ಹುಣಸೂರು: ಹೆಣ್ಣುಮಕ್ಕಳಿಗೆ ಶಿಕ್ಷಣವೇ ಅಸ್ತ್ರವಾಗಿದ್ದು, ಇದನ್ನರಿತು ಪರಿಪೂರ್ಣ ವಿದ್ಯಾರ್ಥಿಯಾಗಿ ಹೊರಹೊಮ್ಮಿದಾಗ ಮಾತ್ರ ಜೀವನ ಸುಖಮಯವಾಗಿರಲಿದೆ ಎಂದು ತುಮಕೂರಿನ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲೆ ಡಾ.ನಾಗಲಕ್ಷ್ಮೀ ಸಲಹೆ ನೀಡಿದರು.
ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಇನ್ನರ್‌ವೀಲ್ ಸಹಯೋಗದೊಂದಿಗೆ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಪದವಿ ಪಡೆಯುತ್ತಿದ್ದಂತೆ ವಿವಾಹ ಬಂಧನಕ್ಕೆ ಒಳಗಾಗಬಾರದು. ಬದಲಿಗೆ ಉನ್ನತ ಶಿಕ್ಷಣ ಪಡೆದು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಅಂದುಕೊಂಡ ಗುರಿ ಮುಟ್ಟಿದ ನಂತರವೇ ಮದುವೆ ಆಲೋಚನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಹೆಣ್ಣಿನ ಎಲ್ಲಾ ಬಂಧನವನ್ನು ತೊಡೆದು ಹಾಕುವ ಶಕ್ತಿ ಶಿಕ್ಷಣಕ್ಕಿದೆ. ಹೆಣ್ಣಿಗೆ ಶಿಕ್ಷಣ ತುಂಬಾ ಅನಿವಾರ್ಯ. ಆದರೆ, ಸಾಧಿಸುವ ಗುರಿ ದೂರವಿರುತ್ತದೆ. ಎಲ್ಲವನ್ನು ಎಚ್ಚರಿಕೆಯಿಂದ ಮೆಟ್ಟಿ ಗುರಿ ತಲುಪಬೇಕು. ಹೆಣ್ಣು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಬೇಕು. ಯಾರಿಗೂ ಗುಲಾಮರಾಗಿ ಬದುಕಬಾರದು. ಮಾನವೀಯತೆ ಮತ್ತು ಆತ್ಮಶಕ್ತಿಯಿಂದ ಬದುಕಬೇಕು. ನಾಯಕತ್ವ ಪಡೆದುಕೊಳ್ಳಬೇಕು ಎಂದರು.
ಸಮಾಜದಲ್ಲಿ ಹೆಣ್ಣು ಹೆಣ್ಣಾಗಿ ಪರಿಚಯಿಸಿಕೊಳ್ಳಲು ಹೆಮ್ಮೆ ಪಡಬೇಕು.. ಹೆಣ್ಣು ಅಂದರೆ ಬಾಧ್ಯತೆ, ಗಂಡು ಎಂದರೆ ಆಸ್ತಿ ಎಂಬ ಮನೋಭಾವ ತೊಲಗಬೇಕು. ಇಂತಹ ಮನಸ್ಥಿತಿಯಿಂದ ಇಂದು ಹೆಣ್ಣು ಭ್ರೂಣ ಹತ್ಯೆ ಹೆಚ್ಚುತ್ತಿದೆ. ಆಧುನಿಕ ಯುಗದಲ್ಲಿ ಬಾಲ್ಯವಿವಾಹ, ಭ್ರೂಣಹತ್ಯೆ, ಲೈಂಗಿಕ ಕಿರುಕುಳ, ದೌರ್ಜನ್ಯ ನಡೆಯುತ್ತಿದ್ದು, ಇಂತಹ ಸಮಸ್ಯೆಗಳಿಂದ ಮಹಿಳೆಯರು ಮುಕ್ತರಾಗಬೇಕಿದೆ. ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಪೋಷಕರು ಹೆಣ್ಣು ಮಕ್ಕಳನ್ನು ಸ್ವತಂತ್ರವಾಗಿ ಬೆಳೆಸಿ, ಸಮಾನತೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಜ್ಞಾನಪ್ರಕಾಶ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಬಿ.ಎಂ.ನಾಗರಾಜ್, ಇನ್ನರ್‌ವೀಲ್‌ನ ಅಧ್ಯಕ್ಷೆ ಡಾ.ರಾಜೇಶ್ವರಿ, ಐಕ್ಯೂಎಸಿ ಸಂಚಾಲಕ ಪುಟ್ಟಶೆಟ್ಟಿ, ಸಹ ಪ್ರಾಧ್ಯಾಪಕರಾದ ಡಾ.ನಂಜುಂಡಸ್ವಾಮಿ, ಕರುಣಕರ್, ದೀಪುಕುಮಾರ್, ಡಾ.ಕಲಾಶ್ರೀ, ಪ್ರತಿಭಾಜನ್ನಿಫರ್‌ಅಂದ್ರಾದೆ, ಭಾರತಿ, ಅಂಬುಜಾಕ್ಷಿ, ದೀಪಾ, ಕೆ.ಸಿ.ವಿಶ್ವನಾಥ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಬಾಸ್ಕರ್, ಇನ್ನರ್‌ವೀಲ್‌ನ ಪದಾಕಾರಿಗಳು ಹಾಜರಿದ್ದರು. ಇದೇ ವೇಳೆ ವಿದ್ಯಾರ್ಥಿನಿಯರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.