Advertisement

ನಿನ್ನ ಉಸಿರಲಿ ಗೆಲುವಿನ ಹೆಸರಿದೆ…

06:00 AM Aug 29, 2017 | |

ಪ್ರೀತಿಯ ಹುಡುಗನಿಗೆ ಮುಂಜಾವಿನ ಶುಭಾಶಯಗಳು. ಬೆಳಗ್ಗೆ ಬೆಳಗ್ಗೆಯೇ ಪತ್ರ ಬರೆಯುವುದು, ಓದುವುದು, ಅನುರಾಗದಿಂದ ನಿನ್ನ ಕನವರಿಸುತ್ತಾ ಸಂಭ್ರಮಿಸುವುದೇ ನಲಿವು ಕಣೋ. ಸತ್ಯ ಯಾವಾಗಲೂ ಕಹಿ ಅನ್ನುತ್ತಾರೆ. ಆದರೆ, ನಿನಗೆ ಸಿಹಿಯಾದ ಸತ್ಯಗಳನ್ನು ತಿಳಿಸಲಾ? ಮೊದಲ ಬಾರಿ ನೀನು ನನಗೆ ಗೊಂಬೆಯನ್ನು ಉಡುಗೊರೆಯಾಗಿ ನೀಡಿದಾಗ, ನಾನೇನು ಚಿಕ್ಕ ಹುಡುಗಿಯೆ ಗೊಂಬೆ ತೆಗೆದುಕೊಳ್ಳಲು? “ಹೌ ಸಿಲ್ಲಿ!’ ಅನ್ನಿಸ್ತು. ಹೇಳಿದ್ರೆ ಬೇಜಾರಾಗಬಹುದು ಅನ್ನಿಸಿ ಸುಮ್ಮನೆ ನಿರ್ಭಾವುಕಳಾಗಿ ಅದನ್ನು ಮೂಲೆಯಲ್ಲಿ ಇಟ್ಟೆ. ನೋಡ್ತಾ ನೋಡ್ತಾ ಪ್ರೀತಿ, ಹಾಡ್ತಾ ಹಾಡ್ತಾ ರಾಗ ಎನ್ನುವಂತೆ ಆ ಗೊಂಬೆಯನ್ನು ನೋಡುತ್ತಾ ನಿನ್ನಂತೆಯೇ ಇಷ್ಟಪಟ್ಟೆ. 

Advertisement

ಮೊದಮೊದಲು ನೀನು “ನಾವಿಬ್ಬರೂ ಸಾಯುವಷ್ಟು ಪ್ರೀತಿಸಬೇಕು’ ಎಂದಾಗ, ನಾನ್ಯಾಕೆ ಇವನನ್ನು ಸಾಯೋ ಥರ ಪ್ರೀತಿಸ್ಬೇಕು. ಜೀವನ ಕಳೆಯುವ ಇರಾದೆ ಇಲ್ಲದ ಮೇಲೆ ಪ್ರೀತಿಸುವುದೆಲ್ಲಿ? ಒಲವು ಸುರಿಸುವುದೆಲ್ಲಿ ಅಂತ ಸುಮ್ಮನಾಗಿದ್ದೆ. ಈಗ ನೋಡು ಇಲ್ಲಿ… ಮುದ್ದು, ನಿನ್ನ ನೋಡದೇ, ನಿನ್ನ ಬಿಟ್ಟಿರುವುದು ಎಂದರೆ ಸಾಯೋವಷ್ಟು ನೋವಾಗ್ತಿದೆ. ನೀ ಇಲ್ಲವಾದ ಮೇಲೆ ಜೀವನದ ಗೆಲುವೆಲ್ಲಿದೆ ನನಗೆ?

