ಅಯೋಧ್ಯೆ/ಸಂತ ಕಬೀರ್‌ನಗರ್: “ನಿಮ್ಮ ಮುಂದಿನ ತಲೆಮಾರಿನವರು ರಾಜಕೀಯ ಪ್ರವೇಶ ಮಾಡಿದರೂ, ಸಂವಿಧಾನದ 370ನೇ ವಿಧಿ, ತ್ರಿವಳಿ ತಲಾಖ್ ಮತ್ತೆ ಜಾರಿಗೆ ತರುವುದು ಅಸಾಧ್ಯ. ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಅಯೋಧ್ಯೆಗೆ ಬಂದಿದ್ದ ಕರ ಸೇವಕರ ಮೇಲೆ ಗುಂಡು ಹಾರಿಸಲು ಆದೇಶ ನೀಡಲಾಗಿತ್ತು’
– ಹೀಗೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಯೋಧ್ಯೆ ಮತ್ತು ಸಂತ ಕಬೀರ್‌ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಚುನಾವಣಾ ರ್‍ಯಾಲಿಯಲ್ಲಿ ಗುಡುಗಿದ್ದಾರೆ.
1990ರಲ್ಲಿ ಅಯೋಧ್ಯೆಯ ಕಾರ್ಯಕ್ರಮಕ್ಕೆ ಬಂದವರು ಕರಸೇವಕರ ಮೇಲೆ ಸಮಾಜವಾದಿ ಪಕ್ಷದ ಸರ್ಕಾರ ಯಾವ ಕಾರಣಕ್ಕಾಗಿ ಗುಂಡು ಹಾರಿಸಲು ಆದೇಶ ನೀಡಿತ್ತು. ಅಸುನೀಗಿದ ಕರಸೇವಕರ ಮೃತದೇಹಗಳನ್ನು ಸರಯೂ ನದಿಗೆ ಎಸೆಯಲಾಗಿತ್ತು. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉತ್ತರ ನೀಡಬೇಕು ಎಂದು ಬಯಸುತ್ತಿದ್ದಾರೆ ಎಂದರು. ವರ್ಷಗಳ ಕಾಲ ಶ್ರೀರಾಮ ತಾತ್ಕಾಲಿಕ ದೇಗುಲದಲ್ಲಿಯೇ ಏಕೆ ಇರಬೇಕಾಯಿತು ಎಂಬುದರ ಬಗ್ಗೆಯೂ ಅವರು ಉತ್ತರ ನೀಡಬೇಕು ಎಂದರು.
ಇದನ್ನೂ ಓದಿ:ಗೋವಾ ಕನ್ನಡ ಶಾಲೆಗಳಿಗೆ ಶಾಂತಲಿಂಗ ಸ್ವಾಮೀಜಿ ಪುಸ್ತಕ ದೇಣಿಗೆ
ಎಸ್‌ಪಿ ಮುಖಂಡ ಅಯೋಧ್ಯೆಗೆ ಮತ ಯಾಚನೆಗೆ ಬಂದಾಗ ಈ ಪ್ರಶ್ನೆಯನ್ನು ಅವರಿಗೆ ಕೇಳಿ ಎಂದು ಅಮಿತ್ ಶಾ ಜನರಿಗೆ ಮನವಿ ಮಾಡಿದ್ದಾರೆ.
ಮತ್ತೆ ಜಾರಿ ಅಸಾಧ್ಯ:
ಸಂವಿಧಾನದ 370ನೇ ವಿಧಿ, ತ್ರಿವಳಿ ತಲಾಖ್ ರದ್ದು ಕ್ರಮ ಟೀಕಿಸಿದ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡ ಗೃಹ ಸಚಿವರು “ಅಖಿಲೇಶ್ ಯಾದವ್ ಅವರೇ, ನಿಮ್ಮ ಮುಂದಿನ ತಲೆಮಾರು ರಾಜಕೀಯ ಪ್ರವೇಶ ಮಾಡಿದರೂ, ಅವೆರಡನ್ನು ಮತ್ತೆ ಜಾರಿಗೆ ತರಲು ಸಾಧ್ಯವೇ ಆಗದು’ ಎಂದರು. ತಮ್ಮ ಭಾಷಣದಲ್ಲಿ ಕಾನ್ಪುರದಲ್ಲಿ ಸುಗಂಧ ದ್ರವ್ಯದ ವ್ಯಾಪಾರಿ ಪಿಯೂಷ್ ಜೈನ್ ನಿವಾಸದ ಮೇಲೆ ನಡೆದ ದಾಳಿಯ ವಿಚಾರವನ್ನೂಉಲ್ಲೇಖಿಸಿದರು.