Advertisement
ನಾವು ದಿನದ ಬಹುಹೊತ್ತು ಕಳೆಯುವುದು ನಮ್ಮ ಮನೆಯಲ್ಲೇ, ಅದರಲ್ಲೂ ಹಿರಿಯರು ಹಾಗೂ ಮಕ್ಕಳು ಮತ್ತೂ ಹೆಚ್ಚು ಹೊತ್ತು ಒಳಗೇ ಇರುತ್ತಾರೆ. ಜೊತೆಗೆ ದಿನದ ಅತಿ ಕಡಿಮೆ ತಾಪಮಾನ ರಾತ್ರಿ ಕಳೆಯುತ್ತಿದ್ದಂತೆ , ಸೂರ್ಯ ಉದಯಿಸುವ ಮೊದಲು ಇರುವುದರಿಂದ, ನಾವ ಗಾಢನಿದ್ರೆಯಲ್ಲಿರುವಾಗ ನಮ್ಮ ದೇಹವು ಅತಿ ಕಡಿಮೆ ತಾಪಮಾನವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮಳೆಗಾಲದಲ್ಲೂ ಮನೆಯನ್ನು ಬೆಚ್ಚಗೆ ಹಾಗೂ ಆರೋಗ್ಯಕರವಾಗಿ ಇರುವಂತೆ ವಿನ್ಯಾಸ ಮಾಡಿಕೊಳ್ಳಬೇಕು.
ದಿನದ ಹೊತ್ತು ಬಿಸಿಲಿಗೆ ಕಾಯ್ದು ರಾತ್ರಿ ಅದೇ ಶಾಖವನ್ನು ಮನೆಯ ಒಳಗೆ ಹರಿಸಿದರೆ ನಮಗೆ ಸುಲಭದಲ್ಲಿ ಬೆಚ್ಚನೆಯ ಮನೆ ದೊರಕುತ್ತದೆ. ಚಳಿಗಾಲದಲ್ಲಿ ದಕ್ಷಿಣ ದಿಕ್ಕಿನಲ್ಲಿ ಸೂರ್ಯ ದಿನದ ಬಹುಪಾಲು ಭಾಗ ತನ್ನ ಕಿರಣಗಳನ್ನು ಹರಿಸುವುದರಿಂದ ದಪ್ಪನೆಯ ಗೋಡೆ ಇದ್ದಲ್ಲಿ ಶಾಖ ಹಿಡಿದಿಡಲು ಅನುಕೂಲಕರ. ಸಾಮಾನ್ಯವಾಗಿ ಒಂಬತ್ತು ಇಂಚಿನ ಇಟ್ಟಿಗೆ ಗೋಡೆ, ಆರು ಇಂಚಿನ ಕಾಂಕ್ರಿಟ್ ಬ್ಲಾಕಿನ ಗೋಡೆಗಿಂತಲೂ ಈ ಕಾರ್ಯ ನಿರ್ವಹಿಸುವಲ್ಲಿ ಹೆಚ್ಚು ಸೂಕ್ತ. ಇಟ್ಟಿಗೆ ಗೋಡೆಯಲ್ಲಿ ನೈಸರ್ಗಿಕವಾಗಿ ಸಣ್ಣ ಪ್ರಮಾಣದಲ್ಲಿ ಗಾಳಿ “ಆಡುವ’ ಗುಣ ಹೊಂದಿರುವುದರಿಂದ ಈ ಪದಾರ್ಥ “ಉಸಿರಾಡುತ್ತದೆ’. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಕಾಂಕ್ರಿಟ್ ಗೋಡೆಗಳು ಬೇಗ ಶಾಖವನ್ನು ಹೀರಿಕೊಂಡು ಅಷ್ಟೇ ಬೇಗದಲ್ಲಿ ಒಳಗೆ ಬಿಡುವುದರಿಂದ, ದಿನದ ಹೊತ್ತು ಸೂರ್ಯನ ಶಾಖ ಹೆಚ್ಚಿದ್ದಾಗ ಹೆಚ್ಚು ಬೆಚ್ಚಗೂ, ರಾತ್ರಿ ತಣ್ಣಗಿದ್ದಾಗ ಮತ್ತೂ ತಣ್ಣಗೂ ಒಳಾಂಗಣ ವಾತಾವರಣ ಇರುತ್ತದೆ.
