Advertisement
ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಅವರು ದೂರು ನೀಡಿದರೆ, ಅವರ ತಾಯಿ ಲಕ್ಷ್ಮೀದೇವಮ್ಮ ಶ್ರುತಿ ಕ್ಷಮೆಗೆ ಆಗ್ರಹಿಸಿದ್ದಾರೆ. ಅತ್ತ ಬಿ.ಸರೋಜಾದೇವಿ, ಸುಧಾರಾಣಿ, ತಾರಾ, ಮುನಿರತ್ನ ಅವರೆಲ್ಲರೂ ಸರ್ಜಾ ಅವರ ಬೆನ್ನಿಗೆ ನಿಂತಿದ್ದಾರೆ. ನಟಿ ನೀತು, ಸಂಯುಕ್ತಾ ಹೆಗಡೆ, ಮೇಘನಾ ಗಾಂವ್ಕರ್, ಸೋನು, ಶ್ರದ್ಧಾ ಶ್ರೀನಾಥ್ ಸೇರಿದಂತೆ ಇತರರು ಶ್ರುತಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಆ ಕುರಿತು ಯಾರ್ಯಾರು ಏನೆಲ್ಲಾ ಹೇಳಿದರೆಂಬುದರ ಕುರಿತು ಒಂದು ರೌಂಡಪ್…
ಕನ್ನಡ ಚಿತ್ರರಂಗದ ಮೇರುನಟರಾಗಿದ್ದ ಡಾ.ರಾಜಕುಮಾರ್ ಅವರೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಗೌರವಿಸುತ್ತಿದ್ದರು. ಆದರೆ, ಇಂದಿನ ನಟ,ನಟಿಯರಿಗೆ ಆ ಸಂಯಮವೇ ಇಲ್ಲ. ಚಿತ್ರರಂಗಕ್ಕೆ ಸಂಬಂಧಿಸಿದ ವಿಷಯಗಳೇನೇ ಇದ್ದರೂ, ಅದು ಮಂಡಳಿಯಲ್ಲಿ ಚರ್ಚೆಯಾಗಬೇಕು, ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು, ಬೇರೆ ವೇದಿಕೆಯಲ್ಲಿ ಚರ್ಚಿಸಿದರೆ, ಅಂತಹವರನ್ನು ಮಂಡಳಿ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ.
-ಎಸ್.ಎ.ಚಿನ್ನೇಗೌಡ, ಅಧ್ಯಕ್ಷರು, ಫಿಲ್ಮ್ ಚೇಂಬರ್ ಸತ್ಯ ಸಾಬೀತಾಗಲಿ, ಇಲ್ಲವೇ ಕಾಲಿಗೆ ಬಿದ್ದು ಕ್ಷಮೆ ಕೇಳಲಿ
“ಸಿನಿಮಾ ಮುಗಿದ ಮೇಲೂ ಒಂದು ದಿನ ಶೃತಿ ನಮ್ಮ ಮನೆಗೆ ಬಂದಿದ್ದರು. ಅಷ್ಟೆಲ್ಲಾ ಆಗಿದ್ದರೆ, ನಮ್ಮ ಮನೆಗೆ ಬಂದಿದ್ದು ಯಾಕೆ..? ಎರಡು ವರ್ಷದಿಂದ ಏನೋ ಪ್ಲಾನ್ ಮಾಡಿದ್ದರು, ಅದು ಆಗದಿದ್ದಾಗ ಈಗ ನನ್ನ ಮಗನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ನನಗನಿಸುತ್ತಿದೆ. ತೇಜೋವಧೆ ಮಾಡುವ ಇಂಥ ಸುಳ್ಳಗಳಿಂದ ಆಕೆಯನ್ನು ಯಾರು ಬಿಟ್ಟರೂ, ನಾನು ಮಾತ್ರ ಬಿಡುವುದಿಲ್ಲ. ಸತ್ಯ ಸಾಬೀತಾಗಬೇಕು ಇಲ್ಲವೇ, ನನ್ನ ಮಗನ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಬೇಕು’
-ಲಕ್ಷ್ಮೀ ದೇವಮ್ಮ, ಅರ್ಜುನ್ ಸರ್ಜಾ ತಾಯಿ.
