ಎರಡು ವಾರದಿಂದ ವಿಪರೀತ ಭಾವುಕವಾಗಿಬಿಟ್ಟಿದೆ ಮನಸು. ಎರಡೇ ಎರಡು ಮಾತು ಆಡಬೇಕೆಂದರೂ ಕಣ್ಣಲ್ಲಿ ಚುಳ್ಳೆನ್ನುವ ನೀರು. ಇಂಥ ಸ್ಥಿತಿಗೆ ಆಗಾಗ ನಾನು ಒಳಗಾಗುತ್ತೇನಾದರೂ, ಈ ಸಲದ ತೀವ್ರ ಭಾವುಕತೆಗೆ ಕಾರಣ ಹುಡುಕಿದರೂ ಸಿಗುತ್ತಿಲ್ಲ. ಸುಮ್ಮನೆ ಕಿಟಕಿಯಾಚೆ ದೃಷ್ಟಿ ಹರಿಸಿ ಮೌನಕ್ಕೆ ಜಾರುತ್ತೇನೆ. ಭೇದ-ಭಾವ ಲೆಕ್ಕಿಸದೇ ಕೂಡಿ ಆಡುವ ಚಿಣ್ಣರು, ಅವರ ಕೇಕೆ, ಕಾಲೆಳೆದಾಟ ಕ್ಷಣಕಾಲ ಮನಸ್ಸನ್ನು ಮಂಕಾಗಿಸಿಬಿಡುತ್ತದೆ. ಮನುಷ್ಯನಿಗೆ ಯಾಕಾದರೂ ವಯಸ್ಸಾಗುತ್ತದೋ? ಎಂಬ ಪ್ರಶ್ನೆ ಮೂಡಿ ಮರೆಯಾಗುತ್ತದೆ. ನಮ್ಮ ಬಾಲ್ಯ, ಎಷ್ಟೊಂದು ಗರಿಗರಿಯಾದ ನೆನಪುಗಳನ್ನು ಉಳಿಸಿ ಹೋಗಿರುತ್ತದೆ ಗೊತ್ತಾ ನಿನಗೆ? ಬಾಲ್ಯದಲ್ಲಿ ನಮ್ಮನ್ನು ಚಿಂತೆಯ ಗೆರೆಗಳು ಕೊಂಚವೂ ಬೆಚ್ಚಿ ಬೀಳಿಸುವುದಿಲ್ಲ. ಸಂಸಾರದ ತರಲೆ ತಾಪತ್ರಯಗಳು ತಲೆಬಿಸಿ ಮಾಡುವುದಿಲ್ಲ, ಮಾನ-ಸಮ್ಮಾನಗಳ ಹುಚ್ಚು, ಬಿರುದು-ಬಾವಲಿಗಳ ಗೊಡವೆ ಒಂದೂ ಚಿಕ್ಕ ಮನಸ್ಸನ್ನು ಹಣಿದು ಹೈರಾಣು ಮಾಡುವದಿಲ್ಲ. ಯಾವಾಗ ಬೇಕಾದರೂ ಕಾಲಿಗೆ ಸಿಗುವ, ಮೈ ಉಜ್ಜುವ ಮುದ್ದು ಬೆಕ್ಕಿನಂತೆ, ಖೀಲ್ಲನೆ ನಗುವ ದೊಡ್ಡನಗು, ತುಂಟಾಟ, ಬೆರಗುಗಳನ್ನು ಒಳಗೊಂಡ ಬಾಲ್ಯ ನನಗಿಂದಿಗೂ ಇಷ್ಟ. ಬಾಲ್ಯದ ದಿನಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತಿರುತ್ತೇನೆ. ಕವಿದ ಖನ್ನತೆ ಮೈಲಾಚೆ ಓಡಿರುತ್ತದೆ.
ಕೋಯಿ ಲೌಟಾದೆ ಮೇರೆ ಬೀತೆ ಹುವೆ ದಿನ್…..
ನನಗೆ ತುಂಬಾ ದುಃಖವಾದಾಗ ಮಾಡುವ ಮೊಟ್ಟ ಮೊದಲ ಕೆಲಸ, ಜೀವ ನದಿ ಮಲಪ್ರಭೆಯ ತೀರಕ್ಕೆ ಹೋಗಿ, ಎದೆಯ ನೋವನ್ನೆಲ್ಲ ಆಕೆಯ ಒಡಲಿಗೆ ಸುರಿಯುವುದು. ನೀನೆಂಬ ನೀನು ಒಬ್ಬಂಟಿಯಾಗಿಸಿ ಬಿಟ್ಟೆದ್ದು ನಡೆದಾಗ, ನನ್ನನ್ನು ಪುಟ್ಟ ಮಗುವಂತೆ ಎದೆಗವಿಚಿಕೊಂಡದ್ದು ಆಕೆಯೇ. ಆಕೆ ನಾನು ಅತ್ತಾಗಲೆಲ್ಲಾ ರಮಿಸಿದ್ದಾಳೆ, ಖುಷಿಗೊಂಡಾಗ ಉಕ್ಕೇರುತ್ತಾ ಸಂಭ್ರಮಿಸಿದ್ದಾಳೆ. ಆಕೆಯ ಸನ್ನಿಧಿಯಲ್ಲಿ ಇದ್ದಷ್ಟು ಹೊತ್ತು ನಿನ್ನ ನೆನಪು ಬಿಡದೆ ಸತಾಯಿಸತೊಡಗುತ್ತದೆ. ಹಾಗೆಯೇ ನೀನಂದ ಮಾತುಗಳು…..