Related Articles
Advertisement
ಗಾಳಿಯ ಲೆಕ್ಕಾಚಾರಸಾಮಾನ್ಯವಾಗಿ ಹಿಂಗಾರಿನ ಅವಧಿಯಲ್ಲಿ ತಣ್ಣನೆಯ ಗಾಳಿ ಪೂರ್ವ ಹಾಗೂ ಹಿಮಾಲಯ ಪರ್ವತದ ಕಡೆಯಿಂದ ಅಂದರೆ ಉತ್ತರದಿಂದ ಬೀಸುತ್ತದೆ. ಹಾಗಾಗಿ
ಈ ದಿಕ್ಕಿನಲ್ಲಿ ದೊಡ್ಡ ದೊಡ್ಡ ಕಿಟಕಿಗಳನ್ನು ಇಡಬಾರದು. ಹಾಗೆಯೇ ಈ ದಿಕ್ಕಿನಲ್ಲಿ ಹೆಚ್ಚು ತೆರೆದ – ಓಪನ್ ಸ್ಪೇಸ್ ನೀಡಿದರೂ ಕೂಡ ಹೆಚ್ಚು ತಣ್ಣನೆಯ ಗಾಳಿ ಗೋಡೆಗಳಿಗೆ ತಾಗಿ, ಇಡೀ ಮನೆ ಥಂಡಿ ಹೊಡೆಯಬಹುದು. ಮುಖ್ಯವಾಗಿ ಸೂರ್ಯ ಚಳಿಗಾಲದಲ್ಲಿ ಉತ್ತರದಿಕ್ಕಿನಲ್ಲಿ ಇರುವುದಿಲ್ಲ. ಹಾಗಾಗಿ ಈ ದಿಕ್ಕಿಗೆ ನಮ್ಮ ಮನೆ ಹೆಚ್ಚು ತೆರೆದು ಕೊಂಡಿರದಂತೆ ನಮ್ಮ ಮನೆಗಳ ವಿನ್ಯಾಸ ಮಾಡುವುದು ಸೂಕ್ತ. ಮಳೆಬೀಳುವಾಗ ಗಾಳಿ ಧೂಳುರಹಿತವಾಗಿ ಇದ್ದರೂ ಸಾಮಾನ್ಯವಾಗಿ ಹಿಂಗಾರಿನ ಅವಧಿಯಲ್ಲಿ ಒಣ ಹಾಗೂ ಧೂಳುತುಂಬಿದ ಥಂಡಿ ಹೊಡೆಯುವ ಗಾಳಿಯ ಕಾಟ ಹೆಚ್ಚು. ಈ ಗಾಳಿ ಹಿರಿಯರಿಗೆ ಹಾಗೂ ಮಕ್ಕಳಿಗೆ ಹೆಚ್ಚು ತ್ರಾಸದಾಯಕ. ಹಾಗಾಗಿ ಮನೆಯ ವಿನ್ಯಾಸ ಮಾಡುವಾಗ ನಮ್ಮ ಮನೆ ಈಶಾನ್ಯ ದಿಕ್ಕಿಗೆ ಹೆಚ್ಚು ತೆರೆದುಕೊಂಡಿರದಂತೆ ಪ್ಲಾನ್ ಮಾಡುವುದು ಮುಖ್ಯ. ನೆಲಹಾಸಿನ ವಿನ್ಯಾಸ
ಸಾಮಾನ್ಯವಾಗಿ ನೆಲಮಹಡಿಗಳು ತೀರಾ ತಣ್ಣಗಿರುವುದು ಗೊತ್ತಿರುವ ವಿಷಯವೇ ಆಗಿದೆ. ಮಳೆಗಾಲದಲ್ಲಿ ನೀರು ಕೆಪಿಲರಿ- ಸಣ್ಣ ಕೊಳವೆಗಳಂತೆ ಆದ ಮಣ್ಣಿನ ಕಣಗಳ ಮಧ್ಯೆ ಉಂಟಾಗುವ ರಂಧ್ರಗಳ ಮೂಲಕ ಭೂಮಿ ಮಟ್ಟದಿಂದ ಮೇಲೆ ಹೀರಿಕೊಳ್ಳುತ್ತವೆ- ಗಿಡಗಳ ಬೇರುಗಳು ಮಣ್ಣಿನಿಂದ ನೀರು ಹೀರಿ ರೆಂಬೆಗಳಿಗೆ ಹರಿಸುವಂತೆಯೇ. ಈ ಪ್ರಕ್ರಿಯೆಯಿಂದ ನೆಲ ಸ್ವಲ್ಪ ತೇವಗೊಂಡರೂ ಇಡೀ ಮನೆ ಥಂಡಿ ಹೊಡೆಯಲು ಶುರುಮಾಡುತ್ತದೆ. ಈ ಹೀರುವಿಕೆ ಜಾಸ್ತಿಯಾದರೆ, ಮನೆಯೊಳಗೆ ಕಾಲು ಜಾರುವುದು, ಬಟ್ಟೆಬರೆ ಬೂಷ್ಟು ಹಿಡಿದು ವಾಸನೆ ಸೂಸುವುದು… ಇದೆಲ್ಲವೂ ಶುರುವಾಗುತ್ತೆ. ಹಾಗಾಗಿ ನಿಮ್ಮ ಮನೆ ಜೌಗುಪ್ರದೇಶದಲ್ಲಿದ್ದರೆ ಇಲ್ಲವೆ ಮಳೆಗಾಲದಲ್ಲಿ ನೀರಿನ ಮಟ್ಟ ಅಂದರೆ ಅಂತರ್‌ಜಲ ಏರುವ ಸಾಧ್ಯತೆ ಇದ್ದರೆ, ಆಗ ಖಂಡಿತವಾಗಿ ನಿಮ್ಮ ಮನೆಯನ್ನು ಕಡೇ ಪಕ್ಷ ಎರಡರಿಂದ ಮೂರು ಅಡಿಯಷ್ಟಾದರೂ ಭೂಮಿಮಟ್ಟದಿಂದ ಮೇಲಕ್ಕೆ ಕಟ್ಟಿ ಕೊಳ್ಳುವುದು ಉತ್ತಮ. ಕೆಲ ಪದಾರ್ಥಗಳು ಕಾಲಿಗೆ ಹೆಚ್ಚು ಬೆಚ್ಚಗಿದ್ದಂತೆ ಅನ್ನಿಸುತ್ತವೆ. ವಾತಾವರಣದ ಒಟ್ಟಾರೆ ತಾಪಮಾನ ಕಡಿಮೆ ಇದ್ದರೂ ಈ ಪದಾರ್ಥಗಳು ಹೆಚ್ಚು ಶಾಖವನ್ನು ನಮ್ಮ ಕಾಲುಗಳಿಂದ ಹೀರಿಕೊಳ್ಳದ ಕಾರಣ ನಮಗೆ ಈ ರೀತಿಯಾಗಿ ಭಾಸವಾಗುತ್ತದೆ. ಮಾರ್ಬಲ್ – ಅಮೃತಶಿಲೆ ಹೆಚ್ಚು ತಣ್ಣಗಿರುವಂತೆ ಭಾಸವಾಗುತ್ತದೆ. ಸೆರಾಮಿಕ್ ಪರವಾಗಿಲ್ಲ. ಗ್ರಾನೈಟ್ ಕೂಡ ಹೆಚ್ಚು ಪಾಲಿಶ್ ಆಗಿದ್ದರೆ ತಣ್ಣಗಿರುತ್ತದೆ. ಮರ ಅತಿ ಹೆಚ್ಚು ಶೀತನಿರೋಧಕ ಗುಣ ಹೊಂದಿರುತ್ತದೆ, ಹಾಗಾಗಿ ಹೆಚ್ಚು ತಣ್ಣಗಿರುವ ಪ್ರದೇಶಗಳಲ್ಲಿ ಮರದ ಫ್ಲೋರಿಂಗ್ ಮಾಡುವುದು ಸಾಮಾನ್ಯ. ಮರದ ನೆಲಹಾಸು ದುಬಾರಿಯಾದ ಕಾರಣ ಇಡೀ ಮನೆಗೆ ಹಾಕುವ ಬದಲು, ನಾವು ನಿದ್ರಿಸುವ ಸ್ಥಳದಲ್ಲಿ ಹಾಕಿದರೆ ಆ ಪ್ರದೇಶ ಬೆಚ್ಚಗಿರುತ್ತದೆ. ಮುಖ್ಯವಾಗಿ ನಾವು ತಡರಾತ್ರಿ ಎದ್ದು ಟಾಯ್ಲೆಟ್‌ಗೆ ಹೋಗುವಾಗ ಇಲ್ಲ ಬೆಳಗ್ಗೆ ಏಳುವಾಗ ಬೆಚ್ಚನೆಯ ಅನುಭವ ನೀಡಿ ದಿನಕ್ಕೊಂದು ಉಲ್ಲಾಸವನ್ನು ನೀಡಬಲ್ಲದು. ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಕ್ಲೆಟೈಲ್ಸ್ – ಜೇಡಿ ಮಣ್ಣಿನ ಸುಟ್ಟ ಬಿಲ್ಲೆಗಳೂ ಕೂಡ ಶೀತನಿರೋಧಕ ಗುಣವನ್ನು ಹೊಂದಿರುತ್ತವೆ. ಆದರೆ ಈ ಮಾದರಿಯ ನೆಲಹಾಸುಗಳ ಮೇಂಟೆನನ್ಸ್ ಸ್ವಲ್ಪ ಕಷ್ಟ ಎಂದು ನಮ್ಮ ಜನರು ಇದನ್ನು ಬಳಸಲು ಹಿಂದೇಟು ಹಾಕುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಈ ಬಿಲ್ಲೆಗಳು ಹೆಚ್ಚು ಸೂಕ್ತ ಎಂದೇ ಹೇಳಬಹುದು. ಇತರೆ ದುಬಾರಿ ವಸ್ತುಗಳಿಗೆ ಹೋಲಿಸಿದರೆ ಕ್ಲೆಟೈಲ್ಸ್ ಹೆಚ್ಚು ಬೆಲೆಯವಲ್ಲ. ಹಣವನ್ನೂ ಉಳಿಸಬಹುದು! ಬೆಚ್ಚನೆಯ ಸೂರಿಗೆ
ಹೇಳಿಕೇಳಿ ಮಳೆಗಾಲದಲ್ಲಿ ಹೆಚ್ಚು ಹೊಡೆತಕ್ಕೆ ಒಳಗಾಗುವುದು ನಮ್ಮ ಮನೆಯ ಸೂರು. ಸಾಮಾನ್ಯ ಆರ್‌ಸಿಸಿ ಸೂರು ನೀರು ನಿರೋಧಕ ಗುಣ ಹೊಂದಿರುವುದಿಲ್ಲ ಎಂದು ಅದರ ಮೇಲೆ ಒಂದು ಪದರ ನೀರು ನಿರೋಧಕ ರಾಸಾಯನಿಕ ಬೆರೆಸಿದ ಕಾಂಕ್ರಿಟ್ ಪದರವನ್ನು ಇಳಿಜಾರಾಗಿ ಹಾಕುವುದರ ಮೂಲಕ ಅದಕ್ಕೆ ನೀರು ನಿರೋಧಕ ಗುಣವನ್ನು ನೀಡಲಾಗುತ್ತದೆ. ಆದರೆ ಈ ಪದರ ಕಾಲಾಂತರದಲ್ಲಿ ಗಾಳಿ, ಮಳೆ ಬಿಸಿಲಿನ ಹೊಡೆತಕ್ಕೆ ಒಳಗಾಗಿ ಬಿರುಕು ಬಿಡುವುದು, ಚಕ್ಕೆ ಏಳುವುದು ಇತ್ಯಾದಿ ತೊಂದರೆಗಳಿಗೆ ಸಿಲುಕಿ ನೀರನ್ನು ಸೋರಲು ಬಿಡಬಹುದು. ಮುಖ್ಯವಾಗಿ ಕಾಂಕ್ರಿಟ್ ಅಷ್ಟೊಂದು ಶೀತನಿರೋಧಕ ಗುಣವನ್ನೂ ಹೊಂದಿರುವುದಿಲ್ಲ. ಹಾಗಾಗಿ ನಿಮಗೆ ಬೆಚ್ಚನೆಯ ಮನೆ ಬೇಕಿದ್ದರೆ, ನಿಮ್ಮ ಸೂರಿನ ಮೇಲೆ ಹೆಚ್ಚುವರಿಯಾಗಿ ಒಂದು ಪದರ ಕ್ಲೆ ಟೈಲ್ಸ್ -ಸುಟ್ಟ ಜೇಡಿಮಣ್ಣಿನ ಬಿಲ್ಲೆಗಳನ್ನು ಹಾಕಿ. ಈ ಮಾದರಿಯ ಬಿಲ್ಲಗಳು ಜಡ ಹಾಗೂ ಉಷ್ಣನಿರೋಧಕ ಗುಣ ಹೊಂದಿರುವುದರ ಜೊತೆಗೆ ಸೂರಿಗೆ ಹೆಚ್ಚುವರಿಯಾಗಿ ನೀರುನಿರೋಧಕ ಗುಣವನ್ನೂ ನೀಡಬಲ್ಲದು. * ಆರ್ಕಿಟೆಕ್ಟ್ ಕೆ. ಜಯರಾಮ್, ಹೆಚ್ಚಿನ ಮಾಹಿತಿಗೆ: 9844132826