Advertisement

ಇಂಟರ್‌ನ್ಯಾಷನಲ್‌ ಬುಕ್ ಆಫ್‌ ರೆಕಾರ್ಡ್ಸ್‌ಗೆ ಸೇರ್ಪಡೆಯಾದ ಚಿಮಿಣಿ ದೀಪದ ಬೆಳಕಿನ ಸಾಧಕಿ

07:54 PM Apr 27, 2022 | Team Udayavani |

ಶಿರ್ವ: ಚಿಮಿಣಿ ದೀಪದ ಬೆಳಕಿನಲ್ಲಿ ಓದಿ ಮಂಗಳೂರು ವಿ.ವಿಯ ಚಿನ್ನದ ಪದಕ ಪಡೆದು ಸಾಧನೆಗೈದ ಸಾಧಕಿ ಅಕ್ಷಿತಾ ಹೆಗ್ಡೆ ಇದೀಗ ಕನ್ನಡಿ ಕೈ ಬರಹದಲ್ಲಿ ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡು ಸಾಧನೆಯ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.

Advertisement

ಡಿವಿಜಿಯವರ ಮಂಕುತಿಮ್ಮನ ಕಗ್ಗದ 13 ಚರಣಗಳನ್ನು ಕನ್ನಡಿ ಬರಹದ ಮೂಲಕ ಬರೆದು ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದಾರೆ.

ಅಕ್ಷಿತಾ ಹೆಗ್ಡೆ ಉತ್ತಮ ಕನ್ನಡ ಕೈಬರಹವನ್ನು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಮಾರ್ಚ್‌ ತಿಂಗಳಲ್ಲಿ ಕಳುಹಿಸಿದ್ದರು. ಅವರಿಂದ ಕನ್ನಡಿ ಬರಹ ಬರೆದು ಕಳುಹಿಸಲು ಬಂದ ಸಲಹೆಯಂತೆ ಕೇವಲ 3-4 ದಿನಗಳಲ್ಲಿ ಕನ್ನಡಿ ಬರಹ ಕಲಿತು ಅದರ ವೀಡಿಯೋ ಮಾಡಿ ಎಪ್ರಿಲ್‌ ಮೊದಲ ವಾರದಲ್ಲಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮತ್ತು ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಕಳುಹಿಸಿದ್ದರು. ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್‌ನವರು ಎ. 10 ರಂದು ವೀಡಿಯೋ ದಾಖಲಿಸಿ ಅಕ್ಷಿತಾ ಹೆಗ್ಡೆ ಅವರ ಕನ್ನಡಿ ಬರಹವನ್ನು ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳಿಸಿದ್ದಾರೆ.

ನಿಟ್ಟೆಯ ಜ|ಕೆ.ಎಸ್‌ ಹೆಗ್ಡೆ ಇನ್ಸ್ಟಿಟ್ಯೂಟ್‌ ಆಫ್‌ ಮೆನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದಿರುವ ಅಕ್ಷಿತಾ ಹೆಗ್ಡೆ ಪ್ರಸ್ತುತ ಅದೇ ಸಂಸ್ಥೆಯಲ್ಲಿ ರಿಸರ್ಚ್‌ ಅಸಿಸ್ಟೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಉದಯವಾಣಿ ವರದಿ :

ಅಸಹಾಯಕ ಪರಿಸ್ಥಿತಿಯ ನಡುವೆಯೂ ಸೂರಿಲ್ಲದೆ ಚಿಮಿಣಿ ದೀಪದ ಬೆಳಕಿನಲ್ಲಿ ಓದಿ ಸಾಧನೆಗೈದ ಅಕ್ಷಿತಾ ಹೆಗ್ಡೆಯ ವರದಿ 2018ರ ಜು. 24ರಂದು ಉದಯವಾಣಿ ಮುಖಪುಟದಲ್ಲಿ ಪ್ರಕಟಗೊಂಡಿತ್ತು. ಸ್ಥಳೀಯ ಮತ್ತು ದೇಶ ವಿದೇಶಗಳ ದಾನಿಗಳ ಸಹಕಾರದೊಂದಿಗೆ ಸುಮಾರು 12.93 ಲ.ರೂ. ವೆಚ್ಚದಲ್ಲಿ ಜಾಗದ ಸಹಿತ‌ ಮನೆ ಬೋರ್‌ವೆಲ್‌ ಮತ್ತು ಆವರಣ ಗೋಡೆ ನಿರ್ಮಾಣಗೊಂಡು 2021ರ ಜ. 14 ರಂದು ಮನೆ ಹಸ್ತಾಂತರಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next