ಈ ಜಗತ್ತಿನಲ್ಲಿ ಅನ್ನಕ್ಕಾಗಿ ಹಸಿದವರಿಗಿಂತ ಪ್ರೀತಿಗಾಗಿ ಹಸಿದವರು ಹೆಚ್ಚು ಕಣೋ. ಪ್ರೀತಿಯೊಂದಕ್ಕೇ ಎಲ್ಲ ಕೊರತೆಗಳನ್ನೂ ನೀಗಿಸಬಲ್ಲ ಶಕ್ತಿ ಇರುವುದು. ಅಂಥ ಅಚ್ಚಳಿಯದ ಪ್ರೀತಿ ತುಂಬಿದ ಪತ್ರಗಳ ಮೂಲಕ ಬರಡು ಹೃದಯದಲ್ಲೂ ಪ್ರೇಮದ ಸುಧೆ ಬಿತ್ತುತ್ತಿರುವವನು ನೀನು. ಎಂದಿಗೂ ಬರೆಯುವುದನ್ನು ನಿಲ್ಲಿಸಬೇಡ. ನಿನ್ನ ಪ್ರೀತಿ ತುಂಬಿದ ಬರಹದ ಪ್ರತಿ ಅಕ್ಷರಗಳಲ್ಲೂ ನಾನಿದ್ದೇನೆ, ನನ್ನ ಒಲವಿದೆ ಎಂದು ಹೇಳಿ ತಿರುಗಿ ಬಾರದ ದಾರಿಗೆ ನಡೆದುಬಿಟ್ಟೆ. ಅಂದಿನಿಂದ ಇಂದಿನವರೆಗೆ ನಿನಗಾಗಿಯೇ ಬರೆಯುತ್ತಿದ್ದೇನೆ. ಎಷ್ಟೋ ಒಲವ ಓಲೆಗಳನ್ನು ನಿನ್ನೆದೆ ತೀರಕ್ಕೆ ತೇಲಿಬಿಟ್ಟಿದ್ದೇನೆ, ಅವು ಮರಳಿ ಬರಲಾರವು ಎಂದು ಗೊತ್ತಿದ್ದೂ…
ಈ ಮಲಪ್ರಭೆ ತೀರದಲ್ಲಿ, ನೀರೊಳಗೆ ಕಾಲು ಇಳಿಬಿಟ್ಟು ಕಣ್ಣೆವೆ ಅಲುಗಿಸದೆ ದಿಟ್ಟಿಸುತ್ತೇನೆ. ಅದೋ ಅಲ್ಲಿ, ಆಚೆ ತೀರದಲ್ಲಿ ಒಂಟಿ ದೋಣಿಯೊಂದು ತೆಪ್ಪಗೆ ಕುಳಿತಿದೆ. ಹರಿಗೋಲು ಹಿಡಿವ ನಾವಿಕನಿಲ್ಲದೆ. ಎಲ್ಲಿಗೆ ತಲುಪಬೇಕು ಎಂಬ ಗಮ್ಯದ ಗೊಡವೆ ಇಲ್ಲದೆ, ಏನನ್ನೋ ಧೇನಿಸುತ್ತಾ, ಏಕಾಂತದಲ್ಲಿ ಸಂಭಾಷಿಸುತ್ತಾ ನನ್ನಂತೆ ಮೌನದೊಳಗೆ ತಲ್ಲೀನವಾಗಿದೆ. ಅದ್ಯಾವ ಜೊತೆಗಾರನಿಗಾಗಿ ಕಾದಿದೆಯೋ? ನೀನೇ ಇಲ್ಲದ ಬಾಳು ನಾವಿಕನಿಲ್ಲದ ದೋಣಿಯಂತೆ. ನಿನ್ನ ಜೊತೆಯಿಲ್ಲದೆ ಬಾಳ ಜಾತ್ರೆಗೆಲ್ಲಿಯ ಸಂಭ್ರಮ ಬರಬೇಕು?
ಆಸೆಯೆಂಬ ತಳ ಒಡೆದ ದೋಣಿಯಲಿ
ದೂರ ತೀರ ಯಾಣ….
ಯಾರ ಲೀಲೆಗೋ ಯಾರೋ ಏನೋ..
ಗುರಿಯಿರದೆ ಬಿಟ್ಟ ಬಾಣ….
ಕನಸು ಕದ್ದವಳು ನೀನು. ನೀನು ಕಾಲ್ಕಿತ್ತ ನಂತರ ಕನಸುಗಳೂ ಗುಳೆ ಹೋಗಿವೆ ನಿನ್ನೊಂದಿಗೆ. ಎದೆಯ ಭಾರ, ಒಡಲುರಿ, ಒದ್ದೆ ಕಂಗಳು, ಮೂಕ ಮನಸು ಎಲ್ಲವೂ ನಿನ್ನ ಅನುಪಸ್ಥಿತಿಯನ್ನು ಸಾರಿ ಸಾರಿ ಹೇಳುತ್ತಿವೆ. ನಾನೋ ಅಸಹಾಯಕನಂತೆ ಎಲ್ಲವನ್ನೂ ಪ್ರೀತಿಯಲದ್ದಿ, ಅಕ್ಷರರೂಪಕ್ಕಿಳಿಸಿ ನಿಟ್ಟುಸಿರಾಗುತ್ತೇನೆ. ನನ್ನ ನಿಟ್ಟುಸಿರು ನಿನ್ನ ತಲುಪುತ್ತಾ? ಗೊತ್ತಿಲ್ಲ!
ನಾಗೇಶ್ ಜೆ. ನಾಯಕ