Advertisement

ಆನ್‌ಲೈನ್‌ ವ್ಯವಹಾರಕ್ಕೆ ಬಳಸದ ಕಾರ್ಡ್‌ ಬ್ಲಾಕ್‌!

09:57 AM Jan 17, 2020 | Hari Prasad |

ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಹೊಸ ನಿಯಮ ಪರಿಚಯಿಸಿದೆ. ಸುರಕ್ಷಿತ ವಹಿವಾಟು ನಡೆಸುವ ಸಲುವಾಗಿ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿರುವ ಆರ್‌ಬಿಐ, ಭಾರತದಲ್ಲಿ ಕಾರ್ಡ್‌ ನೀಡುವ ಸಮಯದಲ್ಲಿ ATM ಹಾಗೂ PoSಗಳ ಮೇಲೆ ಕೇವಲ ಡೊಮೆಸ್ಟಿಕ್‌ ಕಾರ್ಡ್‌ ಬಳಕೆಗೆ ಅನುಮತಿ ನೀಡುವಂತೆ ಹೇಳಿದೆ. ಮಾತ್ರವಲ್ಲದೆ ಅಂತಾರಾಷ್ಟ್ರೀಯ ವ್ಯವಹಾರ, ಕಾರ್ಡ್‌ ರಹಿತ ವ್ಯವಹಾರ, ಆನ್‌ಲೈನ್‌ ವ್ಯವಹಾರ ಮತ್ತು ಕಾಂಟಾಕ್ಟ್ ಲೆನ್ಸ್‌, ವ್ಯವಹಾರಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದಿದೆ.

Advertisement

ಯಾಕೆ ಈ ಕ್ರಮ
ದೇಶದಲ್ಲಿ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಬಳಕೆಯಾಗುತ್ತಿರುವ ಸ್ವರೂಪದಲ್ಲಿ ಬದಲಾವಣೆ ತರಲು ಉದ್ಧೇಶಿಸಲಾಗಿದೆ. ಕಾರ್ಡ್‌ ವ್ಯವಹಾರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ಬಳಕೆದಾರ ಸ್ನೇಹಿಯಾಗುವಂತೆ ಮಾಡಲು ಆರ್‌.ಬಿ.ಐ., ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ಹೊಸ ನಿಯಮಗಳನ್ನು ಹೊರಡಿಸಿದೆ.

ವಹಿವಾಟುಗಳಲ್ಲಿ ಬದಲಾವಣೆ
ಕಾರ್ಡ್‌ದಾರರು ದೇಶಿ ಅಥವಾ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್‌ಗಳನ್ನು ಬಳಸದೆ ವಹಿವಾಟು ನಡೆಸಲು, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್‌ ಬಳಸಿ ವಹಿವಾಟು ನಡೆಸಲು ಮತ್ತು ಚಿಪ್‌ ಕಾರ್ಡ್‌ ಅಥವಾ ಕಾಂಟ್ಯಾಕ್ಟ್ ಲೆಸ್ ವಹಿವಾಟುಗಳಲ್ಲಿ ತಮಗೆ ಬೇಕಿರುವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ದೊರೆಯಲಿದೆ.

ಬಳಸದ ಕಾರ್ಡ್‌ ಬ್ಲಾಕ್‌
ಈವರೆಗೆ ಯಾವುದೇ ಆನ್‌ಲೈನ್‌ ವಹಿವಾಟು ನಡೆಸದೆಯೇ ಇದ್ದಲ್ಲಿ ಅಂತಹ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳು ಮಾರ್ಚ್‌ 16ರಿಂದ ಬ್ಲಾಕ್‌ ಆಗಲಿವೆ. ಒಮ್ಮೆ ಬ್ಲಾಕ್‌ ಆದರೆ ಬಳಕೆದಾರರು ತಮ್ಮ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿ ನಗದುರಹಿತ ವಹಿವಾಟು ಪುನರಾರಂಭಿಸಲು ಮತ್ತೆ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬೇಕಾಗಿದೆ.

ಗ್ರಾಹಕನಿಗೆ ಹೊಸ ಆಯ್ಕೆ
ಕಾರ್ಡ್‌ಗಳನ್ನು ಸಕ್ರಿಯಗೊಳಿಸುವ, ಸ್ಥಗಿತಗೊಳಿಸುವ, ಅಂತಾರಾಷ್ಟ್ರೀಯ ವಹಿವಾಟು, ಪಿಓಎಸ್‌, ಎಟಿಎಂ, ಆನ್‌ಲೈನ್‌, ಚಿಪ್‌ ಕಾರ್ಡ್‌ ವಹಿವಾಟುಗಳನ್ನು ನಿರ್ಧರಿಸುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ. ಡಿಜಿಟಲ್‌ ವಹಿವಾಟಿನ ಭದ್ರತೆ ಹೆಚ್ಚಿಸಲು ನೆರವಾಗುವ ದೃಷ್ಟಿಯಲ್ಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಕ್ರಿಯ (ಆನ್‌) ಮತ್ತು ಸ್ಥಗಿತ (ಆಫ್) ಮಾಡುವ ಅವಕಾಶವನ್ನು ಗ್ರಾಹಕನಿಗೆ ನೀಡಲಾಗಿದೆ.