ಅಂದು ನನಗಾಗಿ ಮೂರು ದಿನ ಹಸಿವೆನ್ನದೆ, ಬಿಸಿಲೆನ್ನದೆ, ತನ್ನೆಲ್ಲಾ ಕೆಲಸ ಬಿಟ್ಟು ಆಸ್ಪತ್ರೆಯಲ್ಲಿ ಜತನದಿಂದ ನೋಡಿಕೊಂಡೆಯಲ್ಲ? ಆ ನಿನ್ನ ಬೆಚ್ಚನೆ ಪ್ರೀತಿಗೆ, ಕಾಳಜಿಗೆ ಸಂಪೂರ್ಣ ಸೋತು ಹೋದೆ ಹುಡುಗ. ಈ ಜಗತ್ತಿನಲ್ಲಿ ನಿನ್ನಷ್ಟು ಯಾರೂ ನನ್ನನ್ನು ಪ್ರೀತಿಸಲಾರರು ಎನಿಸಿಬಿಟ್ಟಿತು. ಅಸಲಿಗೆ ನಾನೇನು ಮಹಾಸುಂದರಿ ಅಲ್ಲ. ಆದರೂ ಸಿಂಪಲ್‌ ಸೌಂದರ್ಯವತಿ ಎಂದು ನೀನು ನನ್ನನ್ನು ಆರಾಧಿಸುವೆ. ನನ್ನ ದಡ್ಡತನವನ್ನು ಮುಗ್ಧತೆ ಎಂದು ಸಮಾಧಾನ ಪಡಿಸುವೆ. ಅನಗತ್ಯವಾಗಿ ಕೋಪಗೊಂಡರೆ ಅರಿಯದ ಭಾವ ಎಂದು ನೀನೇ ಕ್ಷಮೆ ಕೇಳುವೆ. 

ಅರ್ಥವಾಗದ ಕಠಿಣ ಸಮಾಜದಲ್ಲಿ ಅನರ್ಥವಾದ ಬದುಕಿಗೆ ಅನಘ ಪ್ರೀತಿ ತಂದವನು ನೀನು. ಹೇಳು, ಇಂಥ ನಿರ್ಮಲ, ನಿಷ್ಕಲ್ಮಶ ಪ್ರೀತಿಗೆ ಸೋಲದೇ ಇರೋದಾದ್ರೂ ಹ್ಯಾಗೆ? ನಿನ್ನೆದೆ ಮೇಲೆ ಪವಡಿಸಿದರೆ ಅದೇ ಸರ್ವಸ್ವವಾದ ತವರು ಮನೆ ನನಗೆ. ನಿನ್ನ ಇರುವಿಕೆಯೊಂದರಿಂದಲೇ ಸುಖದ ಆಪ್ತತೆ ತೃಪ್ತಿ ಸಿಕ್ಕಿ ಬಿಡುತ್ತದೆ. ಸೌಂದರ್ಯದ ಅಪಕ್ವತೆಯ ಮನ ನಮ್ಮ ಮಧ್ಯೆ ಸುಳಿಯದಿರುವುದು, ಹುಡುಗಾಟಿಕೆಯ ಜವಾಬ್ದಾರಿ ನಿನಗಿಲ್ಲದಿರುವುದೇ ನನ್ನ ಪ್ರೀತಿಯನ್ನು ಉಳಿಸಿಕೊಳ್ಳುವನೆಂಬ ಭರವಸೆ. ಇಲ್ಲವಾದರೂ ಇಷ್ಟು ಅಗಾಧವಾಗಿ, ಮುಗಿಲೆತ್ತರದಷ್ಟು ಪ್ರೀತಿಯನ್ನು ಬಯಸುವ ಮನಕ್ಕಿಂತ, ಇಬ್ಬರೂ ಒಂದೇ ಎಂಬ ಭಾವಕ್ಕಿಂತ ಇನ್ನೇನು ಬೇಕು ಈ ಜೀವಕ್ಕೆ?

ಬದುಕುವೆ ನಿನ್ನ ನೆನಪಿನಲ್ಲಿ ಕೊನೆ ಉಸಿರಿರುವವರೆಗೆ, ಐ ಲವ್‌ ಯೂ ಕಣೋ ಹುಡುಗ.

Advertisement

ಇಂತಿ ನಿನ್ನ
ಪಿ ಆರ್‌

Advertisement

Udayavani is now on Telegram. Click here to join our channel and stay updated with the latest news.

Next