Related Articles
“ಸುಮಾರು 30 ವರ್ಷಗಳಿಂದ ಸರ್ಜಾ ಕುಟುಂಬವನ್ನು ನೋಡುತ್ತಿದ್ದೇನೆ. ಅವರದ್ದು ಅತ್ಯಂತ ಸುಸಂಸ್ಕೃತ ಕುಟುಂಬ. ನಮ್ಮ ಕುಟುಂಬಕ್ಕೂ ಅವರು ತುಂಬ ಆತ್ಮೀಯರು. ಇನ್ನೂ ಅರ್ಜುನ್ ಸರ್ಜಾ ಅವರ ಸ್ವಭಾವವನ್ನು ನಾನು ಹತ್ತಿರದಿಂದ ಬಲ್ಲೆ. ಅವರು ಹೆಣ್ಣು ಮಕ್ಕಳಿಗೆ ಎಷ್ಟೊಂದು ಗೌರವ ಕೊಡುತ್ತಾರೆ ಎನ್ನುವುದು ನನಗೆ ಗೊತ್ತು. ಇಂಥಹ ವ್ಯಕ್ತಿ ಬಗ್ಗೆ ಈ ರೀತಿ ಮಾತಾಡುವುದು ತಪ್ಪು’
-ಬಿ. ಸರೋಜಾ ದೇವಿ, ಹಿರಿಯ ನಟಿ
Advertisement
ಆರೋಪ ಎಷ್ಟು ನಿಜವೆಂಬುದು ಗೊತ್ತಿಲ್ಲ. “ನಾನು ಅರ್ಜುನ್ ಸರ್ಜಾ ಅವರನ್ನು ಹತ್ತಿರದಿಂದ ಬಲ್ಲೆ. ಅವರೊಂದಿಗೆ ಅಭಿನಯಿಸಿದ್ದೇನೆ. ನನಗೆಂದೂ ಅವರಿಂದ ಯಾವುದೇ ಕೆಟ್ಟ ಅನುಭವವಾಗಿಲ್ಲ. ನನಗೆ ಗೊತ್ತಿರುವಂತೆ ಅವರೊಬ್ಬ ಸಜ್ಜನ ವ್ಯಕ್ತಿ. ಇದೇ ಮೊದಲ ಬಾರಿಗೆ ಅವರ ಮೇಲೆ ಇಂಥದ್ದೊಂದು ಆರೋಪ ಬಂದಿದೆ. ಇದನ್ನ ನೋಡಿಕೊಳ್ಳೋಕೆ ಚಿತ್ರರಂಗದಲ್ಲಿ ಹಿರಿಯರಿದ್ದಾರೆ. ಅವರು ಇಂಥಹ ಆರೋಪಗಳಿಂದ ಮುಕ್ತರಾಗುತ್ತಾರೆ ಎಂಬ ವಿಶ್ವಾಸವಿದೆ’
-ಸುಧಾರಾಣಿ, ನಟಿ ಮಿಟೂ ದುರುಪಯೋಗವಾಗಬಾರದು
“ಅರ್ಜುನ್ ಸರ್ಜಾ ಅವರ ಜೊತೆ ನಾನು “ಪ್ರೇಮಾಗ್ನಿ’ ಚಿತ್ರದಲ್ಲಿ ನಟಿಸಿದ್ದೆ. ಅವರು ಸಭ್ಯ, ಶಿಸ್ತಿನ ಮನುಷ್ಯ. ಅವರು ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ವೈಯಕ್ತಿಕವಾಗಿ ನನಗೆ ಯಾರ ಕಡೆಯಿಂದಲೂ ಕೆಟ್ಟ ಅನುಭವವಾಗಿಲ್ಲ. ಆದರೆ ಈಗ ಇಂಥ ಆರೋಪಗಳು ಹೆಚ್ಚಾಗುತ್ತಿರುವುದು ಚಿತ್ರರಂಗದ ದುರಂತ. ಶೃತಿ ಹರಿಹರನ್ ಬಗ್ಗೆ ನನಗೆ ಹೆಚ್ಚೇನು ಗೊತ್ತಿಲ್ಲ. ನಾನು ಅವರೊಂದಿಗೆ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಮಿಟೂ ಅಭಿಯಾನ ಒಳ್ಳೆಯದು, ಅದು ದುರುಪಯೋಗವಾಗಬಾರದು’
-ತಾರಾ ಅನುರಾಧ, ನಟಿ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ
“ಅರ್ಜುನ್ ಸರ್ಜಾ ವಿರುದ್ದ ಮಾಡಿರುವ ಆರೋಪವನ್ನು ನಿರ್ಮಾಪಕರ ಸಂಘ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಏಳು ದಿನಗಳ ಒಳಗೆ ಸೂಕ್ತ, ಸಾಕ್ಷ್ಯಾಧಾರಗಳು, ದಾಖಲೆಗಳ ಜೊತೆಗೆ ಸ್ಪಷ್ಟವಾಗಿ ಲಿಖೀತ ರೂಪದಲ್ಲಿ ಉತ್ತರಿಸುವಂತೆ ಶೃತಿ ಹರಿಹರನ್ ಅವರಿಗೆ ಪತ್ರ ಬರೆಯಲಾಗಿದೆ. ಅವರ ಆರೋಪ ನಿಜವಾಗಿದ್ದಲ್ಲಿ ಸ್ಪಷ್ಟವಾಗಿ ಉತ್ತರಿಸುತ್ತಾರೆ. ಒಂದು ವೇಳೆ ಅವರಿಂದ ಉತ್ತರ ಬರದಿದ್ದಲ್ಲಿ, ಆರೋಪ ಸುಳ್ಳು ಎಂದು ಭಾವಿಸಿ, ಮುಂದಿನ ಹಂತದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸುತ್ತೇವೆ’
