Advertisement

“ಯುವ ಸಾಹಿತಿಗಳಿಗೆ ಸಾಮಾಜಿಕ ಕಳಕಳಿ ಬೇಕು’

06:00 AM Jun 24, 2018 | |

ಮಂಗಳೂರು: ಯುವ ಸಾಹಿತಿಗಳಿಗೆ ಸಾಮಾಜಿಕ ಕಳಕಳಿ ಬೇಕು. ಅದನ್ನು ತಮ್ಮ ಲೇಖನ, ಕವನಗಳಲ್ಲಿ ವ್ಯಕ್ತಪಡಿಸಬೇಕು ಎನ್ನುತ್ತಾರೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2018ರ ಯುವ ಸಾಹಿತ್ಯ ಪ್ರಶಸ್ತಿ ವಿಜೇತ ಕವಿ ವಿಲ್ಮಾ ಬಂಟ್ವಾಳ. ವಿಲ್ಮಾ ಅವರ “ಮುಖ್ಡಿ’ ಕೊಂಕಣಿ ಕವನ ಸಂಕಲನಕಕ್ಕೆ ಪ್ರಶಸ್ತಿಯನ್ನು ಶುಕ್ರವಾರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ್ದು, ಇದು ಕರ್ನಾಟಕಕ್ಕೆ ಸಿಕ್ಕಿದ ಮೊದಲ ಪ್ರಶಸ್ತಿ. ಈ ಹಿನ್ನೆಲೆಯಲ್ಲಿ ಅವರು ಉದಯವಾಣಿಯೊಂದಿಗೆ ಮಾತನಾಡಿದ್ದಾರೆ. 

Advertisement

ವಿಲ್ಮಾ ಪರಿಚಯ
ವಿಲ್ಮಾ ಲವಿನಾ ಡಿ’ಸೋಜಾ ಅವರು ಬಂಟ್ವಾಳದವರು. ವಲೇರಿಯನ್‌ ಮತ್ತು ಲಿಲ್ಲಿ ಡಿ’ಸೋಜಾ ಅವರ ಪುತ್ರಿ. ಮೊಡಂಕಾಪು ಚರ್ಚ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಬಳಿಕ ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಗಣಿತದಲ್ಲಿ ಎಂಎಸ್ಸಿ ಓದಿದ್ದರು. ಬೆಂಜನಪದವು ಕೆನರಾ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಅವರು ಎಂಜಿನಿಯರ್‌ ವಿಜಯ್‌ ಮೋನಿಸ್‌ ಜತೆ ವಿವಾಹವಾದ ಬಳಿಕ ಬೆಂಗಳೂರಿನಲ್ಲಿದ್ದಾರೆ. ಸದ್ಯ ಬೆಂಗಳೂರಿನ ಸೈಂಟ್‌ ಜೋಸೆಫ್‌ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅವರು ಎರಡು ತಿಂಗಳ ಹಿಂದಷ್ಟೇ ಗಂಡು ಮಗುವಿನ ತಾಯಿಯಾಗಿದ್ದಾರೆ. ಸದ್ಯ ತವರು ಮನೆಯಲ್ಲಿದ್ದಾರೆ.

ಕೃತಿ ಪರಿಚಯ 
“ಮುಖ್ಡಿ’ ಕವನ ಸಂಕಲನದಲ್ಲಿ 50ರಷ್ಟು ಕೊಂಕಣಿ ಕವನಗಳಿವೆ. ಅದರಲ್ಲಿ ಒಂದು ಕವನದ ಹೆಸರು “ಮುಖ್ಡಿ’. ಅಂದರೆ ಕನ್ನಡದಲ್ಲಿ “ಮುಖವಾಡ’ ಎಂದರ್ಥ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ದುಷ್ಪರಿಣಾಮಗಳಿಂದ ಆಗಿರುವ ಅನಾಹುತವನ್ನು ವಿವರಿಸಲು “ಮುಖವಾಡ’ವನ್ನು ಒಂದು ರೂಪಕವಾಗಿ ಇಲ್ಲಿ ಬಳಸಲಾಗಿದೆ. 

“ಮುಖ್ಡಿ’ ಕವನ ಸಂಕಲನದ ಬಗ್ಗೆ ಏನು ಹೇಳುವಿರಿ?
ಇದು ನನ್ನ ಚೊಚ್ಚಲ ಹಾಗೂ ಏಕಮಾತ್ರ ಕವನ ಸಂಕಲನ. ನಾನು ಕನ್ನಡ ಲಿಪಿಯಲ್ಲಿ ಬರೆಯುತ್ತೇನೆ. ಗೋವಾ ಕೊಂಕಣಿ ಅಕಾಡೆಮಿ ಈ ಚೊಚ್ಚಲ ಕೊಂಕಣಿ ಕೃತಿ ಪ್ರಕಟನೆಗೆ ಪ್ರೋತ್ಸಾಹ ನೀಡಿದೆ. ನನ್ನ ಕವನಗಳನ್ನು ಕವಿ ಮೆಲ್ವಿನ್‌ ರೊಡ್ರಿಗಸ್‌ ಅವರು ದೇವನಾಗರಿಗೆ ಲಿಪ್ಯಂತರ ಮಾಡಿ ಅಕಾಡೆಮಿಗೆ ಕಳುಹಿಸಿದ್ದರು. ಬಳಿಕ 2014ರಲ್ಲಿ ಅದನ್ನು ಪ್ರಕಟಿಸಿತ್ತು. ಅದೇ ವರ್ಷ ಗೋವಾದ ಕಾಣಕೋಣದಲ್ಲಿ ನಡೆದ ಯುವ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ  ಈ ಕೃತಿ ಅನಾವರಣಗೊಂಡಿತ್ತು. 

ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟಿದ್ದು ಹೇಗೆ?
ಬಾಲ್ಯದಲ್ಲಿ  ಮನೋರಂಜನೆಗೆ ರೇಡಿಯೋ ಮತ್ತು ಪುಸ್ತಕಗಳು ಮಾತ್ರ ಲಭ್ಯವಾಗುತ್ತಿತ್ತು. ಕೊಂಕಣಿ ಪತ್ರಿಕೆಗಳನ್ನು ತಂದೆ ಮನೆಗೆ ತರಿಸುತ್ತಿದ್ದರು. ಹೀಗಾಗಿ ಹೆಚ್ಚು ಓದುತ್ತಿದ್ದೆ. ಕನ್ನಡ ಮಾಧ್ಯಮದಲ್ಲಿ ಕಲಿತಿದ್ದರಿಂದ ಕನ್ನಡ ಮತ್ತು ಕೊಂಕಣಿ ಪುಸ್ತಕಗಳನ್ನು ಓದುತ್ತಿದ್ದಂತೆ ಸಾಹಿತ್ಯದಲ್ಲಿ ಅಭಿರುಚಿ ಹುಟ್ಟಿತು. 8ನೇ ತರಗತಿಯಲ್ಲಿದ್ದಾಗಲೇ ಕವನ, ಲೇಖನ ಬರೆಯಲು ಆರಂಭಿಸಿದ್ದೆ. ಕೊಂಕಣಿಯಲ್ಲಿ ಹೆಚ್ಚು ಬರೆದಿದ್ದೇನೆ. 50ಕ್ಕೂ ಮಿಕ್ಕಿ ಕವನಗಳನ್ನು ಮತ್ತು ಅನೇಕ ಲೇಖನಗಳನ್ನು ಬರೆದಿದ್ದೇನೆ. 

Advertisement

ಸಾಹಿತ್ಯದಲ್ಲಿ ಆಸಕ್ತಿ ಇದ್ದರೂ ಗಣಿತದತ್ತ ಒಲವು ಹೇಗೆ ಹುಟ್ಟಿತು?
ಸಾಹಿತ್ಯದ ಜತೆಗೆ ಗಣಿತದಲ್ಲಿಯೂ ಆಸಕ್ತಿ ಇತ್ತು. ಹಾಗಾಗಿ ಗಣಿತದಲ್ಲಿ ಎಂಎಸ್ಸಿ ಓದಿದೆ. ಈಗ ಗಣಿತದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದೇನೆ. ಇತ್ತೀಚೆಗೆ ಇಂಗ್ಲಿಷ್‌ ಮತ್ತು ಕನ್ನಡದ ಕೆಲವು ಆಯ್ದ ಕಥೆಗಳನ್ನು ಕೊಂಕಣಿಗೆ ಅನುವಾದಿಸಲು ಆರಂಭಿಸಿದ್ದೇನೆ. 

ಹೆಚ್ಚು ಆಸಕ್ತಿ ವಿಷಯ ಯಾವುದು?
ಮಹಿಳಾ ಸಶಕ್ತೀಕರಣ ಮತ್ತು ಸಾಮಾಜಿಕ ಕಳಕಳಿಯ ವಿಷಯಗಳ ಬಗ್ಗೆ ನನಗೆ ಹೆಚ್ಚು ಆಸಕ್ತಿ. ನನ್ನ ಬರವಣಿಗೆಯೂ ಈ ವಿಷಯಕ್ಕೆ ಕೇಂದ್ರೀಕೃತವಾಗಿವೆ.  

ಕುಟುಂಬ ಸದಸ್ಯರಿಂದ ಪ್ರೋತ್ಸಾಹ ಹೇಗಿದೆ?
ಪತಿ ನನ್ನ ಬರವಣಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅಕಾಡೆಮಿ ಪ್ರಶಸ್ತಿ ಬಂದಿರುವುದು ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಉತ್ಸಾಹದಿಂದ ಮುಂದುವರಿಯಲು ಪ್ರೇರಣೆ ಒದಗಿಸಿದೆ. 

ಯುವ ಲೇಖಕರಿಗೆ ಸಂದೇಶವೇನು? 
ಯುವ ಲೇಖಕರು ಸಮಾಜದ ಆಗುಹೋಗುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ತಮ್ಮ ಸಾಹಿತ್ಯದ ಮೂಲಕ ಸಾಮಾಜಿಕ ಜವಾಬ್ದಾರಿ ಪಾಲಿಸಬೇಕು. 

ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next