ಬೆಂಗಳೂರು: ಚಾಕು ತೋರಿಸಿ, ಈಶಾನ್ಯ ಭಾರತ ಮೂಲದ ಇಬ್ಬರು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಪುತ್ರ ಸೇರಿ ಮೂವರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಕೇಶ್ (22), ಸೂರ್ಯ, ಮಣಿಕಂಠ ಎಂ.ಬಂಧಿತರು. ಮೂವರು ಆರೋಪಿಗಳು ಸಂತ್ರಸ್ಥ ಯುವತಿಯರಿಗೆ ಚಾಕುತೋರಿಸಿ, ಬೆದರಿಸಿ ಅತ್ಯಾಚಾರ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಬ್ ಚಾಲಕನಾಗಿರುವ ಆರೋಪಿ ಮಣಿಕಂಠನ ತಂದೆ ಕೆಎಸ್‌ಆರ್‌ಪಿಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೂರ್ಯ, ಚಿತ್ರರಂಗದಲ್ಲಿ ಕಲಾವಿದನಾಗಿದ್ದಾನೆ. ಮತ್ತೂಬ್ಬ ಆರೋಪಿ ರಾಕೇಶ್ ಗೋಬಿ ಮಂಚೂರಿ ಅಂಗಡಿ ನಡೆಸುತ್ತಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೋರಮಂಗಲದ ಬಾಡಿಗೆ ಮನೆಯಲ್ಲಿ ವಾಸವಿರುವ ಸಂತ್ರಸ್ತ ಯುವತಿಯರು, ಮೇ 12ರಂದು ರಾತ್ರಿ ಆನ್‌ಲೈನ್ ಮೂಲಕ ಊಟ ಆರ್ಡರ್ ಮಾಡಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಬಾಗಿಲು ಬಡಿದ ಮೂವರು ಆರೋಪಿಗಳು, ಬಾಗಿಲು ತೆಗೆಯುತ್ತಿದ್ದಂತೆ ಒಳಗಡೆ ನುಗ್ಗಿದ್ದರು. ಬಳಿಕ ಚಾಕು ತೋರಿಸಿ ಬಟೆಬಿಚ್ಚಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ವಿಚಾರ ಯಾರಿಗಾದರೂ ಹೇಳಿದರೆ ಪ್ರಾಣ ತೆಗೆಯುವುದಾಗಿ ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದರು.
ಸಾಮೂಹಿಕ ಅತ್ಯಾಚಾರ ಘಟನೆಯಿಂದ ಆಘಾತಗೊಂಡಿದ್ದ ಯುವತಿಯರಿಬ್ಬರು ಮೇ 17ರಂದು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸಂತ್ರಸ್ತೆ, ಆರೋಪಿಗೆ ಹಳೆಯ ಪರಿಚಯ: ಸಂತ್ರಸ್ತ ಯುವತಿಯರ ಪೈಕಿ ದೂರು ನೀಡಿರುವ ಯುವತಿ ಮೇಕಪ್ ಆರ್ಟಿಸ್ಟ್ ಆಗಿದ್ದು, ಮತ್ತೂಬ್ಬರು ಎಂಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡಿದ್ದಾರೆ. ದೂರುದಾರೆಗೂ ಹಾಗೂ ಮೊದಲ ಆರೋಪಿ ರಾಕೇಶ್‌ಗೆ ಈ ಹಿಂದೆ ಪರಿಚಯವಿದ್ದು, ಹಲವು ಬಾರಿ ಭೇಟಿಯಾಗಿದ್ದರು. ಮೇ 12ರಂದು ರಾತ್ರಿ, ಆರೋಪಿಗಳು ಕುಡಿದ ಅಮಲಿನಲ್ಲಿ ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.