ವಿಧಾನಸೌಧ: ‘ನಿಮ್ಮ ಅಜೆಂಡಾ ನನ್ನ ಅಜೆಂಡಾ ಆಗುವುದಿಲ್ಲ. ನನ್ನ ಅಜೆಂಡಾ ವಿಶ್ವಾಸಮತ ಯಾಚನೆ ಚರ್ಚೆ ಸಂಬಂಧ ಕ್ರಿಯಾಲೋಪ ತೆಗೆದಿದ್ದು, ಅದರ ಚರ್ಚೆಗೆ ಅವಕಾಶ ನೀಡಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಸದನಕ್ಕೆ ತಿಳಿಸಿದರು.
ಗುರುವಾರ ಮಧ್ಯಾಹ್ನ ಭೋಜನಾ ನಂತರದ ಕಲಾಪದಲ್ಲಿ ಬಿಜೆಪಿಯ ವಿ.ಸೋಮಣ್ಣ, ಸದನದಲ್ಲಿ ಬೆಳಗ್ಗೆಯಿಂದ ನಾನಾ ವಿಚಾರ ಚರ್ಚೆಯಾಗಿ ಕಾಲಹರಣವಾಗುತ್ತಿದೆ. ಅಜೆಂಡಾ ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದಾಗ ಸಭಾಧ್ಯಕ್ಷರು ಮೇಲ್ಕಂಡ ಉತ್ತರ ನೀಡಿದರು.
ಆಗ ಸೋಮಣ್ಣ, ‘ನಾನು ನಿಮ್ಮನ್ನು 30 ವರ್ಷಗಳಿಂದ ನೋಡಿದ್ದೇನೆ. ನೀವು ನಮ್ಮ ರಮೇಶ್ ಕುಮಾರ್ ಆಗಬೇಕು’ ಎಂದರು. ಇದಕ್ಕೆ ಗದ್ದಲವೆಬ್ಬಿಸಿದ ಕಾಂಗ್ರೆಸ್, ಜೆಡಿಎಸ್ ಶಾಸಕರು, ಬಿಜೆಪಿ ಸ್ಪೀಕರ್ ಆಗಬೇಕು ಎಂದು ಹೇಳುತ್ತೀರಾ ಎಂದು ದೂರಿದರು. ಇದಕ್ಕೆ ದನಿ ಗೂಡಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರ ಮೇಶ್ವರ್, ನಮ್ಮ ರಮೇಶ್ ಕುಮಾರ್ ಆಗಬೇಕು ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ‘ವೈಯಕ್ತಿಕ ಸ್ನೇಹದಿಂದ ಅವರು ಆ ರೀತಿ ಹೇಳಿದ್ದಾರೆ. ನನ್ನ ಸ್ವಭಾವವೇ ಹಾಗೆ. ಒಂದು ಘಳಿಗೆ ಇದ್ದಂತೆ ಮತ್ತೂಂದು ಘಳಿಗೆ ಇರುವುದಿಲ್ಲ. 42 ವರ್ಷ ಸಂಸಾರ ಮಾಡಿದ ಪತ್ನಿಯೇ ಬೆಳಗ್ಗೆ ನಿಮ್ಮ ಮನಸ್ಥಿತಿ ಹೇಗಿದೆ ಎಂದು ಪ್ರಶ್ನಿಸುತ್ತಾರೆ. ನಿಮ್ಮ ರಮೇಶ್ ಕುಮಾರ್ ಆಗಿರುತ್ತೇನೆ. ಸ್ಪೀಕರ್ ಆಗಿ ಬೇರೆ ಆಗಿರುತ್ತೇನೆ’ ಎಂದು ಹೇಳಿದರು.
ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಸದನದಲ್ಲಿ ಏನೇನೋ ಚರ್ಚೆ ಯಾಗುತ್ತಿದೆ. ಕೆಲವೆಲ್ಲಾ ನೀವೇ ಸೃಷ್ಟಿಸಿಕೊಂಡ ನಿರ್ಬಂಧ ಆಗಬಾರದು ಎಂದು ಕೆಣಕಿದರು. ಆಗ ಸಚಿವ ಕೃಷ್ಣ ಬೈರೇಗೌಡ, ಸ್ಪೀಕರ್ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಈ ನಡುವೆ ಸಭಾಧ್ಯಕ್ಷ ರಮೇಶ್ ಕುಮಾರ್, ‘ರಾಜೀನಾಮೆ ನೀಡಿದ 15 ಶಾಸಕರು ನನಗೆ ಪತ್ರವನ್ನೂ ಬರೆದಿರಲಿಲ್ಲ. ಸಮಯವನ್ನೂ ಕೇಳಿರಲಿಲ್ಲ. ಸುಪ್ರೀಂಕೋರ್ಟ್ ಮೊರೆ ಹೋಗಿ ನಂತರ ರಾಜೀನಾಮೆ ಸಲ್ಲಿಸಿದರು’ ಎಂದು ಹೇಳಿದರು. ಇದಕ್ಕೆ ಬೇಸರಗೊಂಡ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ಅದಕ್ಕೂ ಇದಕ್ಕೂ ಏನು ಸಂಬಂಧ. ಇಲ್ಲಿರುವ ವಿಚಾರವೇ ಬೇರೆ, ಚರ್ಚೆಯಾಗುತ್ತಿರುವುದೇ ಬೇರೆ ಎಂದು ಹೇಳಿದರು. ಆಗ ಕಾಂಗ್ರೆಸ್, ಜೆಡಿಎಸ್ ಶಾಸಕರು ಸಿಡಿಮಿಡಿಕೊಂಡು ಟೀಕಿಸಲಾರಂಭಿಸಿದರು.
ಕೋಪಗೊಂಡ ರಮೇಶ್ ಕುಮಾರ್, ‘ನಾನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಿಲ್ಲ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದರು. ಬಳಿಕ ಮಾಧುಸ್ವಾಮಿ ಸೇರಿ ದಂತೆ ಹಲವು ಬಿಜೆಪಿ ಶಾಸಕರು, ವಿಶ್ವಾಸಮತ ಯಾಚನೆ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಆಗ್ರ ಹಿಸಿದರು. ಗದ್ದಲ ಹೆಚ್ಚಾಗುತ್ತಿದ್ದಂತೆ ಸಭಾಧ್ಯಕ್ಷರು ಕಲಾಪವನ್ನು 10 ನಿಮಿಷ ಮುಂದೂಡಿದರು.