Advertisement

ಗ್ರಾಹಕರಿಗೆ ಮಾಹಿತಿ
ಮೊಬೈಲ್‌ ಅಪ್ಲಿಕೇಷನ್‌, ಇಂಟರ್ನೆಟ್‌ ಬ್ಯಾಂಕಿಂಗ್‌, ಎಟಿಎಂಗಳು, ಐವಿಆರ್‌ ಅಥವ ಇಂಟರಾಕ್ಟೀವ್‌ ವಾಯ್ಸ… ರೆಸ್ಪಾನ್ಸ್‌ ಮೊದಲಾದವುಗಳನ್ನು ನಿವಾರಿಸಲು 24×7 ಸಹಾಯವಾಣಿ ದೊರೆಯಲಿದೆ. ಕಾರ್ಡ್‌ನಲ್ಲಿ ಯಾವುದಾದರೂ ಬದಲಾವಣೆಗಳಾದರೆ ಬಳಕೆದಾರರಿಗೆ ಎಸ್‌ಎಂಎಸ್‌, ಇ-ಮೇಲ್‌ ಮೂಲಕ ಮಾಹಿತಿ ದೊರೆಯಲಿದೆ.

ಮಾರ್ಚ್‌ 16ರಿಂದ ಜಾರಿ
ನೂತನ ನಿಯಮ ಮಾರ್ಚ್‌ 16ರಿಂದ ಜಾರಿಗೆ ಬರಲಿವೆ. ದೇಶದಲ್ಲಿ 80 ಕೋಟಿ ಡೆಬಿಟ್‌ ಕಾರ್ಡ್‌ ಮತ್ತು 5 ಕೋಟಿ ಕ್ರೆಡಿಟ್‌ ಕಾರ್ಡ್‌ಗಳು ಬಳಕೆಯಾಗುತ್ತಿವೆ. ಈ ಎಲ್ಲ ಕಾರ್ಡ್‌ಗಳಿಗೂ ಹೊಸ ನಿಯಮ ಅನ್ವಯವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ನಡೆಯುವ ವಹಿವಾಟಿನ ಪ್ರಮಾಣ ಮತ್ತು ಮೌಲ್ಯ ಹೆಚ್ಚಾಗಿದೆ.

ಆರ್‌.ಬಿ.ಐ. ಹೇಳಿದ್ದೇನು?
ಎಟಿಎಂಗಳು ಮತ್ತು ಪಾಯಿಂಟ್‌ ಆಫ್ ಸೇಲ್‌ ಯಂತ್ರಗಳಲ್ಲಿ (ಪಿಒಎಸ್‌) ಮಾತ್ರ ಬಳಸಲು ಬಳಕೆದಾರರಿಗೆ ಅವಕಾಶ ಕೊಡುವ ರೀತಿಯಲ್ಲಿ ಎಲ್ಲ ರೀತಿಯ ಕಾರ್ಡ್‌ಗಳನ್ನು ರೂಪಿಸಬೇಕು. ಕಾರ್ಡ್‌ ಬಳಸದೆ ವಹಿವಾಟು (ದೇಶಿ ಮತ್ತು ಅಂತಾರಾರಾಷ್ಟ್ರೀಯ), ಕಾರ್ಡ್‌ ಬಳಸಿ ವಹಿವಾಟು, ಮತ್ತು ಚಿಪ್‌ ಕಾರ್ಡ್‌ ಅಥವಾ ಕಾಂಟ್ಯಾಕ್ಟೆಲೆಸ್‌ ವಹಿವಾಟುಗಳಲ್ಲಿ ತಮಗೆ ಬೇಕಿರುವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ನೀಡಬೇಕು ಎಂದು ಆರ್‌ಬಿಐ ಹೇಳಿದೆ.

ಕಾರ್ಡ್‌ ಬ್ಲಾಕ್‌ ಯಾರಿಗೆ
ಭಾರತೀಯ ರಿಸರ್ವ್‌ ಬ್ಯಾಂಕ್‌ನ ಈ ನಿಲುವು ಭಾರತೀಯ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಎಲ್ಲರಿಗೂ ಅನ್ವಯವಾಗಲಿದೆ. ಬ್ಯಾಂಕ್‌ನಿಂದ ಕಾರ್ಡು ಸ್ವೀಕರಿಸಿ ಆನ್‌ಲೈನ್‌ ವ್ಯವಹಾರಗಳಿಗೆ ಬಳಸದೇ ಇದ್ದವರಿಗೆ ಇದು ಅನ್ವಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next