ನಿನ್ನ ಚಿಂತೆಯಲ್ಲಿಯೇ ನಾನು ಕೊರಗುತ್ತಾ ಕುಳಿತಿಲ್ಲ. ಸಾಧನೆಯ ಮೊದಲ ಮೆಟ್ಟಿಲನ್ನು ಏರಿದ್ದಾಗಿದೆ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಅದಕ್ಕೆ ನೀನೇ ಕಾರಣ. ನನ್ನನ್ನು ಕಟೆದು ಮೂರ್ತಿಯನ್ನಾಗಿ ಮಾಡುತ್ತಿರುವ ನಿನಗೆ ಥ್ಯಾಂಕ್ಸ್.
ಏ ಬೆಳಗಾವಿ ಹುಡುಗ,
ಏನಪ್ಪಾ, ಮತ್ತೆ ಯಾಕೆ ಪತ್ರ ಬರೀತಾ ಇದಾಳೆ ಅಂತ ಯೋಚೆ ಮಾಡ್ತಾ ಇದ್ದೀಯ? ನಿಂಗೆ ಗೊತ್ತಿಲ್ವಾ ನಾನು ಮನೆಯಿಂದ ಹೊರಗೇ ಬರದ ಹುಡುಗಿ ಅಂತ. ಮನೆ, ಕಾಲೇಜು, ಓದು ಇದಿಷ್ಟೇ ನನ್ನ ಜೀವನವಾಗಿತ್ತು. ಎಲ್ಲ ವಿಷಯದಲ್ಲೂ ಅನುಸರಿಸಿಕೊಂಡು ಹೋಗುವ ಹುಡುಗಿಯಾಗಿದ್ದೆ. ನೀನು ನನ್ನ ಜೀವನದಲ್ಲಿ ಬಂದ ಮೇಲೆ ನಾನು ಬದುಕುವ ರೀತಿಯೇ ಬದಲಾಯ್ತು. ಯಾವತ್ತೂ, ಯಾವುದಕ್ಕೂ ಹಠ ಹಿಡಿಯದ ನಾನು, ನಿನ್ನ ವಿಷಯದಲ್ಲಿ ಹಠ ಹಿಡಿದು ಕುಳಿತಿದ್ದೇನೆ. ಕಾರಣ, ನಿನ್ನ ಮೇಲಿನ ಪ್ರೀತಿ!
ನೀನಂದ್ರೆ ನಂಗೆ ಒಂದು ರೀತಿಯ ಭಯ ಇತ್ತು. ಅದಕ್ಕೂ ಮಿಗಿಲಾಗಿ ಪ್ರೀತಿ ಇತ್ತು. ನನ್ನ ಹೃದಯದ ಒಡೆಯ ಎಂಬ ಭ್ರಮೆ ಇತ್ತು. ಪ್ರೀತಿಯ ಅರಿವು ಕೂಡ ಇಲ್ಲದ ನನಗೆ, “ಪ್ರೀತಿ ಅಂದ್ರೆ ಏನು?’ ಅಂತ ಕೇಳಿದ್ರೆ, ಕಣ್ಮುಚ್ಚಿ ನಿನ್ನ ಹೆಸರು ಹೇಳುತ್ತಿದ್ದೆ. ಅವತ್ತೂಂದಿನ, “ನಾನು ನಿನ್ನ ಜೀವನದಲ್ಲಿ ಬಂದಿರೋದೇ ನಿನ್ನನ್ನು ಕೊನೆಯವರೆಗೆ ಸಂತೋಷದಿಂದ ಇಡೋಕೆ’ ಅಂತ ನೀನು ಹೇಳಿದ್ದೆ. ಆದರೀಗ, “ನೀನು ಯಾರು?’ ಅಂತ ಕೇಳ್ತಾ ಇದ್ದೀಯಲ್ಲ! ನಾನೆಲ್ಲಿಗೆ ಹೋಗಲಿ ಹೇಳು?
ಈ ಜೀವ, ಜೀವನ ಎಲ್ಲವೂ ನೀನೇ ಎಂದು ನಂಬಿದ್ದ ನನಗೆ, ಹುಚ್ಚಿಯಂತೆ ನಿನ್ನನ್ನು ಪ್ರೀತಿಸುತ್ತಿದ್ದ ನನಗೆ ಪ್ರತಿಯಾಗಿ ಸಿಕ್ಕಿದ್ದೇನು? ಬರೀ ನೋವು. ಆದರೆ, ನಿನ್ನ ಚಿಂತೆಯಲ್ಲಿಯೇ ನಾನು ಕೊರಗುತ್ತಾ ಕುಳಿತಿಲ್ಲ. ಸಾಧನೆಯ ಮೊದಲ ಮೆಟ್ಟಿಲನ್ನು ಏರಿದ್ದಾಗಿದೆ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಅದಕ್ಕೆ ನೀನೇ ಕಾರಣ. ನನ್ನನ್ನು ಕಟೆದು ಮೂರ್ತಿಯನ್ನಾಗಿ ಮಾಡುತ್ತಿರುವ ನಿನಗೆ ಥ್ಯಾಂಕ್ಸ್. ಕೊನೆಯದಾಗಿ ಒಂದು ಮಾತು; ನಾವು ಕಂಡ ಕನಸುಗಳಿಗೆ ನೀರುಣಿಸಿ, ಹಳೆ ಬೇರನ್ನು ಹೊಸದಾಗಿ ಚಿಗುರಿಸುವ ಆಸೆ ನಿನ್ನಲ್ಲಿದ್ದರೆ ಮತ್ತೆ ಮರಳಿ ಬಾ. ನನ್ನ ಹೃದಯದ ಬಾಗಿಲು ನಿನಗಾಗಿ ಯಾವತ್ತೂ ತೆರೆದಿರುತ್ತದೆ. ನಿನ್ನ ಮೇಲಿನ ಪ್ರೀತಿ ನನ್ನಲ್ಲಿ ಇನ್ನೂ ಜೀವಂತವಾಗಿದೆ.
ನಿನ್ನ ಪ್ರೀತಿಯ ನಿರೀಕ್ಷೆಯಲ್ಲಿ
ಅಚ್ಚು