ಲಂಡನ್ : ಭಾರತ ಮೂಲದ ಮಾಜಿ ಯುಕೆ ಚಾನ್ಸೆಲರ್ ರಿಷಿ ಸುನಕ್ ಸೋಮವಾರ (ಅಕ್ಟೋಬರ್ 24) ಯುಕೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮಾಜಿ ಪ್ರಧಾನಿ ಲಿಜ್ ಟ್ರಸ್ ಸುನಕ್ ಅವರ ರಾಜೀನಾಮೆಯ ಬಳಿಕ ಯುಕೆಯ ಪ್ರಧಾನಿ ಹುದ್ದೆ ಮೊದಲ ಭಾರತೀಯ ಮೂಲದ ಸುನಕ್ ಗೆ ಒಲಿದು ಬಂದಿದೆ. ಪಿಎಂ ಸುನಕ್ ಈಗ ಆಧುನಿಕ ಇತಿಹಾಸದಲ್ಲಿ 42 ವರ್ಷ ವಯಸ್ಸಿನ ಯುಕೆಯ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಯುಕೆಯ ಸೌತಾಂಪ್ಟನ್‌ನಲ್ಲಿ ಭಾರತೀಯ ಕುಟುಂಬದಲ್ಲಿ ಜನಿಸಿದ ರಿಷಿ ಸುನಕ್ ಅವರ ತಂದೆ ಯಶವೀರ್ ರಾಷ್ಟ್ರೀಯ ಆರೋಗ್ಯ ಸೇವೆ (NHS) ವೈದ್ಯ ಮತ್ತು ತಾಯಿ ಉಷಾ ಸುನಕ್ ಫಾರ್ಮಸಿಸ್ಟ್ ಆಗಿದ್ದರು. ಪೋಷಕರು 1960 ರ ವೇಳೆ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಬಂದ ಪಂಜಾಬಿ ಭಾರತೀಯ ಮೂಲದವರು.
ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಸುನಕ್ ಇನ್ಫೋಸಿಸ್ ಸ್ಥಾಪಿಸಿದ ಬಿಲಿಯನೇರ್ ಉದ್ಯಮಿ ಎನ್.ಆರ್. ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿ ಕೃಷ್ಣಾ ಮತ್ತು ಅನೌಷ್ಕಾ ಎಂಬ ಇಬ್ಬರು ಪುತ್ರಿಯರನ್ನು ಪಡೆದಿದ್ದಾರೆ.
ಏಪ್ರಿಲ್‌ನಲ್ಲಿ, ಅಕ್ಷತಾ ಅವರ ವಾಸಸ್ಥಳವಲ್ಲದ ಸ್ಥಿತಿ ಮತ್ತು ಆಪಾದಿತ ತೆರಿಗೆ ವಂಚನೆಯ ವರದಿಗಳು ಕೋಲಾಹಲವನ್ನು ಸೃಷ್ಟಿಸಿದ್ದವು. ರಿಷಿ ಸುನಕ್ ಅವರು ಎಲ್ಲಾ ತೆರಿಗೆಗಳನ್ನು ಪಾವತಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಅಕ್ಷತಾ ಮೂರ್ತಿ ಅವರು “ತಮ್ಮ ಎಲ್ಲಾ ಯುಕೆ ಆದಾಯದ ಮೇಲೆ ಯುಕೆ ತೆರಿಗೆಯನ್ನು ಯಾವಾಗಲೂ ಪಾವತಿಸುತ್ತಾರೆ ಮತ್ತು ಮುಂದುವರಿಸುತ್ತಾರೆ” ಎಂದು ಅವರ ವಕ್ತಾರರು ಹೇಳಿ ಸ್ಪಷ್ಟನೆ ನೀಡಿದ್ದರು.
ಬ್ರಿಟನ್ ನಲ್ಲಿ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಬ್ರಿಟನ್ ಪ್ರಧಾನಮಂತ್ರಿ ಹುದ್ದೆಗೆ ಅಧಿಕಾರಕ್ಕೆ ಬಂದ 45 ದಿನದ ಒಳಗೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು. ಲಿಜ್ ಟ್ರಸ್ ಅವರ ಆಡಳಿತದ ಬಗ್ಗೆ ಅವರ ಕನ್ಸರ್ವೇಟಿವ್ ಪಕ್ಷದಲ್ಲಿ ಅಸಮಾಧಾನದ ಅಲೆಗಳು ಎದ್ದಿದ್ದವು. ಹಲವು ರಾಜಕೀಯ ಬೆಳವಣಿಗೆಗಳ ಬಳಿಕ ಈಗ ಪ್ರಧಾನಿ ಹುದ್ದೆ ಮಾಜಿ ವಿತ್ತ ಸಚಿವರಾಗಿದ್ದ ಸುನಕ್ ಅವರಿಗೆ ಒಲಿದಿದೆ.
ಪ್ರಧಾನಿ ಹುದ್ದೆಗೆ ಆಯ್ಕೆಯಾಗುವಲ್ಲಿ ರಿಷಿ ಸುನಕ್ ಅವರಿಗೆ 193 ಸಂಸದರು ಬೆಂಬಲ ಸೂಚಿಸಿದ್ದರು. ಪೆನ್ನಿ ಮೊರ್ಡಾಂಟ್ ಅವರಿಗೆ ಕೇವಲ 26 ಸಂಸದರು ಬೆಂಬಲ ಸೂಚಿಸಿದ್ದರು ಎಂದು ಬಿಬಿಸಿ ವರದಿ ಮಾಡಿದೆ.