Advertisement

ನಿನ್ನ ನೆನಪು ಮರೆಯಾಗುತ್ತಿದೆ…

08:21 AM May 12, 2020 | Lakshmi GovindaRaj |

ಕನಸು ಕಾಣುವ  ಕಣ್ಣಿಗೇನು ಗೊತ್ತು, ನಿನ್ನ ತೊರೆದ ನೋವಿನ ಸಂಕಟ? ಕಾಣುವಷ್ಟು ದೂರ ಹುಡುಕಿ ಸುಸ್ತಾಗಿ ಬಡಿದುಕೊಳ್ಳುವುದೇ ರೆಪ್ಪೆಯ ಕೆಲಸ. ಬದುಕಿನ ಅಂಗಳದಲ್ಲಿ ಸುಂದರ ಕನಸುಗಳ ರಾಶಿ ಹಾಕಿದ್ದ ಕಣ್ಣುಗಳು, ಇಂದು  ನೀರವತೆಗೆ ಶರಣಾಗಿವೆ. ಒಂಟಿತನದ ಯಾನಕ್ಕೆ ಒಗ್ಗಿಕೊಂಡಿವೆ. ನಿನ್ನನ್ನೇ ನನ್ನ ಜಗತ್ತೆಂದು ಭಾವಿಸಿ ಜೀವಿಸತೊಡಗಿದ ಮೇಲೆ, ಅದೆಂಥದೋ ಪ್ರೀತಿ ನನ್ನ ಮೇಲೆ ನನಗೇ ಹುಟ್ಟಿಕೊಂಡಿತು. ನಿನ್ನ ಮೇಲಿನ ಒಲವನ್ನು, ನಿನ್ನ ಹೊರತು ಬೇರೆ ಯಾರ ಮುಂದೆಯೂ ತೋರ್ಪಡಿಸಲು ಆಗದೇ ನಿಂತಲ್ಲೇ ಚಡಪಡಿಸಿದೆ. ನಿನಗಾಗಿ ದಿನವೂ ಕನವರಿಸಿದೆ. ನಿನ್ನ ಬರುವಿಕೆಗಾಗಿ, ದಿನವೂ ಮನ ಹಾತೊರೆಯುತಿತ್ತು.

Advertisement

ಆದರೆ, ಅಂದುಕೊಂಡಿದ್ದೆಲ್ಲಾ ನಿಜವಾಗಲೇಬೇಕೆಂಬ ನಿಯಮ  ಇಲ್ಲವಲ್ಲ…  ಸಣ್ಣದೊಂದು ಕಾರಣ ಮುಂದಿಟ್ಟು, ನಿರಾಕರಣೆಯ ಮಾತಾಡಿ ನೀನು ಹೋಗಿಬಿಟ್ಟಮೇಲೆ, ನನಗೆ ನಾನೇ ಸಮಾಧಾನ ಹೇಳಿಕೊಂಡಿದ್ದೇನೆ. ನಿನ್ನ ಅಗಲಿಕೆಯ ನಂತರವೂ, ಬದುಕುವ ಚೈತನ್ಯ ಬೆಳೆಸಿಕೊಂಡಿದ್ದೇನೆ. ನಿನ್ನ ಪ್ರತಿ  ಸ್ಪರ್ಶವನ್ನೂ ಸಂಭ್ರಮಿಸುತ್ತಾ, ನಿನ್ನ ಮಾತಿನ ಧಾಟಿಗೆ ಸೋಲುತ್ತಾ, ನಿನ್ನ ನಗುವಿಗೆ ದಾಸಿಯಾಗಿ, ನನ್ನ ಖುಷಿಯನ್ನು ನಿನ್ನಲ್ಲಿ ಕಾಣುತ್ತಾ ಬದುಕಬೇಕು ಎಂದೆಲ್ಲಾ ಕನಸು ಕಟ್ಟಿದ್ದೆ. ನಿನಗಾಗಿ ನಾನು ಎಂದು ನಂಬಿದ್ದೆ. ನಿನಗೋಸ್ಕರ ಎಂದೇ ಬದುಕುತ್ತಿದ್ದೆ. ಅಂಥವಳು, ನನ್ನ ಕನಸಿನ ಗೋಪುರ ಕಣ್ಣಮುಂದೆಯೇ ಚೂರಾಗುವುದನ್ನು ಹೇಗೆ ಸಹಿಸಲಿ..?! ಇಂತಿ, ನೋವು ತಿಂದ ಜೀವ…

* ಗೌರಿ ಆರ್‌.ಬಿ.

Advertisement

Udayavani is now on Telegram. Click here to join our channel and stay updated with the latest news.

Next