ರಾಮನಗರ: ಇತ್ತೀಚೆಗೆ ಮೈಸೂರಿನಲ್ಲಿ ಆಯೋಜಿಸಿದ್ದ ಒಕ್ಕಲಿಗರ ಸಭೆಯಲ್ಲಿ “ಸಿಎಂ ಬದಲಾವಣೆ’ ಸುಳಿವು ನೀಡಿದ್ದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈಗ ಮತ್ತೆ ಸಿಎಂ ಹುದ್ದೆ ಕುರಿತು ಹೇಳಿಕೆ ನೀಡುವ ಮೂಲಕ ಚರ್ಚೆ ಮುಂದುವರಿಸಿದ್ದಾರೆ. “ನಾನು ಸಿಎಂ ಆಗುತ್ತೇನೆ ಎಂಬ ಭಾವನೆ ಇಟ್ಟು ಕೊಂಡು ನೀವು ನನ್ನನ್ನು ಗೆಲ್ಲಿಸಿದ್ದೀರಿ, ಆ ನಂಬಿಕೆಗೆ ಮೋಸ ಆಗುವುದಿಲ್ಲ’ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಮಂಗಳವಾರ ಹಾರೋ ಹಳ್ಳಿಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಸಹೋದರ ಡಿ.ಕೆ. ಸುರೇಶ್ ಪರ ಪ್ರಚಾರ ನಡೆಸಿ, ಬಹಿರಂಗ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, “ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ’ ಎಂದರು.
ಜನತಾದಳ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕೈಮುಗಿದು ಮನವಿ ಮಾಡುತ್ತೇನೆ, ಸಮಯ ವ್ಯರ್ಥ ಮಾಡಬೇಡಿ. ನಮ್ಮ ಕಾರ್ಯಕರ್ತರಿಗೂ ನಿಮಗೂ ಭಿನ್ನಾಭಿಪ್ರಾಯ ಇರಬಹುದು, ನಮ್ಮನ್ನು ನೋಡಿ. ನೀವು ಯಾರ್ಯಾರಿಗೋ ಅಧಿಕಾರ ಕೊಟ್ಟಿದ್ದೀರಿ, ಈಗ ನಿಮ್ಮ ಮನೆ ಮಗನಿಗೆ ಅಧಿಕಾರ ಕೊಡಿ. ನಾನು ಸಿಎಂ ಆಗುತ್ತೇನೆ ಎಂಬ ಭಾವನೆ ಇಟ್ಟುಕೊಂಡು ನೀವು ನನ್ನನ್ನು ಗೆಲ್ಲಿಸಿದ್ದೀರಿ, ಆ ನಂಬಿಕೆಗೆ ಮೋಸ ಆಗುವುದಿಲ್ಲ, ನಿಮ್ಮ ಸೇವೆ ಮಾಡುತ್ತೇನೆ, ಡಿ.ಕೆ. ಸುರೇಶ್ ಅವರನ್ನು ಗೆಲ್ಲಿಸಿ ಎಂದು ಶಿವಕುಮಾರ್ ಹೇಳಿದರು.
“ದಿಲ್ಲಿಯಲ್ಲಿ ಏನು ಆಗಬೇಕೋ, ಎಲ್ಲ ತೀರ್ಮಾನ ಆಗಿದೆ. ಸ್ವಲ್ಪ ದಿನ ಕಾಯಿರಿ. ನೀವು ಎಲ್ಲರೂ ನನ್ನ ಬೆಂಬಲಕ್ಕೆ ನಿಲ್ಲಬೇಕು. ಈಗ ಅದರ ಬಗ್ಗೆ ಚರ್ಚೆಗಳು ಬೇಡ’ ಎಂದು ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಡೆದ ಒಕ್ಕಲಿಗರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.