-ಮುನಿರತ್ನ, ನಿರ್ಮಾಪಕರ ಸಂಘದ ಅಧ್ಯಕ್ಷ ಸರ್ಜಾ ಬಳಿ ಹಣ, ಅಧಿಕಾರವಿದೆ
“ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಹೆದರುವ ಸಂದರ್ಭದಲ್ಲಿ ಶೃತಿ ಹರಿಹರನ್ ಧೈರ್ಯವಾಗಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ನಾವು ನಟಿಯರಾದ ಕಾರಣ ನಮ್ಮನ್ನು ಟೀಕಿಸುತ್ತಾರೆ, ಟ್ರೋಲ್ ಮಾಡುತ್ತಾರೆ. ಸರ್ಜಾ ಕುಟುಂಬಕ್ಕೆ ಒಂದು ಇತಿಹಾಸವಿದೆ. ಅವರ ಬಳಿ ಹಣ, ಅಧಿಕಾರ, ಚಿತ್ರರಂಗದ ಬೆಂಬಲವಿದೆ. ಹಾಗಾಗಿ ಎಲ್ಲರೂ ಶೃತಿ ಹರಿಹರನ್ ಮೇಲೆ ಸಿಟ್ಟಾಗಿದ್ದಾರೆ. ಇಂಥ ಸಮಯದಲ್ಲಿ ನಾವೆಲ್ಲರೂ ಅವರಿಗೆ ಬೆಂಬಲವಾಗಿ ನೀಡಬೇಕು’
-ಸಂಯುಕ್ತ ಹೆಗಡೆ ನಾನೂ ಇಂತಹ ಸಮಸ್ಯೆ ಎದುರಿಸಿದ್ದೇನೆ
“ಮಿಟೂ ಚಳುವಳಿ ಕನ್ನಡ ಚಿತ್ರರಂಗದಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾನು ಸಂಗೀತ ಭಟ್, ಶೃತಿ ಹರಿಹರನ್ ತಮಗಾಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ. ನನ್ನ 13 ವರ್ಷಗಳ ಸಿನಿಮಾ ಕರಿಯರ್‌ನಲ್ಲಿ ನಾನು ಕೂಡ ಇಂಥ ಸಂದರ್ಭಗಳನ್ನು ಎದುರಿಸಿದ್ದೇನೆ. ಇಷ್ಟವಾಗದೆ ಇದ್ದರೂ, ಕೆಲವು ಸೀನ್‌ಗಳನ್ನು ನನ್ನಿಂದ ಮಾಡಿಸಿದ್ದಾರೆ. ಇದು ವೃತ್ತಿಪರತೆ ಅಲ್ಲ’
-ನೀತು ಶೆಟ್ಟಿ, ನಟಿ ಈಗಾದರೂ ಧ್ವನಿ ಎತ್ತಬೇಕು
“ಈಗಲಾದರೂ ನಾವು ಇಂಥಹ ಕ್ರೌರ್ಯದ ವಿರುದ್ದ ಧ್ವನಿ ಎತ್ತಬೇಕು. ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವವರಿಗೆ ಇಂಥ ಅನುಭವಗಳು ಆಗದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರು ವೃತ್ತಿಪರತೆಯಿಂದ, ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುವಂತಹ ವಾತಾವರಣ ನಿರ್ಮಾಣವಾಗಬೇಕು. ಹೆಣ್ಣಿನ ಶೋಷಣೆಯ ಬಗ್ಗೆ ಮಾತನಾಡುವವರು ಈಗ ಇದರ ಬಗ್ಗೆ ಮಾತನಾಡಬೇಕು. ಮಿ ಟೂ ಗೆ ಅಭಿಯಾನಕ್ಕೆ ಬೆಂಬಲವಾಗಿ ನಿಲ್ಲಬೇಕು’
-ಶ್ರದ್ಧಾ ಶ್ರೀನಾಥ್, ನಟಿ