ನ್ಯೂಯಾರ್ಕ್: ರಸ್ತೆಯಲ್ಲಿ ಕಾರೊಂದು ಅಡ್ಡಾದಿಡ್ಡಿ ಚಲಿಸುತ್ತಿದ್ದರಿಂದ ಅದನ್ನು ತಡೆದ ಪೊಲೀಸರೇ ದಂಗಾದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಐದು ವರ್ಷದ ಬಾಲಕನೊಬ್ಬ ಜೇಬಿನಲ್ಲಿ ಕೇವಲ 3 ಡಾಲರ್ ಗಳನ್ನಿಟ್ಟುಕೊಂಡು ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಖರೀದಿಸಲು ತನ್ನ ತಾಯಿಯ ಕಾರು ಚಲಾಯಸಿಕೊಂಡು ಹೋಗುವ ವೇಳೆ ಪೊಲೀಸರು ಅಡ್ಡಗಟ್ಟಿ ಆತನನ್ನು ತಡೆದಿದಿದ್ದಾರೆ.
ಅಮೆರಿಕಾದ ಉತಾಹ್ ಎಂಬ ರಾಜ್ಯದಲ್ಲಿ ಈ ಘಟನೆ ನಡೆದಿದೆ. ಅಡ್ಡಾದಿಡ್ಡಿ ಹೋಗುತ್ತಿದ್ದ ಕಾರನ್ನು ಗಮನಿಸಿದ ಪೊಲೀಸರು ಯಾರೋ ಮದ್ಯದ ಅಮಲಿನಲ್ಲಿ ಕಾರು ಓಡಿಸುತ್ತಿರಬೇಕೆಂದು ಭಾವಿಸಿ ಅಡ್ಡಗಟ್ಟಿದ್ದರು. ಆದರೆ ಡ್ರೈವಿಂಗ್ ಸೀಟ್ ನಲ್ಲಿದ್ದ ಕೇವಲ 5 ವರ್ಷದ ಬಾಲಕನನ್ನು ಕಂಡು ಕೆಲಕಾಲ ಆಶ್ಚರ್ಯಕ್ಕೀಡಾಗಿದ್ದಾರೆ.
ತನಗೆ ಲ್ಯಾಂಬೋರ್ಗಿನಿ ದುಬಾರಿ ಕಾರನ್ನು ಕೊಡಿಸುವಂತೆ ಈ 5 ವರ್ಷದ ಬಾಲಕ ತಾಯಿಯ ಬಳಿ ಜಗಳವಾಡಿದ್ದಾನೆ. ಆದರೆ ತಾಯಿ ಆದನ್ನು ನಿರಾಕರಿಸಿದಾಗ ಮುನಿಸಿಕೊಂಡ ಆತ ತಾಯಿಯ ಕಾರನ್ನೇ ಚಲಾಯಿಸಿಕೊಂಡು ಕ್ಯಾಲಿಫೋರ್ನಿಯಾಗೆ ತೆರಳಿ ಲ್ಯಾಂಬೋರ್ಗಿನಿ ಖರೀದಿಸಲು ಮುಂದಾಗಿದ್ದಾನೆ. ಸೋಜಿಗದ ಸಂಗತಿಯೆಂದರೇ ಆತನ ಜೇಬಿನಲ್ಲಿದ್ದಿದ್ದು ಕೇವಲ 3 ಡಾಲರ್ ಮಾತ್ರ. ಹೊಸ ಲ್ಯಾಂಬೋರ್ಗಿನಿ ಕಾರಿನ ಬೆಲೆ ಸುಮಾರು 2 ಲಕ್ಷ ಡಾಲರ್ ಎಂದು ಅಧಿಕಾರಿಗಳು ಈ ವೇಳೆ ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಕಾರು ಮನಬಂದಂತೆ ಚಲಾಯಿಸುತ್ತಿದ್ದ ಕೂಡಲೇ ಪೊಲೀಸರು ತಡೆದಿದ್ದರು. ಇಲ್ಲದಿದ್ದರೇ ಭಾರೀ ಅನಾಹುತವಾಗುತ್ತಿತ್ತು. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಪೋಷಕರ ವಿರುದ್ಧ ಪ್ರಕರಣ ದಾಖಲಿಸುವ ಕುರಿತು ಸರ್ಕಾರಿ ವಕೀಲರು ನಿರ್ಧರಿಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಿಕ್ ಮಾರ್ಗನ್ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ತಮ್ಮ ಮಗ ಈ ರೀತಿ ವರ್ತಿಸಿದ್ದು, ತಾವಿಲ್ಲದ ವೇಳೆ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.