರಿ ಮಾಡಿಕೊಳ್ಳುತ್ತೇನೆ.
ನೀ ಹೋದ ಮೇಲೆ ಈ ಬದುಕೆಂಬ ದೊಂಬರ ನನ್ನನ್ನು ಹೇಗೆಲ್ಲಾ ಕುಣಿಸಿಬಿಟ್ಟ ಗೊತ್ತಾ? ಜಗತ್ತೇ ಬೇಡವೆಂದು ರೋಸಿಹೋಗುವಷ್ಟು. ಒಮ್ಮೆ ಯಾವುದೋ ಬೇಸರದಲ್ಲಿ ರೈಲು ಹಳಿಗಳ ಮಧ್ಯದಲ್ಲಿ ಒಂಟಿಯಾಗಿ ನಾಲ್ಕೈದು ಕಿಲೋಮೀಟರ್ ನಡೆದೇ ಹೋಗಿದ್ದೆ. ಸಾಯಬೇಕೆಂದು ಹಠಹಿಡಿದು ಆತ್ಮಹತ್ಯೆಯ ದಾರಿ ಹಿಡಿದು ಹೊರಟವಳಿಗೆ, ಆ ಹಾದಿಯುದ್ದಕ್ಕೂ ನೆನಪಾಗಿದ್ದು ನಿನ್ನ ಅಮೃತದಂಥ ಮಾತುಗಳು, ನೀ ಸುರಿದು ಹೋದ ಪ್ರೀತಿ, ಬದುಕಿನೆಡೆಗೆ ನಿನಗಿದ್ದ ಗೌರವ, ಕಷ್ಟಗಳಿಗೆ ಸೆಡ್ಡು ಹೊಡೆಯುತ್ತಿದ್ದ ಆ ನಿನ್ನ ಛಲ. ಕೊನೆಗೆ ನಿನ್ನಂಥ ನೀನಿಲ್ಲದೆಯೂ ಬದುಕಲು ಕಲಿತವಳಿಗೆ ಇದ್ಯಾವ ಮಹಾ ಕಷ್ಟವೆನಿಸಿ ಹೋದ ದಾರಿಯಲ್ಲೇ ವಾಪಸ್ ಬಂದಿದ್ದೆ. ಇಲ್ಲದಿದ್ದರೆ ಇವತ್ತು, ಹೀಗೆ, ನಿನ್ನ ನೆನಪುಗಳನ್ನು ಹಾಳೆಗಿಳಿಸಲು ನಾನಿರುತ್ತಿರಲಿಲ್ಲ.
ಹೀಗೆ ಪ್ರೇಮಿಯೊಬ್ಬ ಹೆಸರಿಗಷ್ಟೇ ಪ್ರೇಮಿಯಾಗಿರದೆ ಇಹವ ತೊರೆದ ಮೇಲೂ ಪ್ರೇಮಿಸಿದವಳ ಬದುಕಿಗೆ ಸಕಲವೂ ಆಗಿರುವುದೇ ಪ್ರೀತಿ ಎಂದು ತೋರಿಸಿಕೊಟ್ಟ ನನ್ನ ಪಾಲಿನ ಪುಣ್ಯ ನೀನು. ನನ್ನ ಹೃದಯದ ಪ್ರತಿ ಮಿಡಿತವೂ ನಿನ್ನ ಹೆಸರನ್ನೇ ಜಪಿಸುತ್ತಿರುವಾಗ, ನಿಂತು ಹೋಗಿದ್ದು ನಿನ್ನುಸಿರಷ್ಟೇ; ನನ್ನುಸಿರು ನಿಲ್ಲುವವರೆಗೂ ನೀನು ಜೀವಂತ!
ಸತ್ಯಾ ಗಿರೀಶ್