ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಮೂಡಬೆಟ್ಟು ಕಂಬಳಕಟ್ಟ ಬಳಿ ಸೋಮವಾರ ರಾತ್ರಿ ಯುವತಿ ಸಾವಿಗೆ ಕಾರಣವಾಗಿದ್ದ ಅಪಘಾತ ಪ್ರಕರಣಕ್ಕೆ ತಿರುವು ದೊರಕಿದ್ದು, ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಸ್ಕೂಟಿ ಸವಾರ ಕಾಪು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳೂರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಲ್ಯಾಬ್ ಟೆಕ್ನಾಲಜಿಸ್ಟ್ ಆಗಿದ್ದ ಮಂಗಳೂರು ಜೆಪ್ಪು ಪಟ್ಲ ನಿವಾಸಿ ರೋಶನಿ ಡಿ’ಸೋಜಾ (26) ಅವರು ನಿಶ್ಚಿತಾರ್ಥವಾಗಿದ್ದ ಜಾಯಲ್ ಡಿ’ಕೋಸ್ತಾ ಅವರೊಂದಿಗೆ ಕಲ್ಮಾಡಿ ಚರ್ಚ್‌ಗೆ ಭೇಟಿ ನೀಡಿ ಸ್ಕೂಟಿಯಲ್ಲಿ ಉಡುಪಿಯಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರೆ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು.
ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸೊಂದು ಒಮ್ಮೆಲೆ ರಸ್ತೆಯ ಎಡದಿಂದ ಬಲಕ್ಕೆ ಚಲಿಸಿದ್ದು, ಅದು ಸ್ಕೂಟಿಯಲ್ಲಿ ಸಹ ಸವಾರೆಯಾಗಿದ್ದ ರೋಶ್ನಿ ಅವರ ಕಾಲಿಗೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಬಸ್ ಕಾಲಿಗೆ ತಾಗಿದ ಪರಿಣಾಮ ಯುವತಿ ಅಲುಗಾಡಿದ್ದು, ಸ್ಕೂಟಿ ಸವಾರನ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ರಸ್ತೆಗೆ ಉರುಳಿ ಬಿದ್ದಿದೆ. ಈ ಸಂದರ್ಭ ರಸ್ತೆಗೆ ಉರುಳಿ ಬಿದ್ದ ಸಹ ಸವಾರೆ ಗಂಭೀರ ಗಾಯಗೊಂಡು ಮತಪಟ್ಟಿರುವುದಾಗಿ ಸ್ಕೂಟಿ ಸವಾರ ಜಾಯಲ್ ಡಿ’ ಕೋಸ್ತಾ ಕಾಪು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸ್ಕೂಟಿ ಸವಾರ ಜಾಯಲ್ ಡಿ’ಕೋಸ್ತಾ ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.