Advertisement

Manipal ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: 20 ಗಂಟೆಯೊಳಗೆ ಆರೋಪಿ ಬಂಧನ

07:11 PM Aug 29, 2024 | Team Udayavani |

ಉಡುಪಿ: ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯ ಪೊಲೀಸರು ಆರೋಪಿ ಭಟ್ಕಳದ ನಿವಾಸಿ ಮೊಹಮ್ಮದ್‌ ಶುರೈಮ್‌(22)ನನ್ನು 20 ಗಂಟೆಯೊಳಗೆ ಕೇವಲ ಫೋಟೊದ ಆಧಾರದಲ್ಲಿ ಬಂಧಿಸಿದ್ದಾರೆ.

Advertisement

ಘಟನೆ ವಿವರ
ಉಡುಪಿಯ ಗುಡ್ಡೆಯಂಗಡಿಯ ನಿವಾಸಿ ಬೆಂಗಳೂರಿನಲ್ಲಿ ಐಟಿಯಲ್ಲಿ ಉದ್ಯೋಗ ಮಾಡಿಕೊಂಡಿರುವ ಯುವತಿ ಆ. 24ಕ್ಕೆ ರಾತ್ರಿ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಹೋಗುವ ರೈಲು ಹತ್ತಿದ್ದರು.

ಆ. 25ರಂದು ಬೆಳಗ್ಗೆ 11ಕ್ಕೆ ರೈಲು ಮೂಲ್ಕಿ ದಾಟಿದ ಬಳಿಕ ಆಕೆಗೆ ಆರೋಪಿ ಪದೇಪದೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಬಳಿಕ ಗಲಾಟೆ ನಡೆದು ಕ್ಷಮೆ ಯಾಚಿಸಿದ್ದ. ಕೂಡಲೇ ಯುವತಿ ಆತನ ಚಿತ್ರ ತೆಗೆದು ರೈಲ್ವೇಗೆ ಆ್ಯಪ್‌ ಮೂಲಕ ದೂರು ನೀಡಿದ್ದರು. ಅನಂತರ ಉಡುಪಿ ರೈಲು ನಿಲ್ದಾಣಕ್ಕೆ ಬಂದ ಬಳಿಕ ರೈಲ್ವೇ ಪೊಲೀಸರಿಗೂ ದೂರು ನೀಡಿದ್ದರು.

ರೈಲ್ವೇ ಪೊಲೀಸರು ಇದನ್ನು ಮಣಿಪಾಲ ಠಾಣೆಗೆ ಹಸ್ತಾಂತರಿಸಿದರು. ಈ ನಡುವೆ ರೈಲ್ವೇ ಆ್ಯಪ್‌ ಮೂಲಕ ದೂರು ದಾಖಲಾಗುತ್ತಿದ್ದಂತೆ ಮೇಲಾಧಿಕಾರಿಗಳು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸರು ಕಾರ್ಯಾಚರಣೆಗೆ ಇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌ ಅವರ ನಿರ್ದೇಶನದಂತೆ ಮಣಿಪಾಲ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ದೇವರಾಜ್‌ ಟಿ.ವಿ., ಪಿಎಸ್‌ಐ ರಾಘವೇಂದ್ರ, ಎಎಸ್‌ಐ ವಿವೇಕ್‌, ಸಿಬಂದಿ ಇಮ್ರಾನ್‌, ರಘು, ವಿದ್ಯಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಯುವತಿಯ ಈ ನಡೆಯಿಂದ ಆರೋಪಿಯನ್ನು ಪೊಲೀಸರು ಶೀಘ್ರದಲ್ಲಿ ಬಂಧಿಸಲು ಸಾಧ್ಯವಾಗಿದೆ.

Advertisement

ರೋಚಕ ಕಾರ್ಯಾಚರಣೆ
ಯುವತಿ ತೆಗೆದ ಆರೋಪಿಯ ಫೋಟೋ ಮಾತ್ರ ಪೊಲೀಸರಿಗಿದ್ದ ಕುರುಹಾಗಿತ್ತು. ಅದರಂತೆ ಪೊಲೀಸರು ಆ ದಿನ ಆ ರೈಲಿನ ಬೋಗಿಯಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಲಿಸ್ಟ್‌ ಪಡೆದುಕೊಂಡಿದ್ದರು. ಒಟ್ಟು 1,200 ಮಂದಿ ಲಿಸ್ಟ್‌ನಲ್ಲಿದ್ದರು. ಆತ ತಲೆಗೆ ಟೋಪಿ ಹಾಕಿಕೊಂಡ ಕಾರಣ ಮುಸಲ್ಮಾನ ವ್ಯಕ್ತಿ ಎಂದುಕೊಂಡು ಪೊಲೀಸರು ಆ ರೈಲಿನಲ್ಲಿದ್ದ ಮುಸಲ್ಮಾನ ವ್ಯಕ್ತಿಗಳ ಲಿಸ್ಟ್‌ ಪಡೆದುಕೊಂಡರು. ಬಳಿಕ ಸಿಎನ್‌ಆರ್‌ ನಂಬರ್‌ಗಳನ್ನು ಪಡೆದಾಗ ಅದರಲ್ಲಿದ್ದ ಎಲ್ಲರ ಮೊಬೈಲ್‌ ಸಂಖ್ಯೆ ಪೊಲೀಸರಿಗೆ ಲಭ್ಯವಾಯಿತು. ಈ ನಡುವೆ ಪೊಲೀಸರು ವಿವಿಧ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಚಲನವಲನ ಕಂಡು ಹಿಡಿದರು. ಆತ ಭಟ್ಕಳದ ನಿವಾಸಿ ಎಂದು ಪೊಲೀಸರಿಗೆ ಗೊತ್ತಾಯಿತು. ಅದರಂತೆ ಭಟ್ಕಳಕ್ಕೆ ತೆರಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯು ಭಟ್ಕಳದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಮೈಸೂರಿನ ಜಮಾತ್‌ನಲ್ಲಿ 10 ದಿನಗಳ ಕೋರ್ಸ್‌ ಮುಗಿಸಿಕೊಂಡು ಊರಿಗೆ ಬರುತ್ತಿದ್ದ ಎನ್ನಲಾಗಿದೆ. ಪ್ರಸ್ತುತ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next